ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಟ್ರಾಫಿಕ್ ವಿಚಾರದಲ್ಲಿ ನಮ್ಮ ಮೆಟ್ರೋ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಸಾಮಾನ್ಯವಾಗಿ ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಅಲ್ಲದೇ ಅದಕ್ಕೆ ಶುಲ್ಕ ಕೂಡಾ ವಿಧಿಸಲಾಗುತ್ತದೆ. ಆದ್ರೆ ಇದೀಗ ಮೆಟ್ರೋದಲ್ಲಿ ಪಾರ್ಕಿಂಗ್ (Metro Station Parking) ಮಾಡುವವರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ಕೊಟ್ಟಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಯಾಣಿಕರಿಗೆ ಕೊನೆಯ ಮೈಲಿ ಸಂಪರ್ಕ ಸುಧಾರಿಸಲು ಮಹತ್ವದ ಕ್ರಮ ಕೈಗೊಂಡಿದೆ. ಹಳದಿ, ಹಸಿರು ಮತ್ತು ನೇರಳೆ ಮಾರ್ಗಗಳ 9 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಜಾರಿಗೆ ತರಲು ಮುಂದಾಗಿದೆ. ಇದೇ ಜನವರಿ 27, 2026 ರಂದು ಈ ಮಹತ್ವದ ನಿರ್ಧಾರವನ್ನು ಘೋಷಿಸಲಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ!
ಈ ಉಚಿತ ಪಾರ್ಕಿಂಗ್ ಕೇಂದ್ರಗಳ ನಿರ್ವಹಣೆಗೆ ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. ಫೆಬ್ರವರಿ 9ರವರೆಗೆ ಬಿಡ್‌ಗಳನ್ನು ಸಲ್ಲಿಸಲು ಅವಕಾಶವಿದ್ದು, ನಂತರ ನಿಲ್ದಾಣಗಳನ್ನು ನಿರ್ವಹಿಸುವ ಆಪರೇಟರ್ ಅನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಸದ್ಯ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಗಂಟೆಗೆ 1 ರೂಪಾಯಿ ಮತ್ತು ದಿನಕ್ಕೆ ಗರಿಷ್ಠ 10 ರೂಪಾಯಿ ಶುಲ್ಕವಿದೆ. ಹೊಸ ವಿನಾಯಿತಿ ಈ 9 ಆಯ್ದ ನಿಲ್ದಾಣಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ನಿಲ್ದಾಣಗಳಲ್ಲಿ ಶುಲ್ಕ ಮುಂದುವರಿಯಲಿದೆ.
ಸೈಕಲ್ ಸವಾರರು ಹೆಚ್ಚು ಬಳಸುತ್ತಿದ್ದ ನಿಲ್ದಾಣಗಳನ್ನು ಆಧರಿಸಿ ಈ ಒಂಬತ್ತು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಾಯಂ ಪ್ರಯಾಣಿಕರಿಗೆ ಪ್ರಯೋಜನವಾಗುವ ಉದ್ದೇಶದಿಂದ ಮತ್ತು ಹೆಚ್ಚು ಜನರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಉಚಿತ ಪಾರ್ಕಿಂಗ್ ಸೌಲಭ್ಯವು ಆಯ್ದ 9 ನಿಲ್ದಾಣಗಳಿಗೆ ಸೀಮಿತಗೊಳ್ಳಲಿದೆ. ಆದ್ದರಿಂದ ಮುಂದಿನ ಸೂಚನೆ ಬರುವವರೆಗೆ ಪ್ರಸ್ತುತ ಇರುವ ನಿಯಮ ಮುಂದುವರೆಯಲಿದೆ. ಆ ನಂತರವೇ ಹೊಸ ನಿಯಮ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಬಿಎಂಆರ್‌ಸಿಎಲ್ ಕೈಗೊಂಡಿರುವ ಈ ಕ್ರಮವನ್ನು ಸೈಕಲ್ ಸವಾರರು ಸ್ವಾಗತಿಸಿದ್ದಾರೆ. ಆದರೆ ಈ ಮಧ್ಯೆ ಸೈಕಲ್ ಪಾರ್ಕಿಂಗ್‌ಗೆ ಸುರಕ್ಷತೆ ನೀಡುವಂತೆ ಒತ್ತಿ ಹೇಳಿದ್ದಾರೆ..
ಅನೇಕ ಸೈಕಲ್ ಸವಾರರ ಪ್ರಕಾರ, ಸರಿಯಾದ ಬೀಗ ಹಾಕುವ ಸೌಲಭ್ಯಗಳ ಕೊರತೆ ಸುರಕ್ಷಿತ ಪಾರ್ಕಿಂಗ್‌ಗೆ ಅಡ್ಡಿಯಾಗಿದೆ. ಆದ್ದರಿಂದ ಆ ಸೇವೆಯನ್ನೂ ಒದಗಿಸುವಂತೆ ಕೋರಲಾಗಿದೆ.
ಸೈಕಲ್ ಸವಾರರ ಅಭಿಪ್ರಾಯದ ಪ್ರಕಾರ, ಪಾರ್ಕಿಂಗ್ ಶುಲ್ಕಕ್ಕಿಂತ ಸರಿಯಾದ ಸೌಲಭ್ಯಗಳ ಕೊರತೆಯೇ ಮುಖ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಉತ್ತಮ ಮೂಲಸೌಕರ್ಯ ಒದಗಿಸಿದರೆ, ಸುರಕ್ಷಿತ ಪಾರ್ಕಿಂಗ್‌ಗಾಗಿ ಶುಲ್ಕ ಪಾವತಿಸಲೂ ಅವರು ಸಿದ್ಧರಿದ್ದಾರೆ ಅನ್ನುವಂತಹ ಅಭಿಪ್ರಾಯಗಳು ಬಂದಿದೆ. ಈ ಉಚಿತ ಸೇವೆಯೊಂದಿಗೆ, ಸೈಕಲ್ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಟ್ಟರೆ, ಮೆಟ್ರೋ ಸೇವೆಯಲ್ಲಿ ಇದೊಂದು ಹೊಸ ಮೈಲಿಗಲ್ಲಾಗಲಿದೆ ಎಂಬುದು ಹಲವರ ಅಭಿಪ್ರಾಯ.
ಎಲ್ಲೆಲ್ಲಿ ಈ ಸೇವೆ ಜಾರಿ?
- ಪರ್ಪಲ್ ಲೈನ್‌ನಲ್ಲಿ ಮೈಸೂರು ರೋಡ್ ಮತ್ತು ಬೈಯಪ್ಪನಹಳ್ಳಿ.
- ಗ್ರೀನ್ ಲೈನ್‌ನಲ್ಲಿ ಮಾದಾವರ, ಪೀಣ್ಯ ಇಂಡಸ್ಟ್ರಿ, ಜೆಪಿ ನಗರ.
- ಯೆಲ್ಲೋ ಲೈನ್‌ನಲ್ಲಿ ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಗಿಗುಡ್ಡ, ಜಯದೇವ ಆಸ್ಪತ್ರೆ.


Click it and Unblock the Notifications