Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಹಾದಿಯಲ್ಲಿ ತಾಂಡವವಾಡ್ತಿದೆ. ಈ ಸಮಯದಲ್ಲಿ ಭಾರತ ದೊಡ್ಡ ಮಟ್ಟದ ಎಚ್ಚರಿಕೆಯನ್ನೇ ತೆಗೆದುಕೊಳ್ಳಬೇಕು. ಏಕೆಂದರೆ ಮುಂಬರುವ ದಿನಗಳಲ್ಲಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು. ಈ ಭಯ ಮಾರುಕಟ್ಟೆಯನ್ನು ಕೂಡ ಅಸ್ಥಿರವಾಗಿಸಿದೆ.

ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ

ಇದರ ಜೊತೆಗೆ ಹಾರ್ಮುಜ್ ಜಲಸಂಧಿಯ ಬಗ್ಗೆ ಕೂಡ ಆತಂಕ ಹೆಚ್ಚಾಗುತ್ತಿದೆ. ಜಗತ್ತಿನ ತೈಲ ಸಾಗಣೆಯಲ್ಲಿ ಈ ಮಾರ್ಗಕ್ಕೆ ಬಹಳ ಮಹತ್ವವಿರುವುದರಿಂದ ಅಲ್ಲಿನ ಯಾವುದೇ ತೊಂದರೆ ಜಾಗತಿಕ ಇಂಧನ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದಹಾಗೆ ಜಾಗತಿಕ ಮಟ್ಟದಲ್ಲಿ ತೈಲದ ಬೆಲೆ ಏರಿದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳಲ್ಲಿ ತಕ್ಷಣದ ಬದಲಾವಣೆ ಕಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತವು ವಿವಿಧ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದಾಗಿದೆ

ಇನ್ನು ಹಾರ್ಮುಜ್ ಮಾರ್ಗದ ಹೊರಗಿನಿಂದಲೂ ಸಾಕಷ್ಟು ತೈಲವನ್ನು ಭಾರತ ಪಡೆಯುತ್ತಿರುವುದರಿಂದ ತಾತ್ಕಾಲಿಕ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗಿದೆ. ದೇಶದಲ್ಲಿ ಬಲವಾದ ಶುದ್ಧೀಕರಣ ಸಾಮರ್ಥ್ಯ ಮತ್ತು ನಿರಂತರ ಪೂರೈಕೆ ವ್ಯವಸ್ಥೆಯೂ ಇದಕ್ಕೆ ನೆರವಾಗಿದೆ.

ಆದರೆ ಇದರರ್ಥ ಭಾರತ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದಲ್ಲ. ಭಾರತ ತನ್ನ ಕಚ್ಚಾ ತೈಲದ ಬಹುಪಾಲನ್ನು ವಿದೇಶಗಳಿಂದಲೇ ಖರೀದಿಸುತ್ತದೆ. ಇದರಿಂದ ಜಾಗತಿಕ ಬೆಲೆ ಏರಿಕೆಗೆ ದೇಶದ ಆರ್ಥಿಕತೆ ಸುಲಭವಾಗಿ ಒಳಪಡುವ ಸಾಧ್ಯತೆ ಇದೆ. ಈಗ ಗ್ರಾಹಕರಿಗೆ ಬೆಲೆ ಏರಿಕೆಯ ಒತ್ತಡ ನೇರವಾಗಿ ಕಾಣಿಸದಿದ್ದರೂ, ಅದರ ಹೊರೆ ಬೇರೆಡೆ ಸೇರುತ್ತಿದೆ. ಹೆಚ್ಚಿನ ಆಮದು ವೆಚ್ಚವನ್ನು ಸರ್ಕಾರ ಮತ್ತು ಸರ್ಕಾರಿ ತೈಲ ಕಂಪನಿಗಳು ಹೊತ್ತುಕೊಳ್ಳಬೇಕಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ದೀರ್ಘಕಾಲ ಸ್ಥಿರವಾಗಿರುವುದು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಂತಹ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಬೆಲೆಗೆ ತೈಲ ಖರೀದಿಸಬೇಕಾಗುತ್ತದೆ. ಆದರೆ ಅದೇ ಪ್ರಮಾಣದ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಂದ ವಸೂಲಿಸಲು ಸಾಧ್ಯವಾಗದಿದ್ದರೆ, ಅವರ ಲಾಭ ಕಡಿಮೆಯಾಗುತ್ತದೆ. ಇದರಿಂದ ಈ ಕಂಪನಿಗಳ ಹಣಕಾಸು ಸ್ಥಿತಿಯ ಮೇಲೂ ಪರಿಣಾಮ ಬೀಳಬಹುದು.

ಇದಕ್ಕೆ ಜೊತೆಗೆ ಎಲ್‌ಪಿಜಿ ದರಗಳಲ್ಲಿ ಏರಿಕೆ ಕಂಡಿರುವುದು ಜನಸಾಮಾನ್ಯರ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಬಹುದು. ಮನೆ ಬಳಕೆಯ ಅನಿಲದ ಬೆಲೆ ಏರಿದರೆ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚುತ್ತದೆ. ವಾಣಿಜ್ಯ ಸಿಲಿಂಡರ್ ದರ ಏರಿದರೆ ಹೋಟೆಲ್, ಸಣ್ಣ ಉದ್ಯಮಗಳು ಮತ್ತು ಸೇವಾ ವಲಯಗಳ ಖರ್ಚು ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಅನೇಕ ವಸ್ತು ಮತ್ತು ಸೇವೆಗಳ ದರ ಕೂಡ ಏರಬಹುದು.

ತೈಲ ಬೆಲೆ ಏರಿಕೆ ದೇಶದ ಒಟ್ಟಾರೆ ಆರ್ಥಿಕತೆಗೆ ಕೂಡ ಅಪಾಯಕಾರಿಯಾಗಿದೆ. ಕಚ್ಚಾ ತೈಲದ ಬೆಲೆ ಹೆಚ್ಚಾದರೆ ಆಮದು ವೆಚ್ಚ ಹೆಚ್ಚುತ್ತದೆ, ಇದರಿಂದ ಚಾಲ್ತಿ ಖಾತೆ ಕೊರತೆ ವಿಸ್ತರಿಸಬಹುದು. ರೂಪಾಯಿ ಮೌಲ್ಯ ದುರ್ಬಲವಾದರೆ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಏಕೆಂದರೆ ಆಗ ಅದೇ ಪ್ರಮಾಣದ ತೈಲ ಖರೀದಿಸಲು ಇನ್ನಷ್ಟು ಹಣ ಬೇಕಾಗುತ್ತದೆ. ಇದರ ನೇರ ಪರಿಣಾಮ ಹಣದುಬ್ಬರದ ಮೇಲೂ ಬೀಳಬಹುದು.

ಹಣದುಬ್ಬರ ಏರಿದರೆ ಜನರ ದಿನನಿತ್ಯದ ಜೀವನ ವೆಚ್ಚವೂ ಹೆಚ್ಚುತ್ತದೆ. ಸಾರಿಗೆ, ಉತ್ಪಾದನೆ, ಅಡುಗೆ ಅನಿಲ, ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳ ಖರ್ಚು ಏರಿಕೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಎಂಬ ಆತಂಕವೂ ಇದೆ. ತೈಲ ಬೆಲೆ ಹೆಚ್ಚು ದಿನಗಳ ಕಾಲ ಏರಿಕೆಯಲ್ಲೇ ಉಳಿದರೆ ಸರ್ಕಾರಕ್ಕೆ ಸುಂಕ ಕಡಿತ, ಸಬ್ಸಿಡಿ ಹೆಚ್ಚಳ ಅಥವಾ ಬೆಲೆ ಪರಿಷ್ಕರಣೆಗಳಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಮುಂದಿನ ದಿನಗಳಲ್ಲಿ ಭಾರತದ ಇಂಧನ ಬೆಲೆ ಪರಿಸ್ಥಿತಿ ಬಹುಮಟ್ಟಿಗೆ ಮಧ್ಯಪ್ರಾಚ್ಯದ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲಿ ಉದ್ವಿಗ್ನತೆ ಕಡಿಮೆಯಾದರೆ ತೈಲ ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಶಾಂತವಾಗಬಹುದು. ಆದರೆ ಸಂಘರ್ಷ ವಿಸ್ತರಿಸಿದರೆ ಜಾಗತಿಕ ಬೆಲೆಗಳಲ್ಲಿ ಮತ್ತಷ್ಟು ಅಸ್ಥಿರತೆ ಕಾಣಬಹುದು. ಅಂತಹ ಸಂದರ್ಭದಲ್ಲಿ ಭಾರತ ಗ್ರಾಹಕರ ರಕ್ಷಣೆ, ಹಣದುಬ್ಬರ ನಿಯಂತ್ರಣ ಮತ್ತು ತೈಲ ಕಂಪನಿಗಳ ಆರ್ಥಿಕ ಆರೋಗ್ಯ..ಈ ಮೂರರ ನಡುವೆ ಸಮತೋಲನ ಸಾಧಿಸಬೇಕಾದ ಸವಾಲು ಎದುರಿಸಲಿದೆ.

ಒಟ್ಟಿನಲ್ಲಿ ನೋಡಿದರೆ, ಇಂದಿನ ಸ್ಥಿರ ದೇಶೀಯ ಇಂಧನ ದರಗಳು ತಾತ್ಕಾಲಿಕ ನೆಮ್ಮದಿ ನೀಡುತ್ತಿವೆ. ಆದರೆ ಅದರ ಹಿಂದೆ ದೊಡ್ಡ ಆರ್ಥಿಕ ಒತ್ತಡ ಅಡಗಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆ ದೀರ್ಘಕಾಲ ಮುಂದುವರಿದರೆ ಭಾರತದಲ್ಲೂ ಇಂಧನ ಬೆಲೆ ನೀತಿಯಲ್ಲಿ ಬದಲಾವಣೆ ಅನಿವಾರ್ಯವಾಗಬಹುದು. ಆದ್ದರಿಂದ ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಸಾಮಾನ್ಯ ಜನರು ಇಂಧನ ಮಾರುಕಟ್ಟೆಯ ಮುಂದಿನ ಬೆಳವಣಿಗೆಗಳನ್ನು ಗಮನದಿಂದ ವೀಕ್ಷಿಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+