ಮುಂದಿನ ವಾರ ಮಕರ ಸಂಕ್ರಾತಿ ಹಬ್ಬ. ಭಾರತಾದ್ಯಂತ ಆಚರಿಸುವ ಹಬ್ಬವನ್ನು ಪೊಂಗಲ್, ಬಿಹು, ಉತ್ತರಾಯಣ, ಲೋಹ್ರಿ, ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಮಕರ ಸಂಕ್ರಾಂತಿಯು ವಾರ್ಷಿಕವಾಗಿ ಜನವರಿ 14 ರಂದು (ಅಥವಾ ಅಧಿಕ ವರ್ಷದಲ್ಲಿ ಜನವರಿ 15 ರಂದು) ಬರುವುದು ಸಾಮಾನ್ಯ. ಇದು ಭಾರತದಲ್ಲಿ ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ.
ಮಕರ ಸಂಕ್ರಾತಿ ದೇಶದಾದ್ಯಂತ ಸರ್ಕಾರಿ ರಜೆ ಇರುತ್ತದೆ. ಅಂದು ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಬಾರಿ ಹಬ್ಬ ಮಂಗಳವಾರ ಬಂದಿದ್ದು ಇದರ ಮುನ್ನ ಎರಡನೇ ಶನಿವಾರ ಹಾಗೂ ಭಾನುವಾರ ಬಂದಿರುವ ಕಾರಣ ಸಾಲು ಸಾಲು ರಜೆಯ ಹಬ್ಬ ಎಂದರೆ ತಪ್ಪಾಗಲಾರದು. ಈ ಕಾರಣಕ್ಕೆ ಹೆಚ್ಚಿನವರು ಬೆಂಗಳೂರಿನಿಂದ ತಮ್ಮೂರಿಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಹೀಗಾಗಿ ಬಸ್, ವಿಮಾನ , ರೈಲು ಎಲ್ಲದರಲ್ಲೂ ದಟ್ಟಣೆ ಟಿಕೆಟ್ ಸಿಗದೆ ಪರದಾಡುವುದು ಸಾಮಾನ್ಯ.

ಆದರೆ ಬೆಂಗಳೂರಿನ ಪ್ರಯಾಣಿಕರು ತಮ್ಮೂರಿಗೆ ತೆರಳಲು ಯಾವುದೇ ಸಮಸ್ಯೆ ಆಗದಂತೆ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಕೆಎಸ್ಆರ್ ಬೆಂಗಳೂರು ಹಾಗೂ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನೈಋತ್ಯ ರೈಲ್ವೆ ಘೋಷಿಸಿದೆ. ಜತೆಗೆ ಬೆಂಗಳೂರು, ತೂತುಕುಡಿ, ಮೈಸೂರು ಮಧ್ಯೆಯೂ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಈ ಬಗ್ಗೆ ನೈಋತ್ಯ ರೈಲ್ವೆ ವಿಭಾಗವು ಟ್ವೀಟ್ ಮಾಡಿದ್ದು ವಿಶೇಷ ರೈಲುಗಳ ವೇಳಾಪಟ್ಟಿ, ನಿಲುಗಡೆ ಮತ್ತಿತರ ವಿವರಗಳನ್ನು ಹಂಚಿಕೊಂಡಿದೆ.
ವಿಶೇಷ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ
ರೈಲು ಸಂಖ್ಯೆ 07319 ಕೆಎಸ್‌ಆರ್ ಬೆಂಗಳೂರು -ಡಾ.ಎಂಜಿಆರ್ ಚೆನ್ಸೆ ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ಜನವರಿ 10 ರಂದು ಬೆಳಗ್ಗೆ 08:05 ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ ಮಧ್ಯಾಹ್ನ 02:40 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.
ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ರೈಲು (07320) ಜನವರಿ 10 ರಂದು ಮಧ್ಯಾಹ್ನ 03:40 ಕ್ಕೆ ಹೊರಟು, ಅದೇ ದಿನ ರಾತ್ರಿ 10:50 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಎರಡೂ ಮಾರ್ಗಗಳಲ್ಲಿ ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ವೆಟ್ಟಿ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳೂರು ಮತ್ತು ಪೆರಂಬೂರಿನಲ್ಲಿ ನಿಲುಗಡೆ ಹೊಂದಿದೆ.
ಬೆಂಗಳೂರು-ತೂತುಕುಡಿ-ಮೈಸೂರು ವಿಶೇಷ ರೈಲು
ಈ ರೈಲು ಬೆಂಗಳೂರು, ತೂತುಕುಡಿ ಮತ್ತು ಮೈಸೂರು ನಡುವೆ ಸಂಚರಿಸುತ್ತದೆ.
ಬೆಂಗಳೂರಿನಿಂದ ತೂತುಕುಡಿಗೆ ರೈಲು ಸಂಖ್ಯೆ: 06569
ಹೊರಡುವ ಸ್ಥಳ: ಎಸ್‌ಎಂವಿಟಿ ಬೆಂಗಳೂರು
ಹೊರಡುವ ಸಮಯ: ಜನವರಿ 10 ರಂದು ರಾತ್ರಿ 10:00 ಗಂಟೆ
ಆಗಮನ ಸ್ಥಳ: ತೂತುಕುಡಿ
ಆಗಮನ ಸಮಯ: ಜನವರಿ 11 ರಂದು ಬೆಳಿಗ್ಗೆ 11:00 ಗಂಟೆ
ಮಧ್ಯೆ ನಿಲುಗಡೆ: ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಸಾತೂರ್ ಮತ್ತು ಕೋವಿಲ್ಪಟ್ಟಿ.
ತೂತುಕುಡಿಯಿಂದ ಮೈಸೂರಿಗೆ ರೈಲು ಸಂಖ್ಯೆ: 06570
ಹೊರಡುವ ಸ್ಥಳ: ತೂತುಕುಡಿ
ಹೊರಡುವ ಸಮಯ: ಜನವರಿ 11 ರಂದು ಮಧ್ಯಾಹ್ನ 01:00 ಗಂಟೆ
ಆಗಮನ ಸ್ಥಳ: ಮೈಸೂರು
ಆಗಮನ ಸಮಯ: ಜನವರಿ 12 ರಂದು ಬೆಳಿಗ್ಗೆ 06:30 ಗಂಟೆ
ಮಧ್ಯೆ ನಿಲುಗಡೆ: ಕೋವಿಲಟ್ರಿ, ಸಾತೂರ್, ವಿರುಡುನಗರ, ಮದುರೆ, ದಿಂಡಿಗಲ್, ಕರೂರ್, ನಾಮಕ್ಕಲ್, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ, ಕೆಎಸ್‌ಆರ್ ಬೆಂಗಳೂರು ಮತ್ತು ಮಂಡ್ಯ.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ 139 ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.


Click it and Unblock the Notifications