ಭಾರತದ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ , ಶಿಕ್ಷಣ ತಜ್ಞ ಡಾ.ಮನಮೋಹನ್ ಸಿಂಗ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ಡಿ.26ರ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಪ್ರವರ್ತಕ ಆರ್ಥಿಕ ಆಡಳಿತಗಾರ, ರಾಜನೀತಿಜ್ಞ ಮತ್ತು ಭಾರತದ ಮೂರನೇ ಅತಿ ಹೆಚ್ಚು ಅವಧಿಯ ಪ್ರಧಾನಿ ಎಂದು ಖ್ಯಾತರಾದ ಡಾ. ಸಿಂಗ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ದೇಶಕ್ಕೆ ಅನೇಕ ಐತಿಹಾಸಿಕ ಸುಧಾರಣೆಗಳು ಮತ್ತು ಯೋಜನೆಗಳನ್ನು ನೀಡಿದ್ದಾರೆ. ಅವರ ಕೊಡುಗೆಗಳನ್ನು ದೇಶ ಮರೆಯೋದಕ್ಕೆ ಸಾಧ್ಯವೇ ಇಲ್ಲ.
ದೇಶಕ್ಕೆ ಮಾತ್ರವಲ್ಲ ಬೆಂಗಳೂರಿನ ಬೆಳವಣಿಗೆಗೂ ಕಾರಣವಾದ ಆರ್ಥಿಕ ಹರಿಕಾರ ಡಾ.ಸಿಂಗ್ ಕೆಲವು ಪ್ರಮುಖ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ಮೇಲೆ ಹಾಕಿದ ಮುದ್ರೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.

ದೀರ್ಘ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ ಅವರು ಮೇ 24, 2008 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ನ್ನು ಲೋಕಾರ್ಪಣೆಗೊಳಿಸಿದ್ದರು. ಇದಾದ ಮೂರು ವರ್ಷಗಳ ಬಳಿಕ ನವೆಂಬರ್ 20, 2011 ರಂದು, ಸಿಂಗ್ ಅವರು ಬೆಂಗಳೂರಿನಲ್ಲಿ ಮತ್ತೊಂದು ಮೈಲಿಗಲ್ಲಾದ ನಮ್ಮ ಮೆಟ್ರೋ ಯೋಜನೆಗೆ ಹಸಿರು ನಿಶಾನೆ ತೋರಿಸಿದರು. ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಯವರೆಗೆ ಒಡಾಟ ನಡೆಸುವ ನಗರದ ಮೊದಲ ಮೆಟ್ರೋ ರೈಲಿಗೆ ಚಾಲನೆಯನ್ನು ನೀಡಿದ್ದರು.
ಇದಾದ ಬಳಿಕ ಡಾ ಸಿಂಗ್ ಅವರು 2017 ಅಕ್ಟೋಬರ್ 4 ರಂದು ಬೆಂಗಳೂರಿನ ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಶೈಕ್ಷಣಿಕ ಅವಧಿಗಳನ್ನು ಉದ್ಘಾಟಿಸಿದ್ದರು.
ಹಾಗೆಂದು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿಯಾದ ಬಳಿಕ ಬೆಂಗಳೂರಿನ ನಂಟು ಹುಟ್ಟಿಕೊಂಡಿದ್ದಲ್ಲ. ಸಿಂಗ್ ಅವರ ಬೆಂಗಳೂರು ಸಂಪರ್ಕವು ತುಂಬಾ ಹಳೆಯದು.
1991ರಲ್ಲಿ ನಡೆದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 16ನೇ ಘಟಿಕೋತ್ಸವದ ವೇಳೆ, ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾಗಿದ್ದ ಸಿಂಗ್ ಅವರು ವೇದಿಕೆಯಲ್ಲಿ ಭಾರತದ ಆರ್ಥಿಕತೆಯನ್ನು ಹೇಗೆ ಬಲಪಡಿಸಬಹುದು ಎಂಬುದರ ಕುರಿತು ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡರು.
1987 ರಲ್ಲಿ ಜಿನೀವಾದ ಸೌತ್ ಕಮಿಷನ್‌ನಲ್ಲಿ ಕೆಲಸ ಮಾಡಲು ಭಾರತವನ್ನು ತೊರೆದಾಗ, ರಾಷ್ಟ್ರೀಯ ಮನಸ್ಥಿತಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಆಶಾವಾದದಿಂದ ತುಂಬಿತ್ತು. ಆದರೆ, 1990 ರಲ್ಲಿ ಭಾರತಕ್ಕೆ ಮರಳಿದಾಗ, ಸಿಂಗ್ ಅವರು ಸಂದೇಹ, ಸ್ವಯಂ-ಅನುಮಾನ ಮತ್ತು ಹತಾಶೆಯ ಭಾವನೆಗಳು ಬೆಳೆಯುತ್ತಿರುವುದನ್ನು ಗಮನಿಸಿದರು.
ನಿಸ್ಸಂಶಯವಾಗಿ ಕೇಂದ್ರದಲ್ಲಿನ ಇತ್ತೀಚಿನ ರಾಜಕೀಯ ಅಸ್ಥಿರತೆ ಮತ್ತು ಪ್ರದೇಶಗಳು, ಧಾರ್ಮಿಕ ಗುಂಪುಗಳು ಮತ್ತು ಜಾತಿಗಳ ನಡುವಿನ ಭಾವನಾತ್ಮಕ ವಿಭಜನೆಯು ರಾಷ್ಟ್ರೀಯ ಮನಸ್ಥಿತಿಯಲ್ಲಿ ಬದಲಾವಣೆ ತರಲು ಕಾರಣವಾದ ಅಂಶಗಳಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತದ ಹಣಕಾಸು ಮತ್ತು ಪಾವತಿ ಸಮತೋಲನ ಸಮಸ್ಯೆಗಳನ್ನು ನಿಭಾಯಿಸುವಲ್ಲಿನ ನಿರ್ಲಕ್ಷ್ಯ ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿರುವ ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ವಿಫಲತೆಯು ಸಹ ಪ್ರಮುಖವಾದ ಅಂಶಗಳಾಗಿವೆ," ಎಂದು ಅವರು ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದ ಭಾಷಣದಲ್ಲಿ ಹೇಳಿದ್ದರು.
ಒಟ್ಟಾರೆ ಭಾರತೀಯ ಅರ್ಥವ್ಯವಸ್ಥೆ ಬದಲಾವಣೆಯ ಶಿಲ್ಪಿ ಡಾ. ಮನಮೋಹನ್ ಸಿಂಗ್ ಸಾಮಾನ್ಯ ರಾಜಕಾರಣಿಗಳಿಂದ ಭಿನ್ನವಾಗಿ ನಿಲ್ಲುತ್ತಾರೆ. ಐಟಿ ಬಿಟಿ ಕ್ಷೇತ್ರದ ಕ್ರಾಂತಿಗೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಭೂತಪೂರ್ವ ಬದಲಾವಣೆಗೆ ಸಿಂಗ್ ಅವರ ಆರ್ಥಿಕ ನೀತಿಗಳೇ ಕಾರಣ ಎಂದರೆ ತಪ್ಪಾಗಲಾರದು.


Click it and Unblock the Notifications