ಇಡೀ ದೇಶ ಮಹಾ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧಗೊಳ್ಳುತ್ತಿದೆ. ಸಾಂಪ್ರದಾಯಿಕ ಹಿಂದೂ ಹಬ್ಬಗಳಲ್ಲಿ ಒಂದಾದ ಶಿವರಾತ್ರಿ, ಶಿವಭಕ್ತರ ಅಚ್ಚು-ಮೆಚ್ಚಿನ ಹಬ್ಬ. ಶಿವನ ಆರಾಧನೆಯಲ್ಲಿ ಯಾವುದೇ ಹಿಂಸಾತ್ಮಕ ಚಟುವಟಿಕೆಗಳು ನಡೆಯಬಾರದು ಎಂದು, ಬಿಬಿಎಂಪಿ ಇಂದು (ಫೆಬ್ರವರಿ 24) ಮಹತ್ವದ ಸುತ್ತೋಲೆ ಹೊರಡಿಸಿದೆ. ಅದೇನೆಂದರೆ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸವಧೆ ಮಾಡುವುದು ಹಾಗೂ ಪ್ರಮುಖವಾಗಿ ಮಾಂಸ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹಬ್ಬದ ದಿನ ಮಾಂಸ ಮಳಿಗೆಗಳು ಬಂದ್ ಆಗಲಿದ್ದು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುತ್ತೋಲೆಯಲ್ಲಿ, ಫೆಬ್ರವರಿ 26, 2025 ರಂದು ನಗರ ವ್ಯಾಪ್ತಿಯ ಎಲ್ಲ ಮಾಂಸ ಮಳಿಗೆಗಳು ಮತ್ತು ಕಸಾಯಿ ಖಾನೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎನ್ನಲಾಗಿದೆ. ಈ ನಿರ್ಬಂಧ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಕೂಡ ಜಾರಿಯಲ್ಲಿದ್ದು, ಧಾರ್ಮಿಕ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಹಾ ಶಿವರಾತ್ರಿ ಹಬ್ಬ ಅತ್ಯಂತ ಸಡಗರದಿಂದ ನಡೆಯುತ್ತಿದೆ. ನಗರದಲ್ಲಿ ಹಲವು ಐತಿಹಾಸಿಕ ಪ್ರಸಿದ್ಧ ಶಿವನ ದೇವಾಲಯಗಳಿದ್ದು, ಲಕ್ಷಾಂತರ ಮಂದಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನಗರದಲ್ಲಿರುವ ಶಿವನ ದೇವಾಲಯಗಳು ಶಿವರಾತ್ರಿ ದಿನ ತುಂಬಿ ತುಳುಕುತ್ತಿರುತ್ತವೆ. ಹೀಗಾಗಿ ಶೀವನ ಆರಾಧನೆಯಲ್ಲಿ ಮೊಳಗಿರುವ ಭಕ್ತರು ಯಾವುದೇ ರೀತಿಯ ಮಾಂಸ ನೋಡುವದಾಗಲಿ, ಅದರ ದುರ್ವಾಸನೆಯನ್ನು ಸಹಿಸಲಿಕ್ಕಾಗಲಿ ಇಷ್ಟ ಪಡುವುದಿಲ್ಲ. ಮತ್ತು ಶಿವನ ದಿನವಾದ ಶಿವರಾತ್ರಿಯಂದು ಅದೊಂದು ಹಿಂಸಾತ್ಮಕ ಸಂಗತಿಯೇ ಸರಿ. ಹೀಗಾಗಿ ಬಿಬಿಎಂಪಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಅಲ್ಲದೇ ಬೆಂಗಳೂರು ನಿವಾಸಿಗಳು ಶಿವರಾತ್ರಿ ಹಬ್ಬದ ದಿನ, ಉಪವಾಸ ಆಚರಿಸುತ್ತಾರೆ. ನಗರದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಹಾಗಾದರೆ ಬೆಂಗಳೂರಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ನೋಡುವುದಾದರೆ,
1. ಗವಿ ಗಂಗಾಧರೇಶ್ವರ ದೇವಸ್ಥಾನ- ಇದು ಬೆಂಗಳೂರಿನ ಗವಿಪುರಂನಲ್ಲಿದೆ. ಪೌರಾಣಿಕ ಗುಹಾ ದೇವಸ್ಥಾನವಾಗಿದ್ದು ಶಿವರಾತ್ರಿಯಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ.
2. ಕಾಡು ಮಲ್ಲೇಶ್ವರ ದೇವಸ್ಥಾನ- ಇದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ಪ್ರಸಿದ್ಧ ದೇವಾಲಯ. ಇಲ್ಲಿ ಕೂಡ ಸಾವಿರಾರು ಭಕ್ತರು ನೆರೆದು ಶಿವನ ಆರಾಧನೆಯಲ್ಲಿ ಮೊಳಗುತ್ತಾರೆ. ವಿಶೇಷವಾಗಿ ಶಿವರಾತ್ರಿ ದಿನ ಇಲ್ಲಿ ಕಾಲಿಡಲೂ ಕೂಡ ಸ್ಥಳವಿರುವುದಿಲ್ಲ.
3. ಶಿವೋಹಂ ಶಿವ ದೇವಸ್ಥಾನ- ಇದು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ದೇವಾಲಯ. ಇಲ್ಲಿ ಸುಮಾರು 65 ಅಡಿ ಎತ್ತರದ ಶಿವನ ಪ್ರತಿಮೆ ಇದೆ. ಈ ದೇವಾಲಯದಲ್ಲಿ ವಿಶೇಷವಾಗಿ ರುದ್ರಾಭಿಷೇಕ ಮತ್ತು ಭಜನೆಗಳು ನಡೆಸಲಾಗುತ್ತವೆ.
4. ದೊಡ್ಡ ಬಸವನಗುಡಿ- ಇದು ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಪ್ರಸಿದ್ಧ ದೇವಾಲಯ. ಇಲ್ಲಿ ಬಸವನ ಮೂರ್ತಿ ಇರುವುದರಿಂದ ಶಿವರಾತ್ರಿ ದಿನ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.
5. ಸೋಮೇಶ್ವರ ದೇವಸ್ಥಾನ- ಇದು ಬೆಂಗಳೂರಿನ ಉಲ್ಸೂರಿನಲ್ಲಿ ಇದೆ. ಅಲ್ಲದೇ ಅತ್ಯಂತ ಹಳೆಯ ಶಿವನ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಹೀಗಾಗಿ ಮಹಾ ಶಿವರಾತ್ರಿ ದಿನ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಇನ್ನು ಈ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುವುದಲ್ಲದೇ ಜಾಗರಣೆ ಮತ್ತು ಭಕ್ತಿಪೂರ್ವಕವಾದ ಕಾರ್ಯಕ್ರಮಗಳು ನಡೆಯುತ್ತವೆ. ಶಿವನ ಭಜನೆ, ಧ್ಯಾನ, ರುದ್ರಾಭಿಷೇಕ,ರೂದ್ರಾಭಿಷೇಕ, ಮಹಾ ಮೃತ್ಯುಂಜಯ ಜಪ ಮತ್ತು ಲಿಂಗಾಭಿಷೇಕ ವಿಶೇಷವಾಗಿ ಹಮ್ಮಿಕೊಳ್ಳಲಾಗುತ್ತದೆ. ಹೀಗಾಗಿಯೇ ಬೆಂಗಳೂರು ನಗರದಲ್ಲಿ ಮಾಂಸದ ಅಂಗಡಿಗಳು ಮುಚ್ಚಲು ಆದೇಶ ಹೊರಡಿಸಲಾಗಿದೆ.


Click it and Unblock the Notifications