ಬೆಂಗಳೂರು (Bengaluru) ಸೇರಿ ದೇಶಾದ್ಯಂತ ಮೆಟ್ರೋ ಸೇವೆ ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅಗತ್ಯ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈಗಾಗಲೇ ಬೆಂಗಳೂರಿನಾದ್ಯಂತ ಮೆಟ್ರೋ ಸೇವೆಯನ್ನು ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಲಾನ್ ಮಾಡುತ್ತಿದೆ. ವೇಗದ ಪ್ರಯಾಣ, ಉತ್ತಮ ಸೇವೆಗಳಿಂದಾಗಿ ಭಾರೀ ಜನಪ್ರಿಯತೆ ಪಡೆದಿದ್ದ ಮೆಟ್ರೋ ಸೇವೆ, ಮಂಗಳವಾರ ರಾತ್ರಿ ತಕ್ಕಮಟ್ಟಿನ ಅಡಚಣೆಗೆ ಕಾರಣವಾಗಿದೆ. ನಮ್ಮ ಮೆಟ್ರೋ (Namma Metro) ಪ್ರಯಾಣಿಕರು (Metro Passengers) ಮಂಗಳವಾರ (ಫೆ.11) ಪೀಕ್ ಅವರ್‌ನಲ್ಲೇ ದೊಡ್ಡ ತೊಂದರೆ ಅನುಭವಿಸಿದ್ದರು. ಆದ್ರೆ ಇದೀಗ ಈ ಬಗ್ಗೆ ಕೊನೆಗೂ ಮೆಟ್ರೋ ಸ್ಪಷ್ಟನೆ ನೀಡಿದೆ.

ಹೌದು, ರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಯುಪಿಐ ಆಧಾರಿತ ಸೇವೆಗಳಲ್ಲಿ ಅಡಚಣೆ ಉಂಟಾಗಿತ್ತು. ಈ ಪರಿಣಾಮ ಮೆಟ್ರೋ ಟಿಕೆಟ್ ಕೌಂಟರ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವುದು ಮತ್ತು ಮೊಬೈಲ್ ಆಪ್‌ಗಳ ಮೂಲಕ ಟಿಕೆಟ್ ಖರೀದಿಸಲು, ಟ್ರಾವೆಲ್ ಕಾರ್ಡ್ ರೀಚಾರ್ಜ್ ಮಾಡಲು ಕಷ್ಟವಾಯ್ತು. ಆದರೆ ಕೆಲವೇ ಗಂಟೆಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಲಾಗಿದೆ.
ಟಿಕೆಟ್ ಕೌಂಟರ್‌ನಲ್ಲಿ ತೊಂದರೆ, ಪ್ರಯಾಣಿಕರ ಪರದಾಟ!
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಪ್ರಕಾರ, ಈ ಸಮಸ್ಯೆ ಸಂಜೆ ಸುಮಾರು 6:40 PM ರಿಂದ 9:00 PM ವರೆಗೆ ಎದುರಾಗಿತ್ತು. ಈ ಅವಧಿಯಲ್ಲಿ ಯುಪಿಐ ವಹಿವಾಟುಗಳ ಸಕ್ಸಸ್ ರೇಟ್ ಕೂಡಾ ತೀವ್ರ ಕುಸಿತ ಕಂಡಿದೆ. ಕೆಲವು ಪ್ರಯಾಣಿಕರಿಗೆ ಹಣ ಕಡಿತವಾಗಿದ್ದರೂ, ಕ್ಯೂಆರ್ ಕೋಡ್ ಬರದೇ, ಟಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಇನ್ನೂ ಕೆಲವು ಪ್ರಯಾಣಿಕರಿಗೆ ಪೇಮೆಂಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆ ಟಿಕೆಟ್ ಕೌಂಟರ್‌ಗಳ ಬಳಿ ದೊಡ್ಡ ಸರತಿ ಸಾಲು ಉಂಟಾಯಿತು. ಅದೇ ಕಾರಣದಿಂದ ಪ್ರಯಾಣಕರ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಕಾರಣವೇನು?
ಇನ್ನು ಈ ಸಮಸ್ಯೆ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶಾದ್ಯಂತ ಎದುರಾಗಿತ್ತು. ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರವ್ಯಾಪಿ ಯುಪಿಐ ಸೇವೆಯಲ್ಲಿ ಭಾರೀ ಸಮಸ್ಯೆ ಉಂಟಾಗಿತ್ತು. ಈ ಪರಿಣಾಮ ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಯುಪಿಐ ವಹಿವಾಟುಗಳು ವಿಫಲವಾಯ್ತು ಎಂದು ಡೌನ್‌ಡಿಟೆಕ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಇನ್ನು ಬಿಎಂಆರ್‌ಸಿಎಲ್ ಕೂಡಾ ಇದೇ ಕಾರಣವನ್ನು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ನಿಲ್ದಾಣದಲ್ಲಿ ಸಂಚಾರ ಅಸ್ತವ್ಯಸ್ತ!
- ಪ್ರಯಾಣಿಕರು ನಗದು ಹೊಂದಿರದ ಕಾರಣ, ಕೆಲವರಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ.
- ಕೆಲವರು ಪದೇ ಪದೇ ಪ್ರಯತ್ನಿಸಿದಕ್ಕಾಗಿ ಡಬಲ್ ಪೇಮೆಂಟ್ ಆಗಿದ್ದು, ಬ್ಯಾಂಕ್‌ಗಳು 24 ಅಥವಾ 48 ಗಂಟೆಗಳಲ್ಲಿ ರೀಫಂಡ್ ಮಾಡುವುದು ತಿಳಿಸಿವೆ.
- ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಯ್ತು. ಅಲ್ಲದೇ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
- ಇನ್ನು ಬಿಎಂಆರ್‌ಸಿಎಲ್ ಪ್ರಕಾರ, ಅದೇ ದಿನ ರಾತ್ರಿ 9 ಗಂಟೆಯ ಸುಮಾರಿಗೆ ಎಲ್ಲಾ ಸೇವೆಗಳು ಮತ್ತೆ ಆರಂಭಗೊಂಡಿದೆ ಎಂದು ಹೇಳಲಾಗಿದೆ.


Click it and Unblock the Notifications