ಸಾಮಾನ್ಯವಾಗಿ, ತಿಂಗಳ ಸಂಬಳವನ್ನೇ ನಂಬಿಕೊಂಡು ಜೀವನ ನಡೆಸುವವರು ಹೆಚ್ಚುವರಿ ಆದಾಯದ ಆಸೆಯಲ್ಲಿರುತ್ತಾರೆ. ವಿಶೇಷವಾಗಿ ಶ್ರಮವಿಲ್ಲದೆ ಹಣ ಗಳಿಸುವ ಮಾರ್ಗಗಳು ಎಂದರೆ ಎಂಥವರನ್ನಾದರೂ ಬೇಗನೆ ಆಕರ್ಷಿಸುತ್ತವೆ. ಸೈಬರ್ ವಂಚಕರು ಈ ಮನೋಭಾವವನ್ನು ಬಳಸಿಕೊಂಡು ಹೊಸ ಹೊಸ ವಂಚನೆಗಳನ್ನು ಮಾಡುತ್ತಿದ್ದಾರೆ.
ಸೈಬರ್ ವಂಚನೆಯಲ್ಲೂ ಹಲವು ವಿಧಗಳಿವೆ. ಇದು ನಿರಂತರವಾಗಿ ಬದಲಾಗುತ್ತಿರುವ ಒಂದು ಕ್ಷೇತ್ರ. ವಂಚಕರು ತಮ್ಮ ತಂತ್ರಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಿಕೊಳ್ಳುತ್ತಿರುತ್ತಾರೆ. ಒಂದು ರೀತಿಯ ವಂಚನೆ ಬಗ್ಗೆ ಜನರಿಗೆ ಜಾಗೃತಿ ಮೂಡುತ್ತಿದ್ದಂತೆ ಅವರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ತಮ್ಮ ಮೋಸಗೊಳಿಸುವ ದಾರಿಯನ್ನು ಬದಲಿಸುತ್ತಾರೆ.

ತಂತ್ರಜ್ಞಾನವು ಪ್ರತಿದಿನ ಬದಲಾಗುತ್ತಿದೆ. ಹೊಸ ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಸೇವೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ದುರುಪಯೋಗಪಡಿಸಿಕೊಂಡು ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅನೇಕ ಮಂದಿ ಸುಲಭ ಹಣ ಸಂಪಾದನೆಯ ಆಸೆ ಪಡುತ್ತಾರೆ. ಇದು ಮಾನವ ಸಹಜ ಕೂಡಾ. ಆದರೆ ಇದನ್ನೇ ದುರುಪಯೋಗಪಡಿಸಿಕೊಳ್ಳುವ ವಂಚಕರು ಅವರನ್ನು ಹಣದ ಬಲೆಗೆ ಬೀಳಿಸುತ್ತಾರೆ. ಜನರು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಬರುವ ಎಲ್ಲಾ ಸಂದೇಶಗಳನ್ನು ನಂಬುತ್ತಾರೆ ಮತ್ತು ಅವುಗಳನ್ನು ಪರಿಶೀಲಿಸುವುದಿಲ್ಲ. ಇದರಿಂದಾಗಿ ಅವರು ವಂಚನೆಗೆ ಬಲಿಯಾಗುತ್ತಾರೆ.
56.64 ಲಕ್ಷ ರೂ. ಕಳೆದುಕೊಂಡ ಮಂಗಳೂರು ಮಹಿಳೆ
ಸೈಬರ್ ವಂಚನೆಗೆ ತಾಜಾ ಉದಾಹರಣೆ ಇದು. ಮಂಗಳೂರು ಮೂಲದ ಮಹಿಳೆಯ ವಿಶ್ವಾಸ ಗಳಿಸಿದ ವಂಚಕರು ಬಳಿಕ ಹೂಡಿಕೆಯ ಹೆಸರಿನಲ್ಲಿ ಹಣ ದೋಚಿ ಪಂಗನಾಮ ಹಾಕಿದ್ದಾರೆ. ಈ ಘಟನೆಯ ವಿವರವನ್ನು ನೋಡಿಕೊಂಡು ಬರೋಣ...
ಮಹಿಳೆಗೆ ಅದಿತಿ ಕಪೂರ್ ಹೆಸರಿನ ಮಹಿಳೆಯೋರ್ವಳಿಂದ ದೂರುದಾರರ ಫೇಸ್‌ಬುಕ್ ಖಾತೆಗೆ ಜುಲೈಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಇದನ್ನು ಅಕ್ಸೆಪ್ಟ್ ಮಾಡಿದ ಬಳಿಕ ಮಹಿಳೆಗೆ ಮೆಸೆಂಜರ್ ಮೇಸೇಜ್ ಬಂದಿತ್ತು. ಇದಾದ ಬಳಿಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಬಳಿಕ ಮಹಿಳೆ ಮೆಸೆಂಜರ್‌ನಲ್ಲಿ +1 (623) 273-9277 ನಂಬರ್ ಕಳುಹಿಸಿ ಇದು ಪರ್ಸನಲ್ ನಂಬರ್. ಇದರಲ್ಲಿ ವಾಟ್ಸ್‌ಆ್ಯಪ್ ಇದೆ ಎಂದು ತಿಳಿಸಿದ್ದಳು.
ಇದಾದ ಬಳಿಕ ಮಹಿಳೆ ವಾಟ್ಸಪ್‌ನಲ್ಲಿ ಅದಿತಿ ಕಪೂರ್ ಎಂಬ ಖಾತೆ ಹೊಂದಿದ್ದ ಆಕೆಯೊಂದಿಗೆ ಚಾಟ್ ಮಾಡಿಕೊಂಡಿದ್ದರು. ಕೆಲವು ಸಮಯದ ಅನಂತರ ಮಹಿಳೆ ದೂರುದಾರರಿಗೆ Century Global Gold Capital" ಎಂಬ ಇನ್‌ವೆಸ್ಟ್‌ಮೆಂಟ್ ಪ್ಲ್ರಾನ್ ಇದೆ. ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದಳು. ಅನಂತರ ಲಿಂಕ್ ಕಳುಹಿಸಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದರು. ಅದರಂತೆ ದೂರುದಾರರು ಹೆಚ್ಚು ಲಾಭ ಪಡೆಯುವ ಆಸೆಯಿಂದ ನೋಂದಣಿ ಮಾಡಿಸಿದ್ದರು. ಬಳಿಕ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಮಹಿಳೆ ತಿಳಿಸಿದ್ದು ಇದನ್ನು ನಂಬಿ ಮಹಿಳೆ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಬಳಿಕ ವಂಚನೆ ಆಗಿರುವುದು ತಿಳಿದು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೈಬರ್ ವಂಚನೆ ಬಗ್ಗೆ ಜಾಗರೂಕರಾಗಿ
ಸೈಬರ್ ವಂಚನೆಗಳು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಾಗುತ್ತಿರುವುದರಿಂದ ನಾವು ಹೆಚ್ಚಾಗಿ ಜಾಗರೂಕರಾಗಿರಬೇಕು. ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತರೊಂದಿಗೆ ಹಣದ ವಹಿವಾಟು ಯಾವುದೇ ಕಾರಣಕ್ಕೂ ಮಾಡಬೇಡಿ. ಸಾಮಾನ್ಯವಾಗಿ ಫಿಶಿಂಗ್ ಮೇಲ್‌ಗಳು, ಷೇರು ಹೂಡಿಕೆ, ಸಾಮಾಜಿಕ ಮಾಧ್ಯಮ ವಂಚನೆ, ಆನ್‌ಲೈನ್ ಶಾಪಿಂಗ್ ವಂಚನೆ ಮತ್ತು ಕ್ರಿಪ್ಟೋಕರೆನ್ಸಿ ವಂಚನೆಗಳು ಹೆಚ್ಚಾಗಿ ಕಂಡುಬರುತ್ತವೆ.
ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಜಾಗೃತಿ ಅತ್ಯಂತ ಮುಖ್ಯ. ಅಪರಿಚಿತರ ಕಳುಹಿಸುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ, ನಿಮ್ಮ ಪಾಸ್‌ವರ್ಡ್‌ಗಳನ್ನು ಯಾರಿಗೂ ನೀಡಬೇಡಿ, ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಮಾತ್ರ ಶಾಪಿಂಗ್ ಮಾಡಿ, ಕ್ರಿಪ್ಟೋಕರೆನ್ಸಿ , ಷೇರು ಅಥವಾ ಯಾವುದೇ ಹೂಡಿಕೆ ಮಾಡುವ ಮುನ್ನ ಸಂಪೂರ್ಣವಾಗಿ ಯೋಚಿಸಿ ಸುರಕ್ಷಿತ ಅಂದರೆ ಮಾತ್ರ ಮುಂದುವರಿಯಿರಿ.


Click it and Unblock the Notifications