ಕೇಂದ್ರ ಸರ್ಕಾರ 2025 ರ ಬಜೆಟ್ ಮಂಡನೆಯ ದಿನವೇ ಎಲ್ ಪಿಜಿ (LPG) ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ. ಹೌದು ತೈಲಕಂಪನಿಗಳು ಎಲ್‌ಪಿಜಿ ಗ್ಯಾಸ್ ಲಿಂಡರ್ ಬೆಲೆ ಇಳಿಕೆ ಮಾಡಿದೆ. ಈ ಹೊಸ ಪರಿಷ್ಕೃತ ದರಗಳು ಇಂದಿನಿಂದ ಅಂದರೆ ಫೆ. 1 ರಿಂದಲೇ ಜಾರಿಗೆ ಬರಲಿದೆ. ಪ್ರತಿ ತಿಂಗಳ ಮೊದಲ ದಿನ ತೈಲಕಂಪನಿಗಳು ಹೆಚ್ಚಾಗಿ ಅಡುಗೆ ಅನಿಲ ದರ ಪರಿಷ್ಕರಿಸುತ್ತವೆ. ಕೆಲವೊಮ್ಮೆ ಬೆಲೆಗಳು ಏರಿಕೆಯಾದರೆ, ಕೆಲವೊಮ್ಮೆ ಇಳಿಕೆಯಾಗುತ್ತವೆ. ಆದರೆ ಈ ಬಾರಿ ತೈಲ ಕಂಪನಿಗಳು ಜನತೆಗೆ ಸಿಹಿಸುದ್ದಿ ನೀಡಿದೆ. ಐಒಸಿಎಲ್‌ನ ಅಂಕಿಅಂಶಗಳ ಪ್ರಕಾರ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಸತತ ಎರಡನೇ ತಿಂಗಳು ಆಗಿದೆ. ಕಳೆದ ಕೆಲ ವರ್ಷಗಳಿಂದ ದಿನನಿತ್ಯದ ವಸ್ತುಗಳ ಬಳಕೆಯ ಗಣನೀಯ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಈ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ರಿಲೀಫ್ ನೀಡಲಿದೆ
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿದ ಹಿನ್ನಲೆಯಲ್ಲಿ19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಇಳಿಕೆಯಾಗಿದೆ. ಶನಿವಾರದಿಂದ ಜಾರಿಗೆ ಬರುವಂತೆ 7 ರೂ. ಕಡಿತಗೊಳಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿನ ಕಡಿತವನ್ನು ಸೇರಿಸಿದರೆ, ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್‌ಗಳು ಈಗ 20 ರೂ.ಗಿಂತ ಹೆಚ್ಚು ಅಗ್ಗವಾಗಿ ಲಭ್ಯವಿವೆ. ಆದರೆ, ದೇಶೀಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಮಾರ್ಚ್ 2024 ರಿಂದ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿವೆ. ಈ ಹಿನ್ನೆಲೆಯಲ್ಲಿ, ದೇಶದಲ್ಲಿ ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪ್ರಸ್ತುತ ಬೆಲೆಗಳೇನು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.

ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1 ರಿಂದ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,804 ರಿಂದ 1,797 ಕ್ಕೆ ಇಳಿದಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ 4 ರೂ.ಗಳಷ್ಟು ಇಳಿಕೆಯಾಗಿ, ಬೆಲೆ 1,907 ರೂ.ಗೆ ಇಳಿದಿದೆ.
ಇತರ ನಗರಗಳಾದ ಮುಂಬೈ ಮತ್ತು ಚೆನ್ನೈನಲ್ಲಿ ಕೂಡ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 6.5 ರೂಪಾಯಿಗಳಷ್ಟು ಇಳಿಕೆಯಾಗಿದೆ. ಈಗ ಮುಂಬೈನಲ್ಲಿ ಬೆಲೆ 1,749.50 ರೂ. ಮತ್ತು ಚೆನ್ನೈನಲ್ಲಿ 1,959.50 ರೂ. ಆಗಿದೆ. ಕಳೆದ ಎರಡು ತಿಂಗಳುಗಳಲ್ಲಿನ ಒಟ್ಟಾರೆ ಇಳಿಕೆಯನ್ನು ಗಮನಿಸಿದರೆ, ದೆಹಲಿ ಮತ್ತು ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು 21.5 ರೂ.ಗಳಷ್ಟು ಅಗ್ಗವಾಗಿವೆ. ಹಾಗೆಯೇ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಕ್ರಮವಾಗಿ 20 ಮತ್ತು 21 ರೂ.ಗಳಷ್ಟು ಇಳಿಕೆ ಕಂಡುಬಂದಿದೆ.
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ
ಫೆಬ್ರವರಿಯಲ್ಲೂ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ, 14 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಹಿಂದಿನ ಬೆಲೆಯಾದ 803 ರೂ.ಗಳಲ್ಲೇ ಲಭ್ಯವಿದೆ. ಲಕ್ನೋದಲ್ಲಿ ಈ ಸಿಲಿಂಡರ್ ಬೆಲೆ 840.50 ರೂ. ಆಗಿದೆ. ಇದಲ್ಲದೇ ಪಾಟ್ನಾ ಬಗ್ಗೆ ಮಾತನಾಡುವುದಾದರೆ ಇಲ್ಲಿ ಗೃಹೋಪಯೋಗಿ ಸಿಲಿಂಡರ್ ಹಳೆಯ ದರದಲ್ಲಿ ಅಂದರೆ 892.50 ರೂ.ಗೆ ದೊರೆಯಲಿದೆ. ಮುಂಬೈನಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಅನ್ನು 802.50 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಇದರ ಬೆಲೆ 818.50 ರೂ.ಗಳಷ್ಟಿದೆ. ಕೋಲ್ಕತ್ತಾದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 829 ರೂ. ಆಗಿದೆ.


Click it and Unblock the Notifications