ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ (Karnataka Govt vs Central Govt) ನಡುವೆ ಭಾರೀ ಚರ್ಚೆಯಲ್ಲಿದ್ದ ಮೆಟ್ರೋ ದರ ಏರಿಕೆ (Metro Fare Hike) ವಿಷಯಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಈಗಾಗಲೇ ಬಿಎಂಆರ್‌ಸಿಎಲ್, ಇಂದಿನಿಂದ ಅಂದರೆ ಫೆಬ್ರವರಿ 9 ರಿಂದ ಮೆಟ್ರೋ ಟಿಕೆಟ್ ದರದಲ್ಲಿ ಏರಿಕೆಯಾಗಲಿದೆ ಎಂದು ಘೋಷಣೆ ಮಾಡಿತ್ತು. ಆದ್ರೆ ಟಿಕೆಟ್ ದರ ಏರಿಕೆ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸಾರ್ವಜನಿಕರು, ಬಿಜೆಪಿ ನಾಯಕರು, ಸೋಷಿಯಲ್ ಮೀಡಿಯಾಗಳಲ್ಲಿ ದರ ಏರಿಕೆ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಬೆನ್ನಲ್ಲೇ ಕೇಂದ್ರದಿಂದಲೂ ದರ ಏರಿಕೆ ಮಾಡದಂತೆ ಬಿಎಂಆರ್‌ಸಿಎಲ್‌ಗೆ ಇಮೇಲ್ ಬಂದಿದೆ ಎನ್ನಲಾಗಿದೆ. ಕೇಂದ್ರದ ಸೂಚನೆ ಬೆನ್ನಲ್ಲೇ ಬಿಎಂಆರ್‌ಸಿಎಲ್ (BMRCL) ತನ್ನ ದರ ಏರಿಕೆ ನಿರ್ಧಾರವನ್ನ ಕೈಬಿಟ್ಟಿದೆ ಎನ್ನಲಾಗಿದೆ.

'ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!
ಇಂದಿನಿಂದ (ಫೆ.9) ಏರಿಕೆಯಾಗಬೇಕಿದ್ದ, ಮೆಟ್ರೋ ದರಕ್ಕೆ ಕೊನೆಗೂ ಬಿಎಂಆರ್‌ಸಿಎಲ್ ಬ್ರೇಕ್ ಕೊಟ್ಟಿದೆ. ಸೋಮವಾರದಿಂದ ಶೇ.5% ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆಯಾಗಲಿದೆ ಎMದು ಬಿಎಂಆರ್‌ಸಿಎಲ್ ಮೊದಲೇ ಸೂಚನೆ ಹೊರಡಿಸಿತ್ತು. ಆದರೆ ಈ ಬಗ್ಗೆ ವ್ಯಾಪಕ ಆಕ್ರೋಶದ ಬೆನ್ನಲ್ಲೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಅಲ್ಲದೇ ಕೇಂದ್ರದಿಂದ ಬಿಎಂಆರ್‌ಸಿಎಲ್ ಎಂ.ಡಿಗೆ ಮೇಲ್ ಮೂಲಕ ದರ ಏರಿಕೆ ಮಾಡದಂತೆ ಸೂಚನೆ ಬಂದ ಬೆನ್ನಲ್ಲೇ ದರ ಏರಿಕೆಯಾಗಲ್ಲ ಎಂದು ಬಿಎಂಆರ್‌ಸಿಎಲ್ ಪೋಸ್ಟ್ ಶೇರ್ ಮಾಡಿಕೊಂಡಿದೆ. ಅಂತೂ ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಸತ್ಯವಾಯ್ತು ತೇಜಸ್ವಿ ಸೂರ್ಯ ಮಾತು!
ಬಿಎಂಆರ್‌ಸಿಎಲ್ ನಿರ್ಧಾರಕ್ಕೂ ಮೊದಲೇ ಸಂಸದ ತೇಜಸ್ವಿ ಸೂರ್ಯ ಅವರು, ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರೊಂದಿಗೆ ತಾವು ವಿವರವಾದ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ಎಕ್ಸ್‌ನಲ್ಲಿ ತಿಳಿಸಿದ್ದರು. ಅಲ್ಲದೇ ಮೆಟ್ರೋ ದರ ಏರಿಕೆಯಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಅದೇ ರೀತಿ ಇದೀಗ ಕೊನೆಗೂ ಬಿಎಂಆರ್‌ಸಿಎಲ್ ತನ್ನ ದರ ಏರಿಕೆ ನಿರ್ಧಾರವನ್ನು ಕೈಬಿಟ್ಟಿದೆ. ಈ ಬೆನ್ನಲ್ಲೇ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ "ನೀಡಿದ ಭರವಸೆಯಂತೆ, ನಾಳೆಯಿಂದ (ಫೆ.9) ಪ್ರಸ್ತಾಪಿತ ಮೆಟ್ರೋ ಭಾರೀ ಹೆಚ್ಚಳವನ್ನು BMRCL ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಅನ್ಯಾಯಕರ ಹೆಚ್ಚಳವನ್ನು ನಿರಂತರವಾಗಿ ವಿರೋಧಿಸಿದ ಬೆಂಗಳೂರು ಜನತೆಗೆ ಇಂದು ಒಂದು ಜಯವಾಗಿದೆ" ಎಂದು ಹೇಳಿದ್ದಾರೆ.
ದರ ಏರಿಕೆಗೆ ಬ್ರೇಕ್ ನೀಡಿದ BMRCL!
ಇನ್ನು ದರ ಏರಿಕೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರ ಬಗ್ಗೆ ಬಿಎಂಆರ್‌ಸಿಎಲ್ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸುವುದೇನೆಂದರೆ, ದಿನಾಂಕ 5ನೇ ಫೆಬ್ರವರಿ 2026 ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ಫೆಬ್ರವರಿ 9, 2026 ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."
"ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು" ಎಂದು ತಿಳಿಸಿದೆ.


Click it and Unblock the Notifications