ಸದ್ಯ ಭಾರತ ಮುಂದುವರೆಯುತ್ತಿರುವ ಯುವ ದೇಶವಾಗಿದ್ದರೂ ಹಿಂದೆ ಬ್ರಿಟಿಷರು ಆಗಮನವಾಗುವುದಕ್ಕಿಂತ ಮುನ್ನ ಈ ಸ್ಥಿತಿ ಇರಲಿಲ್ಲ. ಅನೇಕ ವಿದೇಶಿ ಪರ್ಯಟಕರ ಪ್ರಕಾರ ಭಾರತದಲ್ಲಿ ಹಿಂದೆ ವಜ್ರ ವೈಢೂರ್ಯ ಮುಂತಾದ ಬೆಲೆಬಾಳುವ ಆಭರಣಗಳನ್ನು ರಸ್ತೆಯಲ್ಲೇ ಮಾರುವಂಥ ಶ್ರೀಮಂತಿಕೆ ಭಾರತದಲ್ಲಿತ್ತು. ಇನ್ನು ಕನ್ನಡ ನಾಡಿನ ಬಗ್ಗೆ ಹೇಳುವುದಾದರೆ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಜನತೆ ಶ್ರೀಮಂತಿಕೆಯಿಂದ ಕೂಡಿದ್ದರು ಎಂಬ ಮಾತಿದೆ. ಆದರೆ ಬ್ರಿಟಿಷರು ಭಾರತವನ್ನು ಲೂಟಿ ಹೊಡೆದ ಬಳಿಕ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿ, ಇದೀಗ ಭಾರತ ನಿಧಾನವಾಗಿ ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ. ಆದರೆ ಭಾರತದ ಕೆಲವೊಂದು ಕಡೆಗಳಲ್ಲಿ ಈಗಾಗಲೂ ರಾಜ ಮಹಾರಾಜರ ಆಡಳಿತದ ಸಮಯದ ವಂಶಜರು ಈಗಲೂ ಅದೇ ರೀತಿ ಅಲ್ಲದಿದ್ದರೂ ಬಹುತೇಕ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ. ಇನ್ನು ಹೈದರಾಬಾದ್‌ನ ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಅವರ ಬಗ್ಗೆ ಇಲ್ಲಿ ವಿಶೇಷವಾಗಿ ಹೇಳಬೇಕಿದೆ. ಒಸ್ಮಾನ್ ಅಲಿ ಖಾನ್ 1886 ರಲ್ಲಿ ಜನಿಸಿ, 1911 ರಲ್ಲಿ ಕೇವಲ ಇಪ್ಪತ್ತೈದನೇ ವಯಸ್ಸಿನಲ್ಲಿ ರಾಜರಾಗುವ ಅವಕಾಶ ಲಭಿಸಿತು. 1948 ರವರೆಗೆ ಆಳ್ವಿಕೆ ನಡೆಸಿದ ಅವರ ಆಡಳಿತದ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದ್ದು, ಜನರಿಗೆ ಆಕರ್ಷಣೆಯ ವಿಚಾರ ಕೂಡ ಆಗಿದೆ. ಶ್ರೀಮಂತಿಕೆಯ ವಿಚಾರದಲ್ಲಿ ಅವರು ಇಂದಿನ ಮುಖೇಶ್ ಅಂಬಾನಿ, ಅದಾನಿಗಿಂತಲೂ ಹೆಚ್ಚಿನ ಶ್ರೀಮಂತರಾಗಿದ್ದರು ಎನ್ನಲಾಗಿದೆ.
ಒಸ್ಮಾನ್ ಅಲಿ ಖಾನ್ ಅವರು ತಮ್ಮ ಆಡಳಿತದ ಅವಧಿಯಲ್ಲಿ ಭಾರೀ ಮೊತ್ತದ ಸಂಪತ್ತನ್ನು ಗಳಿಸಿದ್ದು, 1940 ರ ದಶಕದ ಆರಂಭದಲ್ಲಿ ಮೂಲಗಳ ಪ್ರಕಾರ ಇಂದಿನ ಸಮಯಕ್ಕೆ ಹೋಲಿಕೆ ಮಾಡಿದರೆ 236 ಮಿಲಿಯನ್ ಡಾಲರ್ ಮೊತ್ತದ ಸಂಪತ್ತು ಹೊಂದಿದ್ದರು ಎನ್ನಲಾಗಿದೆ. ಇನ್ನು ಈ ಅಗಾಧ ಸಂಪತ್ತಿನ ಬಹುಪಾಲು ಭಾಗವನ್ನು ಅವರು ರಾಜನ ಆಳ್ವಿಕೆಯಲ್ಲಿ ವಜ್ರಗಳ ಅತಿದೊಡ್ಡ ಉತ್ಪಾದಕ ಗೋಲ್ಕೊಂಡಾ ಗಣಿಗಳ ಮೂಲಕ ಗಳಿಸಿದ್ದರು. ಅವರು ತಮ್ಮ ಖಾಸಗಿ ಖಜಾನೆಯಲ್ಲಿ 520 ಮಿಲಿಯನ್ ಯುಎಸ್‌ಡಿ ಮೌಲ್ಯದ ಆಭರಣಗಳನ್ನು ಹೊರತುಪಡಿಸಿ 130 ಮಿಲಿಯನ್ ಯುಎಸ್‌ಡಿ ಚಿನ್ನ ಮತ್ತು ಬೆಳ್ಳಿ ಬಿಲಿಯನ್‌ನಲ್ಲಿ ಇರಿಸಿದ್ದಾರೆ ಎಂದು ಹೇಳಲಾಗಿದೆ. ಅವರು ತಮ್ಮ ಖಾಸಗಿ ಖಜಾನೆಯಲ್ಲಿ 520 ಮಿಲಿಯನ್ ಯುಎಸ್‌ಡಿ ಮೌಲ್ಯದ ಆಭರಣಗಳನ್ನು ಹೊರತುಪಡಿಸಿ 130 ಮಿಲಿಯನ್ ಯುಎಸ್‌ಡಿ ಚಿನ್ನ ಮತ್ತು ಬೆಳ್ಳಿ ಬಿಲಿಯನ್‌ನಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವ ಪ್ರಸಿದ್ದ 185-ಕ್ಯಾರೆಟ್ ವಜ್ರವಾಗಿರುವ ಜಾಕೋಬ್ ಡೈಮಂಡ್ ಅನ್ನೇ ನಿಜಾಮ್ ಪೇಪರ್ ವ್ಹೇಟ್ ಆಗಿ ಬಳಸುತ್ತಿದ್ದರು ಎಂದು ಹೇಳಲಾಗಿದೆ. ಇದರರ್ಥ ಅವರು ಆ ಅಮೂಲ್ಯ ವಜ್ರವನ್ನೇ ಪೇಪರ್ ವ್ಹೇಟ ಆಗಿ ಬಳಸುತ್ತಿದ್ದರೆ ಅವರ ಬಳಿ ಎಷ್ಟು ಪ್ರಮಾಣದಲ್ಲಿ ಸಂಪತ್ತು ಇರಬಹುದು ಎಂದು ಅಂದಾಜಿಸಬಹುದು.

ಸರಳ ವ್ಯಕ್ತಿತ್ವದ ಶ್ರೀಮಂತ ವ್ಯಕ್ತಿ!
ಇನ್ನು ಇಷ್ಟೆಲ್ಲಾ ಉಸ್ಮಾನ್ ಅಲಿಖಾನ್ ಅವರ ಬಗ್ಗೆ ಹೇಳಿದ ನಂತರ ಹೆಚ್ಚಿನವರು ಅವರ ಜೀವನ ಶೈಲಿಯ ಬಗ್ಗೆ ಈಗಾಗಲೇ ಊಹೆ ಮಾಡಿರಬಹುದು. ಅವರು ಅತ್ಯಂತ ದುಬಾರಿ ಮಟ್ಟದ ಜೀವನ ಶೈಲಿಯನ್ನು ಹೊಂದಿರಬಹುದು ಎಂಬ ನೀವು ಊಹಿಸಿದ್ದರೆ ಅದು ತಪ್ಪು. ಯಾಕೆಂದರೆ ಮೂಗಳ ಪ್ರಕಾರ ಉಸ್ಮಾನ್ ಅವರು ಅಗಾಧ ಶ್ರೀಮಂತರಾಗಿದ್ದರೂ ಸರಳ ಜೀವನ ಶೈಲಿಯನ್ನು ಹೊಂದಿದ್ದರು ಎನ್ನಲಾಗಿದೆ. ತುಂಬಾ ಮಿತವ್ಯಯ ಜೀವನವನ್ನು ನಡೆಸುತ್ತಿದ್ದರು. ಅವರು ಯಾವಾಗಲೂ ಬಿಳಿ ಕುರ್ತಾ ಪೈಜಾಮ ಮತ್ತು ಸರಳ ಚಪ್ಪಲಿಗಳನ್ನು ಧರಿಸುತ್ತಿದ್ದರು. ಇನ್ನು ರಾಜಮಹಾರಾಜರ ಬೆಡ್ ರೂಮ್‌ಗಳು ಯಾವ ರೀತಿ ದುಬಾರಿ ವಸ್ತುಗಳನ್ನು ಹೊಂದಿದ್ದವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಉಸ್ಮಾನ್ ವಿಚಾರದಲ್ಲಿ ಇದು ಸಂಪೂರ್ಣ ಭಿನ್ನವಾಗಿದೆ. ಅವರ ಮಲಗುವ ಕೋಣೆ ಕೂಡ ಹಳೆಯ ಹಾಸಿಗೆ, ಹಳೆಯ ಪೀಠೋಪಕರಣಗಳನ್ನು ಹೊಂದುವ ಮೂಲಕ ಸರಳತೆಯಿಂದ ಕೂಡಿತ್ತು. ಮೇಲ್ನೋಟದಲ್ಲಿ ಅವರೊಬ್ಬ ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು.
ಕೊಡುಗೆ, ಸುಧಾರಣೆ ತಂದಿದ್ದ ನಿಜಾಮ
ಇನ್ನು ಉಸ್ಮಾನ್ ಅಲಿ ಖಾನ್ ಆಳ್ವಿಕೆಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದರು. ಅದರಲ್ಲೂ ವಿಶೇಷವಾಗಿ ಅವರು ಶಿಕ್ಷಣ, ನಿರ್ಮಾಣಗಳು ಮತ್ತು ಸಾಮಾಜಿಕ ಸುಧಾರಣೆಗಳ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯ, ಉಸ್ಮಾನಿಯಾ ಜನರಲ್ ಹಾಸ್ಪಿಟಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಇನ್ನೂ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಅದೂ ಅಲ್ಲದೆ ಅವರನ್ನು "ಆಧುನಿಕ ಹೈದರಾಬಾದ್‌ನ ಪಿತಾಮಹ" ಎಂಬ ಜನಪ್ರಿಯ ಹೆಸರಿನಿಂದಲೂ ಕರೆಯಲಾಗುತ್ತದೆ. ಆದರೆ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಉಸ್ಮಾನ್ ಅಲಿ ಖಾನ್ ಹೈದರಾಬಾದ್ ಅನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ಬಯಸಿರಲಿಲ್ಲ. ಬದಲಾಗಿ ಅವರು ಪಾಕಿಸ್ತಾನದೊಂದಿಗೆ ನಿಕಟ ಸಂಬಂಧವನ್ನು ಬಯಸಿದ್ದರು. ಇದು ಭಾರತ ಸರ್ಕಾರದೊಂದಿಗೆ ಸಾಕಷ್ಟು ಘರ್ಷಣೆಯನ್ನು ಉಂಟುಮಾಡಿತು. ಅಂತಿಮವಾಗಿ ಭಾರತೀಯ ಸೇನೆಯು ಸೆಪ್ಟೆಂಬರ್ 1948 ರಲ್ಲಿ 'ಆಪರೇಷನ್ ಪೋಲೋ' ಪ್ರಾರಂಭಿಸಿದ ಹಿನ್ನೆಲೆಯಲ್ಲಿ ನಿಜಾಮರ ಪಡೆಗಳು ಸೆಪ್ಟೆಂಬರ್ 18, 1948 ರೊಳಗೆ ಶರಣಾಗಬೇಕಾಯಿತು. ಇದು ನಿಜಾಮರ ಆಳ್ವಿಕೆಯ ಕೊನೆಯ ಹಂತ ಮತ್ತು ಹೊಸದಾಗಿ ರೂಪುಗೊಂಡ ಸ್ವತಂತ್ರ ಭಾರತದೊಂದಿಗೆ ಹೈದರಾಬಾದ್ ವಿಲೀನವಾಗಿತ್ತು.


Click it and Unblock the Notifications