ವಾಷಿಂಗ್ಟನ್: ಭಾರತ ಮತು ಅಮೆರಿಕಾದ (India-America) ಜೊತೆಗಿನ ವ್ಯಾಪಾರ ಸಂಬಂಧ ಭಾರೀ ಹದಗೆಟ್ಟಿದೆ. ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಸುಂಕದ (Trump Tariffs) ಸಮರ ಸಾರಿದಾಗಿನಿಂದ ಈ ಹಿನ್ನಡೆ ಕಾಣಿಸಿಕೊಂಡಿದ್ದು, ಭಾರತದ ರಫ್ತಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಅಲ್ಲದೇ ಡೊನಾಲ್ಡ್ ಟ್ರಂಪ್ (Donald Trump) ಅವರ ಪಹಲ್ಗಾಮ್ ದಾಳಿ, ರಷ್ಯಾದ (Russia) ತೈಲ ಖರೀದಿ ಬಗೆಗಿನ ಹೇಳಿಕೆಗಳು ಭಾರತದ ಜೊತೆಗಿನ ಮುನಿಸಿಗೆ ಕಾರಣವಾಗಿದೆ. ಇದೀಗ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಪರಸ್ಪರ ದೀಪಾವಳಿ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದು, ಈ ವೇಳೆ ಮೋದಿ (PM Modi), ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಬ್ಬರೂ ಸೇರಿ ಪ್ರಯತ್ನಿಸಬೇಕು ಎಂಬ ಟ್ವೀಟ್ ಮೂಲಕ ಟ್ರಂಪ್‌ಗೆ ಸಂದೇಶ ನೀಡಿದ್ದಾರೆ.

ಟ್ರಂಪ್‌ಗೆ ಸಂದೇಶ ಕೊಟ್ಟ ಮೋದಿ:
ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಟ್ವೀಟ್ ಮೂಲಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಬ್ಬರೂ ಸೇರಿ ಪ್ರಯತ್ನಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯನ್ನು ಪೋಷಿಸುವ ಮತ್ತು ಭಯೋತ್ಪಾದಕ ತಾಣಗಳಿಗೆ ಆಶ್ರಯ ನೀಡುವ ಪಾಕಿಸ್ತಾನದೊಂದಿಗೆ ಇತ್ತೀಚೆಗೆ ಅಮೆರಿಕ ತನ್ನ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಸಂದರ್ಭದಲ್ಲೇ ಮೋದಿಯ ಈ ಟ್ವೀಟ್ ಭಾರೀ ಮಹತ್ವ ಪಡೆದುಕೊಂಡಿದೆ. ಮೋದಿ ಟ್ವೀಟ್‌ನಲ್ಲಿ "ಅಧ್ಯಕ್ಷ ಟ್ರಂಪ್ ಅವರು ದೂರವಾಣಿ ಕರೆ ಮಾಡಿ, ದೀಪಾವಳಿ ಶುಭಾಶಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಈ ಬೆಳಕಿನ ಹಬ್ಬದಲ್ಲಿ, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವಗಳು ಜಗತ್ತನ್ನು ನಿರಂತರವಾಗಿ ಭರವಸೆಯಿಂದ ಬೆಳಗಿಸಲಿ ಮತ್ತು ಭಯೋತ್ಪಾದನೆಯ ವಿರುದ್ಧ ಒಂದಾಗಿ ನಿಲ್ಲಲಿ," ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಮತ್ತೆ ನಾನೇ ಕಾರಣ ಎಂದ ಟ್ರಂಪ್!
ಶುಭಾಶಯ ತಿಳಿಸಿದ ಕೆಲವೇ ಹೊತ್ತಿನಲ್ಲಿ, ಶ್ವೇತಭವನದಲ್ಲಿ ದೀಪಾವಳಿ ಪ್ರಯುಕ್ತ ದೀಪವನ್ನು ಬೆಳಗಿಸಿದರು. ಇದೇ ವೇಳೆ ಟ್ರಂಪ್, ಮೋದಿ ಜೊತೆಗಿನ ದೂರವಾಣಿ ಮಾತುಕತೆಗಳ ಬಗ್ಗೆ ಮಾತನಾಡಿದರು. ಅಲ್ಲದೇ ರಷ್ಯಾದ ತೈಲ ಆಮದನ್ನು ಕಡಿಮೆ ಮಾಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಮತ್ತು ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ತಾನೇ ತಡೆದಿದ್ದು ಎಂದು ಮತ್ತೆ ಮತ್ತೆ ಟ್ರಂಪ್ ಪುನರುಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಮೋದಿ "ಗ್ರೇಟ್ ಫ್ರೆಂಡ್"!
ಮಂಗಳವಾರ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಕರೆ ಮಾಡಿದ್ದಾಗಿ ಹೇಳಿಕೊಂಡ ಬಳಿಕ ಡೊನಾಲ್ಡ್ ಟ್ರಂಪ್, ಮೋದಿಯನ್ನು "ಗ್ರೇಟ್ ಫ್ರೆಂಡ್" ಎಂದು ಹೇಳಿದರು. ಭಾರತ ಮತ್ತು ಅಮೆರಿಕ "ಕೆಲವು ಮಹತ್ತರ ಒಪ್ಪಂದಗಳ" ಮೇಲೆ ಕೆಲಸ ಮಾಡುತ್ತಿವೆ ಎಂದು ಒತ್ತಿ ಹೇಳಿದರು.
"ಮೋದಿಯೊಂದಿಗೆ ಮಾತನಾಡಿದೆ ಎಂದು ಹೇಳಿದ ಟ್ರಂಪ್, ನಾವು ಒಳ್ಳೆಯ ಮಾತುಕತೆ ನಡೆಸಿದ್ದೇವೆ. ವಿಶೇಷವಾಗಿ ವ್ಯಾಪಾರದ ಬಗ್ಗೆ ಮಾತನಾಡಿ, ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು." ಎಂದು ಅವರು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇಷ್ಟಾದರೂ ಟ್ರಂಪ್ ತನ್ನ ಸುಳ್ಳು ಹೇಳಿಕೆಗಳನ್ನು ಮಾತ್ರ ಬಿಡುತ್ತಲೇ ಇಲ್ಲ ಎಂದು ಭಾರತೀಯರು ಮಾತನಾಡುತ್ತಿದ್ದಾರೆ.


Click it and Unblock the Notifications