ಬೆಂಗಳೂರು, ಜುಲೈ 8: ಮೆಹರ್ ಪುದುಮ್ಜಿ ಭಾರತದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು ಇವರದ್ದು. ಮೆಹರ್ ಅವರು ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಂಧನ ಮತ್ತು ಪರಿಸರ ಪರಿಹಾರಗಳನ್ನು ಒದಗಿಸುವ ಕಂಪನಿಯ ಭಾರತೀಯ ಬಹುರಾಷ್ಟ್ರೀಯ ಇಂಜಿನಿಯರಿಂಗ್ ಸಂಘಟನೆಯಾದ Thermax Ltd ನ ಅಧ್ಯಕ್ಷರಾಗಿದ್ದಾರೆ. ಮೆಹರ್ ಅವರು ಸುಮಾರು 20 ವರ್ಷಗಳಿಂದ ರೂ.63307 ಕೋಟಿ ಮಾರುಕಟ್ಟೆ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.
ಮೆಹರ್ ಅವರು ಮಾಜಿ ಸಂಸತ್ ಸದಸ್ಯೆ ಹಾಗೂ ಥರ್ಮಾಕ್ಸ್‌ನ ಮಾಜಿ ಅಧ್ಯಕ್ಷೆ ಅನು ಅಗಾ ಅವರ ಪುತ್ರಿಯಾಗಿದ್ದಾರೆ. ಅನು ಅಗಾ ಅವರು ನಿರ್ಮಾಣ ಮತ್ತು ಎಂಜಿನಿಯರಿಂಗ್ ವಲಯದಲ್ಲಿ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಫೋರ್ಬ್ಸ್ ಪ್ರಕಾರ ಇವರ ನಿವ್ವಳ ಮೌಲ್ಯ ರೂ 4,1730 ಕೋಟಿ ರೂ. ಆಗಿದೆ. ಅನು ಅಗಾ ಅವರು 81ರ ಹರೆಯದರಾಗಿದ್ದು 2004ರಲ್ಲಿ ತಮ್ಮ ಮಗಳು ಅಧಿಕಾರ ವಹಿಸಿಕೊಂಡಾಗ ಥರ್ಮಾಕ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು.

ಮೆಹರ್ ಅವರು ಲಂಡನ್‌ನ ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು, 1990 ರಲ್ಲಿ, ಮೆಹರ್ ಥರ್ಮಾಕ್ಸ್‌ಗೆ ಟ್ರೈನಿ ಇಂಜಿನಿಯರ್ ಆಗಿ ಸೇರಿದರು. ಇದಾದ ಒಂದು ವರ್ಷದ ನಂತರ ತಮ್ಮ ಪತಿ ಫೆರೋಜ್ ಪುದುಮ್ಜೀ ಅವರೊಂದಿಗೆ ಯುಕೆಯಲ್ಲಿ ಥರ್ಮ್ಯಾಕ್ಸ್ ಅಂಗಸಂಸ್ಥೆ ಕಂಪನಿಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. 1996 ರಲ್ಲಿ ಭಾರತಕ್ಕೆ ಮರಳಿದ ಬಳಿಕ ಥರ್ಮ್ಯಾಕ್ಸ್‌ನ ನಿರ್ದೇಶಕರ ಮಂಡಳಿಗೆ ನೇಮಕಗೊಂಡರು.
2001 ರಲ್ಲಿ, ಅವರು ಕಂಪನಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾದರು ಮತ್ತು 2002 ರಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ, ಅವರು ಥರ್ಮಾಕ್ಸ್ ನ ಪ್ರಮುಖ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ವೃತ್ತಿಜೀವನದ ಹೊರತಾಗಿ, ಸಂಗೀತದ ಕಡೆ ಹೆಚ್ಚಿನ ಒಲವು ಉಳ್ಳ ಇವರು ಪುಣೆ ಮೂಲದ ಗಾಯಕವೃಂದದ ಸದಸ್ಯರೂ ಆಗಿದ್ದಾರೆ. ಪ್ರಸ್ತುತ ತಮ್ಮ ಪತಿಯೊಂದಿಗೆ ಪುಣೆಯಲ್ಲಿ ವಾಸಿಸುತ್ತಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮೆಹರ್ ತಮ್ಮ ತಾಯಿಯ ನಿವೃತ್ತಿಯ ನಂತರ, ಅಂದರೆ ಅಕ್ಟೋಬರ್ 2004 ರಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಇದಲ್ಲದೇ ಇವರು ಆಕಾಂಕ್ಷಾ ಫೌಂಡೇಶನ್‌ನ ಅಧ್ಯಕ್ಷರಾಗಿದ್ದು ಮುಂಬೈನಲ್ಲಿ ಟೀಚ್ ಟು ಲೀಡ್‌ನ ಟ್ರಸ್ಟಿಯಾಗಿದ್ದಾರೆ.
ಅವರು 2006 ರಲ್ಲಿ ಒಸಾಕಾದಲ್ಲಿ ನಡೆದ ಏಷ್ಯನ್ ವ್ಯಾಪಾರ ಮಹಿಳಾ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು.2008 ರಲ್ಲಿ, ವರ್ಲ್ಡ್ ಎಕನಾಮಿಕ್ ಫೋರಮ್ ತನ್ನ ವೃತ್ತಿಪರ ಸಾಧನೆ, ಸಮಾಜಕ್ಕೆ ಬದ್ಧತೆ ಮತ್ತು ಪ್ರಪಂಚದ ಭವಿಷ್ಯವನ್ನು ರೂಪಿಸುವಲ್ಲಿ ಕೊಡುಗೆ ನೀಡುವ ಸಾಮರ್ಥ್ಯಕ್ಕಾಗಿ ಯುವ ಜಾಗತಿಕ ನಾಯಕಿಯಾಗಿ ಆಯ್ಕೆ ಮಾಡಿತು. 2009 ರಲ್ಲಿ, ಅವರು ಬಿಸಿನೆಸ್ ಸ್ಟ್ಯಾಂಡರ್ಡ್‌ನಿಂದ ವರ್ಷದ CEO ಆಗಿ ಆಯ್ಕೆಯಾದರು. ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ (CII) ಫ್ಯಾಮಿಲಿ ಬಿಸಿನೆಸ್ ಫೋರಮ್ ಮತ್ತು ಯಂಗ್ ಇಂಡಿಯನ್ಸ್ (YI) ಸದಸ್ಯರೂ ಆಗಿದ್ದಾರೆ.


Click it and Unblock the Notifications