ಪ್ರತಿಯೊಂದು ದೇಶದಲ್ಲೂ ಶ್ರೀಮಂತರಿದ್ದಾರೆ. ಅವರ ಸಂಪತ್ತು ಅವರ ದೇಶದ ಆರ್ಥಿಕತೆ, ರಾಜಕೀಯ ಸ್ಥಿರತೆ ಮತ್ತು ಸಾಮಾಜಿಕ ರಚನೆಯನ್ನು ಅವಲಂಬಿಸಿರುತ್ತದೆ. ಕೆಲವು ದೇಶಗಳಲ್ಲಿ, ಶ್ರೀಮಂತರು ತಮ್ಮ ಸಂಪತ್ತನ್ನು ತಲೆಮಾರುಗಳಿಂದ ಪಡೆದಿದ್ದರೆ, ಇತರ ದೇಶಗಳಲ್ಲಿ, ಸ್ವಯಂ-ನಿರ್ಮಿತ ಉದ್ಯಮಿಗಳು ಅಥವಾ ತಂತ್ರಜ್ಞಾನ ಉದ್ಯಮಿಗಳು ಸಂಪತ್ತನ್ನು ಗಳಿಸಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಸಿರಿವಂತರು ಅಂದಕ್ಷಣ ನಮಗೆ ನೆನಪಾಗುವುದೇ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಇತ್ಯಾದಿ ಫ್ಯಾಮಿಲಿಗಳು. ಭಾರತದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಹೇಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆಯೋ ಅದೇ ರೀತಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಸಿರಿವಂತರ ವ್ಯಕ್ತಿಯೊಬ್ಬರಿದ್ದಾರೆ. ಅವರನ್ನು ಪಾಕಿಸ್ತಾನದ 'ಮುಖೇಶ್ ಅಂಬಾನಿ' ಎಂದೇ ಕರೆಯಲಾಗುತ್ತದೆ. ಅವರೇ ಪಾಕಿಸ್ತಾನದ ಮೊದಲ ಬಿಲಿಯನೇರ್ ಮಿಯಾನ್ ಮೊಹಮ್ಮದ್ ಮನ್ಷಾ. ತಮ್ಮ ಬುದ್ದಿವಂತಿಕೆ, ಪರಿಶ್ರಮ, ಈ ಮಟ್ಟವನ್ನು ತಲುಪಿದ್ದಾರೆ ಅಂದ್ರೆ ತಪ್ಪಾಗಲಾರದು.

ಮೊಹಮ್ಮದ್ ಮನ್ಶಾ ಅವರು1941 ರಲ್ಲಿ ಆಗಿನ ಭಾರತದ ಪಂಜಾಬ್‌ನ ಚಿನಿಯೋಟ್‌ನಲ್ಲಿ ಜನಿಸಿದರು. ಅಂದು ಅವರ ಕುಟುಂಬವು ಜವಳಿ ವ್ಯವಹಾರದಲ್ಲಿ ತೊಡಗಿತ್ತು. ಬಳಿಕ ವ್ಯಾಪಾರಕ್ಕಾಗಿ ಬಂಗಾಳದ ಕೋಲ್ಕತ್ತಾಗೆ ವಲಸೆ ಬಂದಿತ್ತು. ಭಾರತದ ವಿಭಜನೆಯ ನಂತರ , ಕುಟುಂಬವು ಪಾಕಿಸ್ತಾನದ ಪಂಜಾಬ್‌ಗೆ ಮರಳಿ ಅಲ್ಲಿಯೇ ವ್ಯವಹಾರ ಆರಂಭಿಸಿತು. ಕುಟುಂಬದ ವ್ಯವಹಾರ ಹಿನ್ನೆಲೆ ಅವರನ್ನು ಉದ್ಯಮಶೀಲತೆಯ ಯಶಸ್ಸಿನತ್ತ ಕೊಂಡೊಯ್ದ ಅಂಶಗಳಲ್ಲಿ ಒಂದು.
ಮಿಯಾನ್ ಮೊಹಮ್ಮದ್ ಮನ್ಶಾ ನಿವ್ವಳ ಮೌಲ್ಯ
ಮಿಯಾನ್ ಮೊಹಮ್ಮದ್ ಅವರು ಪಾಕಿಸ್ತಾನದ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಇವರು ನಿಶಾತ್ ಗ್ರೂಪ್‌ನ ಸಂಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ. ಇದು ಪಾಕಿಸ್ತಾನದ ಪ್ರಮುಖ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. ಜವಳಿ, ಸಿಮೆಂಟ್, ಬ್ಯಾಂಕಿಂಗ್, ಮತ್ತು ವಿದ್ಯುತ್ ಉತ್ಪಾದನೆಯಂತಹ ವಿವಿಧ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಮಿಯಾನ್ ಮೊಹಮ್ಮದ್ ಮನ್ಶಾ ಅವರು ಪಾಕಿಸ್ತಾನದ ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮನ್ಷಾ ಅವರ ನಿವ್ವಳ ಮೌಲ್ಯ ಸುಮಾರು 5 ಬಿಲಿಯನ್ ಯುಎಸ್ ಡಾಲರ್ (ರೂ. 42,971.1785 ಕೋಟಿ) ಆಗಿದೆ. ಅವರ ಜೀವನ ಪ್ರಯಣವನ್ನೊಮ್ಮೆ ಗಮನಿಸಿದರೆ ಮಹತ್ವಾಕಾಂಕ್ಷೆ, ದೃಢನಿಶ್ಚಯ ಮತ್ತು ಯಶಸ್ಸಿನಿಂದ ತುಂಬಿದೆ.
2005 ರ ಬಳಿಕ, ಮಿಯಾನ್ ಮೊಹಮ್ಮದ್ ಮನ್ಶಾ ಅವರು ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.
2010 ರಲ್ಲಿ, ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದಾಗ, ಅವರು 937 ನೇ ಸ್ಥಾನವನ್ನು ಪಡೆದರು. ಅವರ ನಾಯಕತ್ವದ ನಿಶಾತ್ ಗ್ರೂಪ್, ಗ್ಯಾಪ್ ನಂತಹ ಪ್ರಸಿದ್ಧ ಜಾಗತಿಕ ಬ್ರ್ಯಾಂಡ್‌ಗಳಿಗೆ ಸೇವೆ ಸಲ್ಲಿಸುವ ಹತ್ತಿ ಉಡುಪುಗಳ ರಫ್ತಿನಲ್ಲಿ ಪಾಕಿಸ್ತಾನದ ಮುಂಚೂಣಿಯಲ್ಲಿದೆ.
ಅವರು ಕೇವಲ ಉದ್ಯಮಿ ಮಾತ್ರವಲ್ಲದೆ ಲೋಕೋಪಕಾರಿಯೂ ಆಗಿದ್ದಾರೆ. ಅವರು ದೇಶದಲ್ಲಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳು ಮತ್ತು ದತ್ತಿ ಕಾರ್ಯಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ದಾನಕ್ಕೆ ದೊಡ್ಡ ಮೊತ್ತವನ್ನು ದೇಣಿಗೆ ನೀಡುವ ಮೂಲಕ ಸಮುದಾಯದ ಪ್ರಯೋಜನಕ್ಕಾಗಿ ತಮ್ಮ ಆರ್ಥಿಕ ಲಾಭಗಳನ್ನು ಕೊಡುಗೆ ನೀಡುತ್ತಾರೆ.
ಮಿಯಾನ್ ಮೊಹಮ್ಮದ್ ಮನ್ಷಾ ಅವರ ಜೀವನ ಪಯಣ ಅವರ ಸಂಪತ್ತನ್ನು ಮೀರಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅವಕಾಶಗಳನ್ನು ಗುರುತಿಸಿ ಮುನ್ನಗ್ಗುವ ದಾರ್ಶನಿಕ ರೀತಿಯನ್ನು ತೋರಿಸುತ್ತದೆ. ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯ ಮತ್ತು ಪರಂಪರೆಯನ್ನು ನಿರ್ಮಿಸುವ ದೃಢಸಂಕಲ್ಪದೊಂದಿಗೆ, ಅವರು ಸಣ್ಣ ಕುಟುಂಬ ಗಿರಣಿಯನ್ನು ಬಹುಕೋಟಿ ಡಾಲರ್ ಸಾಮ್ರಾಜ್ಯವಾಗಿ ಪರಿವರ್ತಿಸಿದರು. ಈ ಮೂಲಕ ಪಾಕಿಸ್ತಾನ ಮತ್ತು ಜಾಗತಿಕವಾಗಿ ಅಸಂಖ್ಯಾತ ಉದ್ಯಮಿಗಳಿಗೆ ಸ್ಫೂರ್ತಿ ನೀಡಿದ್ದಾರೆ.


Click it and Unblock the Notifications