ನಮ್ಮ ಮೆಟ್ರೋ ಸೇವೆ ಬೆಂಗಳೂರಿನ (Bengaluru Metro) ಜನಪ್ರಿಯ ಸಾರಿಗೆ ಸೇವೆಗಳಲ್ಲಿ ಒಂದಾಗಿದೆ. ಆದರೆ ಇದೀಗ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಬಿಎಂಆರ್‌ಸಿಎಲ್ (BMRCL) ನಿರ್ಧರಿಸಿದೆ. ಇದೀಗ ಬೆಂಗಳೂರು ನಮ್ಮ ಮೆಟ್ರೋ ತನ್ನ ಟಿಕೆಟ್ ದರವನ್ನು ಹೆಚ್ಚಳ (Metro Ticket Price Hike) ಮಾಡಿದ್ದು, ಜನಸಾಮಾನ್ಯರಿಗೆ ಶಾಕ್ ಕೊಟ್ಟಿದೆ. ಹಾಗಿದ್ರೆ ಎಷ್ಟು ದರ ಏರಿಕೆಯಾಗಿದೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ ಇದೀಗ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆ ಬಿಎಂಆರ್‌ಸಿಎಲ್ ತನ್ನ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದು, ಈ ವರ್ಷ ಒಟ್ಟು ಶೇ. 5% ರಷ್ಟು ಬೆಲೆ ಏರಿಕೆ ಮಾಡಲಾಗಿದೆ.
ಫೆಬ್ರವರಿ 9 ರಿಂದ ಹೊಸ ದರ ಜಾರಿ!
ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ₹1 ರಿಂದ ₹5 ರವರೆಗೆ ಏರಿಕೆ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿರ್ಧಾರ ಮಾಡಿದೆ. ಫೆಬ್ರವರಿ 9, 2026 ರಿಂದ ಈ ಹೊಸ ದರಗಳು ಜಾರಿಗೆ ಬರಲಿದ್ದು, ಇದು ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದೆ ಎಂದು BMRCL ತಿಳಿಸಿದೆ.
ದೂರದ ಆಧಾರದಲ್ಲಿ ದರ ನಿಗದಿ!
ದೇಶದ ಅತಿ ದುಬಾರಿ ಮೆಟ್ರೋ ವ್ಯವಸ್ಥೆಗಳಲ್ಲಿ ಬೆಂಗಳೂರು ಮೆಟ್ರೋ ಕೂಡಾ ಒಂದು. ಇದೀಗ ಬೆಂಗಳೂರು ನಮ್ಮ ಮೆಟ್ರೋ ದರಗಳನ್ನು ಏರಿಕೆ ಮಾಡಲಾಗಿದ್ದು, ಇದು ಪ್ರಯಾಣಿಸಿದ ದೂರದ ಆಧಾರದ ಮೇಲೆ ನಿಗದಿಯಾಗಲಿದೆ.
ಸುಮಾರು 7.5 ವರ್ಷಗಳ ಕಾಲ ಮೆಟ್ರೋ ಟಿಕೆಟ್ ದರದಲ್ಲಿ ಯಾವುದೇ ಪರಿಷ್ಕರಣೆಯಾಗಿರಲಿಲ್ಲ. ಕಳೆದ ವರ್ಷದ ಸರಾಸರಿ ಶೇ. 51.55 ರಷ್ಟು ಏರಿಕೆ ಮಾಡಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ಪ್ರಯಾಣಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ತಕ್ಕ ಮಟ್ಟಿಗೆ ಟಿಕೆಟ್ ದರದಲ್ಲಿ ಇಳಿಕೆಯೂ ಮಾಡಲಾಗಿತ್ತು. ವ್ಯಾಪಕ ವಿರೋಧ ಕೇಳಿ ಬಂದ ಬೆನ್ನಲ್ಲೇ, ಇನ್ಮೇಲೆ ವಾರ್ಷಿಕವಾಗಿ ದರ ಪರಿಷ್ಕರಣೆ ಮಾಡುವಂತೆ ಮೊದಲ ದರ ನಿಗದಿ ಸಮಿತಿ (FFC) ಶಿಫಾರಸು ಮಾಡಿತ್ತು. ಅದರಂತೆ ಇದೀಗ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ.
BMRCL ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, "FFC ಯ ಶಿಫಾರಸುಗಳು BMRCL ಗೆ ಬದ್ಧವಾಗಿರುವುದರಿಂದ, 2025ರ ಫೆಬ್ರವರಿ 9 ರಂದು FFC ಶಿಫಾರಸು ಮಾಡಿದ ದರ ಜಾರಿಯಾದ ಒಂದು ವರ್ಷದ ನಂತರ, ಅಂದರೆ 2026ರ ಫೆಬ್ರವರಿ 9 ರಿಂದ ವಾರ್ಷಿಕವಾಗಿ ಹೊಸ ದರ ಜಾರಿಯಾಗಲಿದೆ" ಎಂದು ತಿಳಿಸಿದೆ.
ಇನ್ನು ಈ ವಾರ್ಷಿಕ ದರ ಏರಿಕೆಯು 96.10 ಕಿ.ಮೀ ಉದ್ದದ ನಮ್ಮ ಮೆಟ್ರೋ ಲೈನ್‌ಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಕನಿಷ್ಠ ₹1 ರಿಂದ ಗರಿಷ್ಠ ₹5 ರವರೆಗೆ ದರ ಪರಿಷ್ಕರಣೆಯಾಗಲಿದ್ದು, ಪ್ರಯಾಣಿಕರಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ.
ಫೆಬ್ರವರಿ 9, 2026 ರಿಂದ ಜಾರಿಯಾಗುವ ಪರಿಷ್ಕೃತ ದರದ ವಿವರ:
2 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹10 ರಿಂದ ₹11 ರೂ. ಆಗಲಿದೆ.
2-4 ಕಿ.ಮೀ.ಗೆ ₹20 ರಿಂದ ₹21 ರೂ. ಆಗಲಿದೆ.
6-8 ಕಿ.ಮೀ.ಗೆ ₹40 ರಿಂದ ₹42 ರೂ. ರೂ. ಆಗಲಿದೆ
8-10 ಕಿ.ಮೀ. ಪ್ರಯಾಣಕ್ಕೆ ₹50 ರ ಬದಲಿಗೆ ₹53 ರೂ. ಆಗಲಿದೆ.
10-15 ಕಿ.ಮೀ.ಗೆ ₹60 ರಿಂದ ₹63 ಆಗಲಿದೆ.
ಇದಲ್ಲದೆ, ಹೆಚ್ಚಿನ ದೂರದ ಪ್ರಯಾಣಕ್ಕಾಗಿ, ಅಂದರೆ 15-20 ಕಿ.ಮೀ.ಗೆ ₹70 ರಿಂದ ₹74, 20-25 ಕಿ.ಮೀ.ಗೆ ₹80 ರಿಂದ ₹84, ಮತ್ತು 25-30 ಕಿ.ಮೀ. ಹಾಗೂ ಅದಕ್ಕಿಂತ ಹೆಚ್ಚಿನ ದೂರಕ್ಕೆ ₹90 ರಿಂದ ₹95 ಕ್ಕೆ ದರಗಳು ಏರಿಕೆ ಆಗಲಿವೆ ಎಂದು ಹೇಳಲಾಗಿದೆ.


Click it and Unblock the Notifications