ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಬಂಪರ್ ಆಫರ್: PLI ಯೋಜನೆ FY36 ರವರೆಗೆ ವಿಸ್ತರಣೆ, ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ಸರ್ಕಾರವು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ನೀಡಲಾಗುವ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯನ್ನು 2035-36ನೇ ಹಣಕಾಸು ವರ್ಷದವರೆಗೆ (FY36) ವಿಸ್ತರಿಸಿದೆ. ಅಷ್ಟೇ ಅಲ್ಲ, ನಿಯಮಗಳನ್ನು ಸಡಿಲಗೊಳಿಸಿ ಅರ್ಜಿ ಸಲ್ಲಿಕೆಯನ್ನು ಮರುಆರಂಭಿಸಿದೆ. ಔಷಧೀಯ ಇಲಾಖೆ (DoP) ನೀಡಿರುವ ಮಾಹಿತಿಯಂತೆ, ಈ ಯೋಜನೆಗಾಗಿ ಇನ್ನು ಅಂದಾಜು 2,700 ಕೋಟಿ ರೂಪಾಯಿ ನಿಧಿ ಲಭ್ಯವಿದೆ. ಇನ್ನು ಹತ್ತೇ ದಿನಗಳಲ್ಲಿ ಅರ್ಜಿ ಸಲ್ಲಿಸುವ ಪೋರ್ಟಲ್ ಲೈವ್‌ ಆಗಲಿದೆ. ದೇಶೀಯವಾಗಿ ಉತ್ಪಾದನೆ ಹೆಚ್ಚಿಸಿ, ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಯೋಜನೆಯಲ್ಲಿ ಎರಡು ಪ್ರಮುಖ ಸಡಿಲಿಕೆಗಳನ್ನು ನೀಡಲಾಗಿದೆ. ಮೊದಲನೆಯದಾಗಿ, ಪ್ರೋತ್ಸಾಹಧನ ಪಡೆಯಲು ಇದ್ದ ಕನಿಷ್ಠ ಮಾರಾಟದ ಮಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಎರಡನೆಯದಾಗಿ, ಹೆಚ್ಚಿನ ಸಂಸ್ಥೆಗಳು ಭಾಗವಹಿಸಲು ಅನುಕೂಲವಾಗುವಂತೆ ಕನಿಷ್ಠ ಹೂಡಿಕೆಯ ಮೊತ್ತವನ್ನೂ ತಗ್ಗಿಸಲಾಗಿದೆ. ಅರ್ಜಿದಾರರು ವಿವಿಧ ಟಾರ್ಗೆಟ್ ವಿಭಾಗಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ವಿಂಡೋ ನಿರಂತರವಾಗಿ ತೆರೆದಿರಲಿದೆ. ಇನ್ನು ಪ್ರೋತ್ಸಾಹಧನಕ್ಕೆ ಕ್ಲೇಮ್ ಮಾಡುವ ಮುನ್ನ ಘಟಕಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಮೂರು ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ.

ವೈದ್ಯಕೀಯ ಉಪಕರಣಗಳ PLI ಯೋಜನೆ ವಿಸ್ತರಣೆ: ಹೊಸ ನಿಯಮಗಳು

FY36 ರವರೆಗೆ ವೈದ್ಯಕೀಯ ಉಪಕರಣಗಳ PLI ವಿಸ್ತರಣೆ: ಪ್ರಮುಖ ಬಿಡಿಭಾಗಗಳ ಉತ್ಪಾದನೆಗೆ ಒತ್ತು

ಈ ಹಂತದಲ್ಲಿ ಪ್ರಮುಖ ಬಿಡಿಭಾಗಗಳು ಹಾಗೂ 3T MRI ಮತ್ತು PET-CT ನಂತಹ ಅತ್ಯಾಧುನಿಕ ಉಪಕರಣಗಳ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಗಿಟ್ಟುವ ಪ್ರೋತ್ಸಾಹಧನದ ದರಗಳನ್ನು ನೋಡುವುದಾದರೆ, ಬಳಸಿ ಎಸೆಯುವ ವೈದ್ಯಕೀಯ ವಸ್ತುಗಳಿಗೆ (consumables) ಸರಾಸರಿ ಶೇಕಡಾ 5 ರಷ್ಟು ಪ್ರೋತ್ಸಾಹಧನ ಸಿಗಲಿದೆ. ಪ್ರಮುಖ ಬಿಡಿಭಾಗಗಳು ಮತ್ತು ಹೊಸ ಮಾದರಿಯ ಅತ್ಯಾಧುನಿಕ ಉಪಕರಣಗಳಿಗೆ ಶೇಕಡಾ 9 ರಷ್ಟು ಹಾಗೂ ಪ್ರಸ್ತುತ ದೇಶದಲ್ಲೇ ಅಸೆಂಬಲ್ ಆಗುತ್ತಿರುವ ಉಪಕರಣಗಳಿಗೆ ಶೇಕಡಾ 6 ರಷ್ಟು ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ 60ಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳ ಮೂಲಕ 16,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಉತ್ಪಾದನೆ ಸಾಧ್ಯವಾಗಿತ್ತು.

PLI ಯೋಜನೆಗೆ ಅರ್ಜಿ ಸಲ್ಲಿಕೆ: ಪೋರ್ಟಲ್ ಆರಂಭ ದಿನಾಂಕ ಮತ್ತು ಅರ್ಹತೆಯ ವಿವರ

ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಪೋರ್ಟಲ್ 2026 ರ ನವೆಂಬರ್ 20 ರ ವೇಳೆಗೆ ಲೈವ್ ಆಗುವ ನಿರೀಕ್ಷೆಯಿದ್ದು, ತಕ್ಷಣವೇ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಅರ್ಜಿ ಸಲ್ಲಿಕೆಯ ವಿಂಡೋ ದೀರ್ಘಾವಧಿಯವರೆಗೆ ತೆರೆದಿರಲಿದ್ದು, ಕೊನೆಯ ಕ್ಷಣದ ಗೊಂದಲಗಳನ್ನು ಇದು ತಪ್ಪಿಸಲಿದೆ ಎಂದು DoP ತಿಳಿಸಿದೆ. ಕಂಪನಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದು. ಈ ಪ್ರಮುಖ ಬದಲಾವಣೆಯು ಮೌಲ್ಯವರ್ಧನೆ ಹೆಚ್ಚಿಸುವುದಲ್ಲದೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (MSME) ಬಾಗಿಲು ತೆರೆದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ವೈದ್ಯಕೀಯ ಉಪಕರಣಗಳ PLI ಪ್ರಭಾವ: 'ಮೇಕ್ ಇನ್ ಇಂಡಿಯಾ' ಮತ್ತು ಮಾರುಕಟ್ಟೆ ಚಿತ್ರಣ

ಹೂಡಿಕೆದಾರರ ದೃಷ್ಟಿಕೋನದಲ್ಲಿ ನೋಡಿದರೆ, ಈ ವಿಸ್ತರಣೆಯು ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ರಂಗದಲ್ಲಿ ಆಸ್ಪತ್ರೆಗಳು ಮಾಡುವ ಹೂಡಿಕೆಗಳಿಗೆ ಪೂರಕವಾಗಿದೆ. ಡಿಸ್ಪೋಸಬಲ್ ಉಪಕರಣಗಳು, ಇಂಪ್ಲಾಂಟ್‌ಗಳು, ಇಮೇಜಿಂಗ್ ಬಿಡಿಭಾಗಗಳು, ಕ್ರಿಮಿನಾಶಕ ಸೇವೆಗಳು ಮತ್ತು ಮೆಡ್‌-ಟೆಕ್ ಲಾಜಿಸ್ಟಿಕ್ಸ್ ಕ್ಷೇತ್ರಗಳು ಇದರಿಂದ ಹೆಚ್ಚಿನ ಲಾಭ ಪಡೆಯಲಿವೆ. ನಿಯಮಗಳ ಸಡಿಲಿಕೆಯಿಂದಾಗಿ ಪೋಲಿ ಮೆಡಿಕೂರ್ (Poly Medicure) ನಂತಹ ಮಿಡ್-ಕ್ಯಾಪ್ ಪೂರೈಕೆದಾರರು, ಕಾಂಟ್ರಾಕ್ಟ್ ತಯಾರಕರು ಹಾಗೂ ಬಿಡಿಭಾಗಗಳ ಉತ್ಪಾದಕರಿಗೆ ಯೋಜನೆಯಲ್ಲಿ ಭಾಗವಹಿಸುವುದು ಮತ್ತು ಪ್ರಾಜೆಕ್ಟ್ ಫಂಡಿಂಗ್ ಪಡೆಯುವುದು ಸುಲಭವಾಗಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯಕ್ಕೆ, ಅರ್ಜಿದಾರರು ತಮ್ಮ ಉತ್ಪನ್ನಗಳನ್ನು ನಿರ್ದಿಷ್ಟ ವಿಭಾಗಗಳಿಗೆ ಸರಿಯಾಗಿ ಮ್ಯಾಪ್ ಮಾಡಿಕೊಳ್ಳಬೇಕು, ಮೌಲ್ಯವರ್ಧನೆಯನ್ನು ಪರಿಶೀಲಿಸಬೇಕು ಮತ್ತು ನಿಯಮಾವಳಿಗಳಿಗೆ ಬದ್ಧರಾಗಿರಬೇಕು. ಬೇಗನೆ ಹೆಜ್ಜೆ ಇಡುವ ಕಂಪನಿಗಳು ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಘಟಕಗಳನ್ನು ಆರಂಭಿಸಿ, ಗರಿಷ್ಠ ಪ್ರೋತ್ಸಾಹಧನದ ಪ್ರಯೋಜನ ಪಡೆಯಬಹುದು. 2026 ರ ನವೆಂಬರ್ 20 ರ ವೇಳೆಗೆ ಪೋರ್ಟಲ್ ಪ್ರಾರಂಭವಾಗಲಿದ್ದು, ಅಗತ್ಯ ದಾಖಲೆಗಳು ಹಾಗೂ ಪಾಲುದಾರಿಕೆಗಳನ್ನು ಸಿದ್ಧಪಡಿಸಿಕೊಳ್ಳಲು ಕಂಪನಿಗಳಿಗೆ ಕೆಲವೇ ದಿನಗಳ ಕಾಲಾವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+