ಹಿಂದೂ ಧರ್ಮದಲ್ಲಿ (Hindu) ದೇವಸ್ಥಾನಗಳಲ್ಲಿ ಮದುವೆಯಾಗುವುದನ್ನು ಪವಿತ್ರ ಮತ್ತು ಧಾರ್ಮಿಕವಾಗಿ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಎಷ್ಟೋ ಮಂದಿ ಇಂದಿಗೂ ದೇವಾಲಯಗಳಲ್ಲಿ ವಿವಾಹವಾಗುತ್ತಾರೆ. ಕರ್ನಾಟಕದಲ್ಲಿ ಹಲವಾರು ಹಿಂದೂ ದೇವಾಲಯಗಳಲ್ಲಿ ವಿವಾಹವಾಗುತ್ತಾರೆ. ಅದರಲ್ಲೂ ಬೆಂಗಳೂರಿನ ಹಲಸೂರಿನ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ (Halasuru Someshwara Temple) ಹಲವರು ವರ್ಷಗಳಿಂದ ಮದುವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿತ್ತು. ಆದ್ರೆ ಪ್ರಸ್ತುತ ಆ ದೇವಾಲಯದಲ್ಲಿ ಮದುವೆ ಕಾರ್ಯಕ್ರಮವನ್ನು (Wedding) ನಡೆಸುವುದನ್ನು ನಿಲ್ಲಿಸಲಾಗಿದೆ. ಇದೀಗ ಈ ನಿರ್ಧಾರದ ಹಿಂದಿನ ಕಾರಣ ಬಯಲಾಗಿದೆ.

ಬೆಂಗಳೂರಿನ ಪ್ರಮುಖ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯವು ತನ್ನ ಆವರಣದಲ್ಲಿ ವಿವಾಹ ಕಾರ್ಯಕ್ರಮಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ತಮ್ಮ ಮದುವೆ ನಡೆಸಲು ದೇವಾಲಯ ನಿರಾಕರಿಸಿದೆ ಎಂದು ಆರೋಪಿಸಿ ಒಬ್ಬ ವ್ಯಕ್ತಿ ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ (CMO) ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ನಿರ್ಧಾರ ಸುತ್ತ, ಅನುಮಾನದ ಹುತ್ತ!
ದೂರಿನ ಬೆನ್ನಲ್ಲೇ CMO ಸ್ಪಷ್ಟನೆ ಕೇಳಿದಾಗ, ದಾಂಪತ್ಯ ಜೀವನ ವಿಫಲವಾದರೆ ನ್ಯಾಯಾಲಯ ಅಲೆಯುವುದು ಬೇಡ ಎಂಬುದು ತಮ್ಮ ನಿರ್ಧಾರದ ಹಿಂದಿನ ಮುಖ್ಯ ಕಾರಣವೆಂದು ಅರ್ಚಕರು ತಿಳಿಸಿದರು. ಶತಮಾನಗಳಷ್ಟು ಹಳೆಯ ಈ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯವು ಬೆಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಮದುವೆ ಕಾರ್ಯಗಳಿಗೆ ಹಿಂದೆನಿಂದಲೂ ಜನಪ್ರಿಯತೆ ಪಡೆದುಕೊಂಡಿತ್ತು.
ಆದರೆ, ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿ ಮದುವೆ ಸಂಬಂಧಿಸಿ ಹಲವು ಸಮಸ್ಯೆಗಳನ್ನು ಎದುರಿಸಿದೆ. ಅಲ್ಲದೇ ತಮ್ಮ ಆವರಣದಲ್ಲಿ ವಿವಾಹವಾದ ದಂಪತಿಗಳು ನಂತರ ವಿಚ್ಛೇದನ ಪರಿಶೀಲನೆಗಾಗಿ ದೇವಾಲಯವನ್ನು ಸಂಪರ್ಕಿಸುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ಕಾರಣದಿಂದ ದೇವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ನ್ಯಾಯಾಲಯಗಳು ಹೆಚ್ಚಾಗಿ ವಿಚ್ಛೇದನ ಕಲಾಪದ ವೇಳೆ ದೇವಾಲಯದ ಅರ್ಚಕರನ್ನು ಹಾಜರಾಗಲು ಆದೇಶಿಸುತ್ತಿದ್ದವು. ಇದು ದೇವಾಲಯದ ಕಾರ್ಯನಿರ್ವಹಣೆ ಮತ್ತು ಅರ್ಚಕರಿಗೆ ಹೆಚ್ಚಿನ ತೊಂದರೆ ನೀಡುತ್ತಿತ್ತು ಎಂದು ಹೇಳಲಾಗಿದೆ. ಈ ಕುರಿತು ದೇವಾಲಯ ಸಮಿತಿಯ ಮುಖ್ಯ ಆಡಳಿತಾಧಿಕಾರಿ ವಿ. ಗೋವಿಂದರಾಜು ಮಾತನಾಡಿ, "ಅನೇಕ ಜೋಡಿಗಳು ಮನೆಯಿಂದ ಓಡಿಬಂದು ನಕಲಿ ದಾಖಲೆ ನೀಡಿ ವಿವಾಹವಾಗುತ್ತಾರೆ. ಕೆಲವೇ ದಿನಗಳಲ್ಲಿ ಅವರ ಪೋಷಕರು ಬಂದು, ಕೆಲವು ಸಂದರ್ಭಗಳಲ್ಲಿ, ದೂರನ್ನೂ ದಾಖಲಿಸುತ್ತಾರೆ. ನಂತರ ದೇವಾಲಯದ ಹೆಸರನ್ನೂ ನೀಡುತ್ತಾರೆ" ಎಂದು ವಿವರಿಸಿದರು.
6 ವರ್ಷಗಳ ನಂತರ ಮತ್ತೆ ಬೆಳಕಿಗೆ!
ವಾಸ್ತವವಾಗಿ, ದೇವಾಲಯ ಸುಮಾರು ಆರು-ಏಳು ವರ್ಷಗಳ ಹಿಂದೆಯೇ ಮದುವೆ ನಿಲ್ಲಿಸಿದೆ. ಅದಕ್ಕೂ ಮುನ್ನ ಇಲ್ಲಿ ವಾರ್ಷಿಕವಾಗಿ 100-150 ವಿವಾಹಗಳು ನಡೆಯುತ್ತಿದ್ದವು. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಾಲಯದ ಘನತೆಗೆ "ಅಹಿತಕರ ಘಟನೆಗಳು" ಧಕ್ಕೆ ತರದಂತೆ ತಡೆಯುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿತ್ತು.
ವಿವಾಹಗಳು ಸ್ಥಗಿತಗೊಂಡಿದ್ದರೂ, ದೇವಾಲಯದಲ್ಲಿ ಇಂದಿಗೂ ಇತರ ಪೂಜೆ ಮತ್ತು ಧಾರ್ಮಿಕ ಸಮಾರಂಭಗಳು ಜಾರಿಯಲ್ಲಿವೆ. ಭವಿಷ್ಯದಲ್ಲಿ ಈ ನೀತಿಯನ್ನು ಮರುಪರಿಶೀಲಿಸಬಹುದು ಎಂದಿದ್ದರೂ, ಸದ್ಯಕ್ಕೆ ಯಾವುದೇ ವಿವಾಹ ಸಮಾರಂಭ ನಡೆಯುವುದಿಲ್ಲವೆಂದು ಸ್ಪಷ್ಟನೆ ನೀಡಲಾಗಿದೆ.
ಹಲಸೂರು ಸೋಮೇಶ್ವರ ದೇವಸ್ಥಾನದ ಜನಪ್ರಿಯತೆ ಹಿಂದಿನ ರಹಸ್ಯ!
ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನ ಕೂಡಾ ಒಂದು. ಶಿವನನ್ನು ಪೂಜಿಸುವ ಆಲಯವಾಗಿ, ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಮೂಲಕ ಜನಪ್ರಿಯವಾಗಿದೆ. ಇದು ಚೋಳರ ಕಾಲಕ್ಕೆ ಸೇರಿದ ದೇವಾಲಯವಾಗಿದೆ. ವಿಜಯನಗರ ವಾಸ್ತುಶಿಲ್ಪ ಶೈಲಿಯಿಂದ ದೇವಾಲಯ ಮತ್ತಷ್ಟು ಕಂಗೊಳಿಸುತ್ತದೆ.


Click it and Unblock the Notifications