ಈಗೀಗ ಕೆಲಸದಿಂದ ಉದ್ಯೋಗಿಗಳನ್ನು ವಜಾಗೊಳಿಸುವುದು ಟ್ರೆಂಡ್ ಆಗಿಬಿಟ್ಟಂತೆ ಕಾಣುತ್ತಿದೆ. ಒಂದಾದ ಮೇಲೊಂದು ಕಂಪನಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿಯೇ ಭಾರಿ ಸದ್ದು ಮಾಡುತ್ತಿದೆ. ಇನ್ಫೋಸಿಸ್, ಟಿಸಿಎಸ್, ವರ್ಲ್‌ಪೂಲ್, ಗೂಗಲ್ ಹೀಗೆ ಒಂದಷ್ಟು ಕಂಪನಿಗಳ ಬಳಿಕ ಈಗ ಅಮೆರಿಕದ ಪ್ರಮುಖ ಫೆಡರಲ್ ಅಡಮಾನ ಸಂಸ್ಥೆಯಾದ ಫ್ಯಾನಿ ಮೇ ಕಂಪನಿಯಲ್ಲಿ ದೊಡ್ಡ ಲೇಆಫ್ ಸುದ್ದಿ ಹೊರ ಬಿದ್ದಿದೆ. ಅಂದರೆ ಸಂಸ್ಥೆಯ ಆಂತರಿಕ ಪುನರ್‌ರಚನೆ ಕ್ರಮದ ಭಾಗವಾಗಿ ಸುಮಾರು 700 ಉದ್ಯೋಗಿಗಳನ್ನು ವಜಾ ಮಾಡಿದ್ದು, ಇದರಲ್ಲಿ 200ಕ್ಕೂ ಹೆಚ್ಚು ತೆಲುಗು ಮೂಲದ ಭಾರತೀಯ-ಅಮೆರಿಕನ್ ಉದ್ಯೋಗಿಗಳು ಸೇರಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ವಜಾಗಳು ಮುಖ್ಯವಾಗಿ ನೈತಿಕ ಅಡಿಪಾಯದ ಮೇಲೆ, ಹಣಕಾಸು ಹೊಂದಾಣಿಕೆ ಯೋಜನೆಗಳ ದುರುಪಯೋಗಕ್ಕೆ ಸಂಬಂಧಪಟ್ಟಂತೆ ನಡೆದಿವೆ ಎಂಬ ಅಂಶಗಳು ಮೇಲಕ್ಕೆ ಬಂದಿವೆ.

'ಹೊಂದಾಣಿಕೆಯ ಅನುದಾನ ದುರುಪಯೋಗ' ಎಂದರೇನು?
ಈ ವರ್ಷದ ಏಪ್ರಿಲ್ 9 ಮತ್ತು 10 ರಂದು ಈ ವಜಾ ಕ್ರಮ ಜಾರಿಯಲ್ಲಿತ್ತು. ವಜಾಗೊಂಡ ಉದ್ಯೋಗಿಗಳು ಸಂಸ್ಥೆಯ ಡೋನರ್ ಮ್ಯಾಚ್ ಪ್ರೋಗ್ರಾಮ್‌ನ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಯೋಜನೆ ಉದ್ಯೋಗಿಗಳು ಲಾಭರಹಿತ ಸಂಸ್ಥೆಗಳಿಗೆ ದೇಣಿಗೆ ನೀಡಿದಾಗ, ಕಂಪನಿಯೂ ಅದೇ ಪ್ರಮಾಣದ ಹಣವನ್ನು ಹೊಂದಾಣಿಕೆಯಾಗುವಂತೆ ನೀಡಲು ರೂಪಿಸಲಾದದ್ದಾಗಿದೆ. ಆದರೆ, ತನಿಖೆಯ ಪ್ರಕಾರ ಕೆಲವೊಂದು ತೆಲುಗು ಅಸೋಸಿಯೇಷನ್‌ಗಳು, ವಿಶೇಷವಾಗಿ TANA (Telugu Association of North America) ಈ ವ್ಯವಸ್ಥೆಯಲ್ಲಿನ ಪೂರೈಕೆ ಪದ್ದತಿಗಳನ್ನು ದುರುಪಯೋಗಪಡಿಸಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಭಾವಿತ ಸಂಘಟನೆಗಳು ಮತ್ತು ಅಧಿಕಾರಿಗಳು:
ವಜಾಗೊಂಡ ಉದ್ಯೋಗಿಗಳಲ್ಲಿ ಕೆಲವರು TANAನಲ್ಲಿ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅಥವಾ ಅದರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕೆಲವರ ವಿರುದ್ಧ ಸುಳ್ಳು ದೇಣಿಗೆ ದಾಖಲೆ ಸೃಷ್ಟಿಸಿ ಕಂಪನಿಯಿಂದ ಹೊಂದಾಣಿಕೆ ಹಣ ಪಡೆಯಲು ಪ್ರಯತ್ನಿಸಿದ್ದರಂತಹ ಗಂಭೀರ ಆರೋಪಗಳಿವೆ. ಈ ಪ್ರಕರಣದಲ್ಲಿ ATA (American Telugu Association) ನ ಹಿಂದೆಗೂ ಅಧ್ಯಕ್ಷರೊಂದಿಗೆ ಸಂಬಂಧ ಹೊಂದಿದ್ದವರನ್ನೂ ಉಲ್ಲೇಖಿಸಲಾಗಿದೆ.
ಫೆಡರಲ್ ತನಿಖೆ:
ಈ ಪ್ರಕರಣವು ಎಫ್ಐಬಿಐ (FBI), ಆಂತರಿಕ ಕಂದಾಯ ಸೇವೆ (IRS), ಮತ್ತು ಅಮೆರಿಕದ ನ್ಯಾಯ ಇಲಾಖೆ (DOJ) ಗಮನ ಸೆಳೆದಿದ್ದು, TANA ಮೇಲೆ ಡಿಸೆಂಬರ್ 2023 ರಲ್ಲೇ ಸಮನ್ಸ್‌ಗಳನ್ನು ಜಾರಿಗೊಳಿಸಲಾಗಿತ್ತು. ಈ ಸಮನ್ಸ್‌ನಲ್ಲಿ 2019 ರಿಂದ 2024 ರವರೆಗೆ ನಡೆದ ದೇಣಿಗೆ ಗಳಿಕೆ, ಖರ್ಚು ದಾಖಲೆಗಳು ಮತ್ತು ಪದಾಧಿಕಾರಿಗಳ ವಿವರಗಳನ್ನೂ ಒದಗಿಸಲು ಆದೇಶಿಸಲಾಗಿತ್ತು. ಇದೀಗ ಹಲವು ಸಂಸ್ಥೆಗಳು ನಿರಂತರ ತನಿಖೆ ನಡೆಸುತ್ತಿವೆ.
ಈ ಪ್ರಸ್ತುತ ಘಟನೆಯಿಂದ ಮುಂಚೆ, ತಾಂತ್ರಿಕ ದೈತ್ಯ ಆಪಲ್ ಕೂಡ 2024ರ ಆರಂಭದಲ್ಲಿ ತನ್ನದೇ ಆದ ದತ್ತಿ ಹೊಂದಾಣಿಕೆ ಯೋಜನೆ ದುರುಪಯೋಗಗೊಂಡ ಹಿನ್ನಲೆಯಲ್ಲಿ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿತ್ತು. ಈ ಎರಡೂ ಪ್ರಕರಣಗಳು ಅಮೆರಿಕದ ಕಂಪನಿಗಳಲ್ಲಿ ಉದ್ಯೋಗಿಗಳ ನೈತಿಕತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
ರಾಜಕೀಯ ಪ್ರತಿಕ್ರಿಯೆ:
ವರ್ಜೀನಿಯಾ ರಾಜ್ಯದ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ಸುಹಾಸ್ ಸುಬ್ರಮಣ್ಯಂ, ಈ ವಜಾ ಕ್ರಮದ ಬಗ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಫ್ಯಾನಿ ಮೇ ಸಂಸ್ಥೆಯಿಂದ ತಕ್ಷಣ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ, "ಇದು ನನ್ನ ಮತದಾರರಾದ ನೂರಾರು ಭಾರತೀಯ-ಅಮೆರಿಕನ್ ಉದ್ಯೋಗಿಗಳ ಮೇಲಾದ ನೈತಿಕ ವಂಚನೆ ಆಗಿದೆ" ಎಂದು ಹೇಳಿದ್ದಾರೆ.
ಪೂರ್ಣ ತನಿಖೆ ನಡೆಯದೆ, ಯಾವುದೇ ಸ್ಪಷ್ಟ ಪುರಾವೆಗಳಿಲ್ಲದೆ ಈ ಉದ್ಯೋಗಿಗಳನ್ನು ವಜಾ ಮಾಡಿದರೆ, ಅದು ನ್ಯಾಯವಾಗದು. ಅವರು ಸೂಕ್ತ ಪ್ರಕ್ರಿಯೆಗೆ ಅರ್ಹರು. ಫ್ಯಾನಿ ಮೇ, ಕಾಂಗ್ರೆಸ್ ಹಾಗೂ ಅಮೆರಿಕದ ಜನತೆಗೆ ಸ್ಪಷ್ಟ ವಿವರಣೆ ನೀಡಲೇಬೇಕು ಎಂಬುದಾಗಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications