ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East War) ತೀವ್ರವಾಗುತ್ತಿದೆ. ಯುದ್ಧದ ಕಾರ್ಮೋಡ, ಜಾಗತಿಕ ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರಿದೆ. ಇದೀಗ ಮಧ್ಯಪ್ರಾಚ್ಯದಲ್ಲಿ ಶುರುವಾದ ಯುದ್ಧದಿಂದಾಗಿ ಬೆಂಗಳೂರಿನಲ್ಲಿ ಪರಡಾಡುವ ಪರಿಸ್ಥಿತಿ ಎದುರಾಗಿದೆ. ಹೌದು, ಇಸ್ರೇಲ್, ಯುಸ್ ಮತ್ತು ಇರಾನ್ ನಡುವಿನ ಯುದ್ಧದ ಬಿಸಿ ಬೆಂಗಳೂರಿಗೂ ತಟ್ಟಿದೆ. ಒಂದು ಕಡೆ ಕಚ್ಚಾ ತೈಲದ ಬೆಲೆ ಏರಿಕೆ, ಹಾರ್ಮುಜ್ ಜಲಸಂಧಿಯ (Strait Of Hormuz) ಮುಚ್ಚುವಿಕೆಯಿಂದಾಗಿ ಭಾರತದ ವ್ಯಾಪಾರದ ಮೇಲೆ ಹಲವು ಪ್ರಭಾವ ಬೀರಿದ್ದು, ಇದೀಗ ಮತ್ತೊಂದೆಡೆ LPG ಸಿಲಿಂಡರ್ ಬಳಕೆ ಮೇಲೂ ಕಟ್ಟುನಿಟ್ಟಿನ ನಿಯಮ ರೂಪಿಸಲು ಸರ್ಕಾರ ಸಜ್ಜಾಗಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಇದೀಗ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ಈ ಪರಿಣಾಮ ಬೆಂಗಳೂರಿನಲ್ಲಿ ಮಂಗಳವಾರದಿಂದ ಹೋಟೆಲ್‌ಗಳು ಬಂದ್ (Hotel Bandh) ಆಗಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಗ್ಯಾಸ್ ಪೂರೈಕೆ ಸ್ಥಗಿತ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ದಿನಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನೇ ಸ್ಥಗಿತಗೊಳಿಸಲಾಗಿದೆ. ತೈಲ ಕಂಪನಿಗಳು ಈ ಹಿಂದೆ 70 ದಿನಗಳ ಕಾಲ ಗ್ಯಾಸ್ ಪೂರೈಕೆ ಬಗ್ಗೆ ಆಶ್ವಾಸನೆ ನೀಡಿದ್ದರೂ, ಇದೀಗ ಸ್ಥಗಿತಗೊಂಡಿದ್ದು ಹೋಟೆಲ್ ಮಾಲೀಕರನ್ನು ಕಂಗಾಲಾಗಿಸಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಹೋಟೆಲ್ ಮಾಲೀಕರು ತೀವ್ರವಾಗಿ ಖಂಡಿಸಿದ್ದು, ಈ ಹಿನ್ನೆಲೆ ಬೆಂಗಳೂರು ಹೋಟೆಲ್ ಸಂಘಟನೆಗಳು ನಗರದಾದ್ಯಂತ ಹೋಟೆಲ್‌ಗಳನ್ನು ಬಂದ್ ಮಾಡುವಂತೆ ಕರೆಕೊಟ್ಟಿದೆ.
ಹೋಟೆಲ್ ಅಸೋಸಿಯೇಷನ್‌ನವರು ಹೇಳಿದ್ದೇನು?
ಹೋಟೆಲ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ್ದು, ಇದು ನಮ್ಮ ನಿರ್ಧಾರ ಅಲ್ಲ, ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದು ಹೇಳಿದ್ದಾರೆ. ಸರ್ಕಾರ ಮೊದಲೇ ನಮಗೆ ಸೂಚನೆ ಕೊಟ್ಟಿದ್ದರೆ, ಈ ರೀತಿ ಪರಿಸ್ಥಿತಿ ಎದುರಿಸುವುದೇ ಬೇಕಾಗಿರಲಿಲ್ಲ. ನಾವು ಬಂದ್ ಮಾಡುವ ನಿರ್ಧಾರಕ್ಕೆ ಬಂದಿಲ್ಲ. ಆದರೆ ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ (ಇಂದು) ಮಧ್ಯಾಹ್ನಕ್ಕೆ ಬೇಕಾಗುವಷ್ಟು ಮಾತ್ರ ಸಿಲಿಂಡರ್ ಇವೆ. ಅದರೊಳಗೆ ಸರ್ಕಾರ ಪೂರೈಕೆ ಮಾಡದೇ ಇದ್ರೆ ಎಲ್ಲಾ ಹೋಟೆಲ್‌ಗಳು ಮುಚ್ಚಲಿದೆ ಎಂದು ಕೃಷ್ಣರಾಜ್ ಹೇಳಿದ್ದಾರೆ.
ಹೋಟೆಲ್ ಬಂದ್, ಗ್ರಾಹಕರಿಗೆ ಸಂಕಷ್ಟ
ಸಾಮಾನ್ಯವಾಗಿ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಸಾವಿರಾರು ಮಂದಿ ಹೋಟೆಲ್ ಅನ್ನೇ ಅವಲಂಬಿಸಿದ್ದಾರೆ. ಬ್ಯುಸಿ ಲೈಫ್, ಆಫೀಸ್ ಕೆಲಸಗಳು, ಕೆಲಸದ ಒತ್ತಡ ಅಂತ ಹೇಳಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹೀಗೆ ಹಲವರು ಹೋಟೆಲ್ ಆಹಾರಗಳನ್ನೇ ತಿನ್ನುತ್ತಿದ್ದಾರೆ. ಆದ್ರೆ ಇದೀಗ ಹಠಾತ್ ಹೋಟೆಲ್ ಬಂದ್ ಆಗಲಿದೆ ಎಂದರೆ ಇವರೆಲ್ಲರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನು ಅಸೋಸಿಯೇಷನ್ ಗೌರವಾಧ್ಯಕ್ಷ ಪಿಸಿ ರಾವ್ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, "ಹೋಟೆಲ್ ಉದ್ಯಮ ಅಗತ್ಯ ಸೇವೆಯಾಗಿದೆ. ವಿದ್ಯಾರ್ಥಿಗಳು, ಹಿರಿಯನಾಗರಿಕರು ಸೇರಿದಂತೆ ಹಲವರು ದೈನಂದಿನ ಊಟ-ತಿಂಡಿಗಾಗಿ ಹೋಟೆಲ್‌ಗೆ ಬರುತ್ತಾರೆ. ಒಂದು ವೇಳೆ ಸಿಲಿಂಡರ್ ಪೂರೈಕೆಯಾಗದಿದ್ದರೆ, ಮಂಗಳವಾರದಿಂದಲೇ ಹೋಟೆಲ್‌ಗಳನ್ನು ಮುಚ್ಚಬೇಕಾಗುತ್ತದೆ" ಎಂದು ಹೇಳಿದ್ದಾರೆ.


Click it and Unblock the Notifications