ಹೊಸ ವರ್ಷಕ್ಕೆ ಇನ್ನು ಒಂದು ತಿಂಗಳು ಬಾಕಿ ಉಳಿದಿದ್ದು, ಒಂದೆಡೆ ನೂತನ ವರ್ಷವನ್ನು ಸ್ವಾಗತಿಸಲು ವಿಶ್ವದೆಲ್ಲೆಡೆಯಿಂದ ಭರದಿಂದ ತಯಾರಿ ನಡೆಯುತ್ತಿದೆ. ಇತ್ತ ದೇಶದಲ್ಲಿ ಕೂಡ ಹೊಸ ವರ್ಷಾಚರಣೆಗೆ ಸಿದ್ದತೆ ನಡೆಯುತ್ತಿದ್ದರೆ ಮತ್ತೊಂದೆಡೆ ಮುಂದಿನ ತಿಂಗಳ ಅಂದರೆ ಡಿಸೆಂಬರ್ ಮೊದಲ ದಿನದಂದೇ ಹಲವು ವಿಚಾರಗಳಲ್ಲಿ ಬದಲಾವಣೆಯಾಗಲಿದ್ದು, ಜನರಲ್ಲಿ ಕೊಂಚ ಆತಂಕ ಕೂಡ ಮೂಡಿರುವುದು ಸುಳ್ಳಲ್ಲ. ಅದರಲ್ಲೂ ಗ್ಯಾಸ್ ದರ ಬದಲಾವಣೆ ಸೇರಿದಂತೆ ಹೆಚ್ಚಿನ ಬದಲಾವಣೆಗಳು ನೇರವಾಗಿ ಮಿಡಲ್ ಕ್ಲಾಸ್ ಜನರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಅಷ್ಟಕ್ಕೂ ಡಿಸೆಂಬರ್ 1ರಿಂದ ಯಾವ ಬದಲಾವಣೆಗಳಾಗಲಿವೆ ಎಂಬುದಕ್ಕೆ ಉತ್ತರ ಇಲ್ಲಿದೆ.
ನಿಯಂತ್ರಕ ಬದಲಾವಣೆಗಳು ಜಾರಿ
ಮುಂದಿನ ತಿಂಗಳು ಅಂದರೆ ಡಿಸೆಂಬರ್ ಒಂದರಿಂದ ಭಾರತದ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಹಲವಾರು ನಿಯಂತ್ರಕ ಬದಲಾವಣೆಗಳನ್ನು ಜಾರಿಗೆ ಬರಲಿದೆ. ಇನ್ನು ಯಾವ ರೀತಿಯ ನಿಯಂತ್ರಕ ಬದಲಾವಣೆಗಳು ಎಂಬ ಪ್ರಶ್ನೆಗೆ ನಕಲಿ OTP ಗಳನ್ನು ತಡೆಯಲು ಮಾರ್ಪಾಡುಗಳು, ಮಾಲ್ಡೀವ್ಸ್ ಪ್ರವಾಸೋದ್ಯಮ ನಿಯಮಗಳಲ್ಲಿನ ಬದಲಾವಣೆಗಳು ಮತ್ತು ಕೆಲವು ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ನವೀಕರಿಸುವುದನ್ನು ಒಳಗೊಂಡಿವೆ. ಆಡಳಿತ ಮತ್ತು ಬಳಕೆದಾರರ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಅಪ್‌ಡೇಟ್‌ಗಳು, ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅಗತ್ಯವಿದೆ. ಇನ್ನು ಸಮಗ್ರವಾಗಿ ಬದಲಾವಣೆಗಳ ಬಗ್ಗೆ ಮಾಹಿತಿಗೆ ಇಲ್ಲಿದೆ ವರದಿ.

TRAI ನ ಹೊಸ ನಿಯಮ:
ಭಾರತದಲ್ಲಿ ಮೊಬೈಲ್ ನೆಟವರ್ಕ್ ಕಂಪೆನಿಗಳನ್ನು ನಿಯಂತ್ರಿಸುವ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಕೂಡ ತನ್ನ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳನ್ನು ಹೊರತರಲಿವೆ. ಅದರಲ್ಲೂ ಇತ್ತೀಚಿಗಿನ ದಿನಗಳಲ್ಲಿ ಸ್ಪ್ಯಾಪ್ ಕರೆಗಳು, ಆನ್‌ಲೈನ್ ಸ್ಕ್ಯಾಮ್ ಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ TRAI ತನ್ನ ನಿಯಮದಲ್ಲಿ ಕೂಡ ಬದಲಾವಣೆಗೆ ಮುಂದಾಗಿದೆ. ಸ್ಕ್ಯಾಮರ್‌ಗಳಿಗೆ ಜನರ ಎಲೆಕ್ಟ್ರಾನಿಕ್ ಸಾಧನಗಳಿಗೆ ಪ್ರವೇಶವನ್ನು ನೀಡುವ ಮತ್ತು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುವ ಸಂಶಯಾಸ್ಪದ OTP ಗಳನ್ನು ನಿಗ್ರಹಿಸುವ ಭಾಗವಾಗಿ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸಂದೇಶ ಪತ್ತೆಹಚ್ಚುವಿಕೆಯನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳನ್ನು ಕೇಳಿದೆ. ಇನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿರ್ದೇಶನವನ್ನು ಅನುಸರಿಸಲು ಗಡುವು ನವೆಂಬರ್ 30, 2024 ಆಗಿದೆ. ಹಾಗಾಗಿ ಡಿಸೆಂಬರ್ ಒಂದರ ಒಳಗಾಗಿ ಎಲ್ಲವೂ ಬದಲಾವಣೆಗೆ ಸಜ್ಜಾಗಿದೆ. ಈ ನಿಯಂತ್ರಣಕ್ಕೆ ಟೆಲಿಕಾಂ ಕಂಪನಿಗಳು ಎಲ್ಲಾ ಸಂದೇಶಗಳನ್ನು ಪತ್ತೆಹಚ್ಚಲು ನಿಬಂಧನೆಗಳನ್ನು ಮಾಡುವ ಅಗತ್ಯವಿದೆ. ಆರಂಭಿಕ ಹಂತದಲ್ಲಿ ಅಕ್ಟೋಬರ್ 31ಕ್ಕೆ ಗಡುವು ನೀಡಲಾಗಿತ್ತು. ಆದರೆ ಸೇವಾ ನಿರ್ವಾಹಕರ ಬೇಡಿಕೆಗಳ ಹಿನ್ನೆಲೆಯಲ್ಲಿ TRAI ಅದನ್ನು ನವೆಂಬರ್ 30 ಕ್ಕೆ ವಿಸ್ತರಿಸಿತು. ಗ್ರಾಹಕರು OTP ಗಳನ್ನು ಸ್ವೀಕರಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ TRAI ಅಂತಹ ವರದಿಗಳನ್ನು "ವಾಸ್ತವವಾಗಿ ತಪ್ಪಾಗಿದೆ" ಎಂದು ತಳ್ಳಿಹಾಕಿದೆ.
ನಿರ್ಗಮನ ಶುಲ್ಕ ಹೆಚ್ಚಿಸಿದೆ ಮಾಲ್ಡೀವ್ಸ್!
ಜಗತ್ತಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಲ್ಡೀವ್ಸ್, ದ್ವೀಪಸಮೂಹಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸುವ ನಿರ್ಣಯ ತೆಗೆದುಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ ಕೆಲ ತಿಂಗಳುಗಳ ಹಿಂದೆ ಭಾರತದ ಪ್ರಧಾನಿ ವಿರುದ್ದ ಟೀಕೆ ಮಾಡಿ ಬಳಿಕ ತನ್ನ ಪ್ರವಾಸೋದ್ಯಮಕ್ಕೆ ತಾನೇ ಪೆಟ್ಟು ನೀಡಿದ್ದ ಮಾಲ್ಡೀವ್ಸ್ ಇದೀಗ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಿರ್ಗಮನ ಶುಲ್ಕವನ್ನು ಹೆಚ್ಚಿಸಿದೆ ಎನ್ನಲಾಗಿದೆ. ಇನ್ನು ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ, ಶುಲ್ಕವು $ 30 (Rs 2,532) ನಿಂದ $ 50 (Rs 4,220) ಕ್ಕೆ ಏರಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಇನ್ನು ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರಿಗೆ $ 60 (Rs 5,064) ನಿಂದ $ 120 (Rs 10,129) ಗೆ ಹೆಚ್ಚಳ ಮಾಡಲಾಗಿದೆ. ಉಳಿದಂತೆ ಪ್ರಥಮ ದರ್ಜೆಯ ಪ್ರಯಾಣಿಕರು $240 (Rs 20,257) ಮೊತ್ತವನ್ನು ಪಾವತಿಸಬೇಕಿದೆ. ಅದೂ ಅಲ್ಲದೆ ಖಾಸಗಿ ಜೆಟ್ ಪ್ರಯಾಣಿಕರು $120 (Rs 10,129) ರಿಂದ $480 (Rs 40,515) ಗೆ ಗಮನಾರ್ಹ ಏರಿಕೆಯನ್ನು ಕಾಣಲಿದ್ದಾರೆ.
ಗ್ಯಾಸ್ ಸಿಲಿಂಡರ್‌ಗಳ ಬೆಲೆ
ಸಾಮಾನ್ಯವಾಗಿ ಭಾರತೀಯರು ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯನ್ನು ಕಾಣುತ್ತಲೇ ಇರುತ್ತಾರೆ. ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ 1 ರಂದು ಪರಿಷ್ಕರಿಸುತ್ತವೆ. ಅಕ್ಟೋಬರ್‌ನಲ್ಲಿ, ಗ್ಯಾಸ್ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹ 48 ಹೆಚ್ಚಿಸಿವೆ, ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಹಾಗೆ ಉಳಿದುಕೊಂಡಿದೆ.
ಕ್ರೆಡಿಟ್ ಕಾರ್ಡ್ ಬದಲಾವಣೆಗಳು:
ಡಿಸೆಂಬರ್ 1 ರಿಂದ, ಫ್ಲೈಟ್‌ಗಳು ಮತ್ತು ಹೋಟೆಲ್‌ಗಳಿಗೆ ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳ ಸಂಖ್ಯೆಯನ್ನು YES ಬ್ಯಾಂಕ್ ಮಿತಿ ಹೇರಿಕೊಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ರೆಗಾಲಿಯಾ ಕ್ರೆಡಿಟ್ ಕಾರ್ಡ್‌ನ ಬಳಕೆದಾರರಿಗೆ ಲೌಂಜ್ ಪ್ರವೇಶ ನಿಯಮಗಳನ್ನು ಸಹ ಬದಲಾಯಿಸಲು ನಿರ್ಣಯಿಸಿದೆ. ಹೊಸ ನಿಯಮಗಳ ಪ್ರಕಾರ ಬಳಕೆದಾರರು ಡಿಸೆಂಬರ್ 1 ರಿಂದ ಲಾಂಜ್ ಪ್ರವೇಶಕ್ಕೆ ಅರ್ಹರಾಗಲು ಪ್ರತಿ ತ್ರೈಮಾಸಿಕದಲ್ಲಿ 1 ಲಕ್ಷ ರೂ. ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ತನ್ನ ವಿವಿಧ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್ ನಿಯಮಗಳು ಮತ್ತು ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಸಹ ಪರಿಷ್ಕರಿಸಿವೆ.


Click it and Unblock the Notifications