ಸಿಲಿಕಾನ್ ಸಿಟಿ ಬೆಂಗಳೂರು ಕಟ್ಟಡಗಳ ಕಾಡು ಅಂದ್ರೆ ತಪ್ಪಾಗಲ್ಲ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ನಗರ..ಈ ಸಿಟಿಯಲ್ಲಿ ಮಿಲೇನಿಯಲ್ ಪೀಳಿಗೆ 1 ರಿಂದ 2 ಕೋಟಿ ರೂ. ಮೌಲ್ಯದ ಮನೆಗಳತ್ತ ಹೆಚ್ಚು ಆಕರ್ಷಿತವಾಗುತ್ತಿವೆ. ಈ ವಸತಿ ಶ್ರೇಣಿಗೆ ಭಾರೀ ಬೇಡಿಕೆಯನ್ನು ಉಂಟುಮಾಡಿದೆ. ಈ ಬೇಡಿಕೆಗಳು ಯಾರಲ್ಲಿ ಹೆಚ್ಚಾಗಿದೆ, ವಸತಿ ಯೋಜನೆಗಳು ಎಲ್ಲೆಲ್ಲಿ ಉತ್ತಮವಾಗಿವೆ, ಹೂಡಿಕೆದಾರರ ನೋಟ ಹೇಗಿದೆ ಎಂಬುದರ ಕುರಿತು ಈ ಲೇಖನವಾಗಿದೆ.

ಯಾರು ಈ ಮನೆಗಳನ್ನು ಖರೀದಿಸುತ್ತಿದ್ದಾರೆ?
ಇನ್ನು ಬೆಂಗಳೂರಿನಲ್ಲಿ ಇಂತಹ ಮನೆಗಳನ್ನು ಖರೀದಿ ಮಾಡುವವರ ಪೈಕಿ, ಅತಿ ಹೆಚ್ಚಿನವರು 30-40 ವರ್ಷದೊಳಗಿನ ಯುವ ವೃತ್ತಿಪರರಾಗಿದ್ದಾರೆ. ವಿಶೇಷವಾಗಿ ಐಟಿ ಮತ್ತು ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎನ್ನಬಹುದು. ಹೂಡಿಕೆಯ ದೃಷ್ಟಿಯಲ್ಲಿರುವವರು ಕೂಡ ಮನೆ ಖರೀದಿಸುವುದು ಸಾಮಾನ್ಯ. ಉತ್ತಮ ಸಾಲ ಅರ್ಹತೆ ಹೊಂದಿರುವುದರಿಂದ, ₹1-2 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ಗಳು ಇವರ ಗಮನ ಸೆಳೆಯುತ್ತಿವೆ.
ವಸತಿ ಯೋಜನೆಗಳು ಎಲ್ಲೆಲ್ಲಿವೆ?
ಉತ್ತರದಲ್ಲಿ ಹೆಬ್ಬಾಳ, ಹೆಣ್ಣೂರು, ಕೊತ್ತನೂರು, ಬಾಗಲೂರು ಪ್ರದೇಶಗಳಲ್ಲಿ ಐಟಿ ಕಾರಿಡಾರ್‌ಗೆ ಹತ್ತಿರವಾದ ಸುಸಜ್ಜಿತ ಯೋಜನೆಗಳು ದೊರೆಯುತ್ತಿವೆ. ಈ ಕಡೆ 3BHK ಅಪಾರ್ಟ್‌ಮೆಂಟ್‌ಗಳು ₹1.3-1.8 ಕೋಟಿಯೊಳಗೆ ಲಭ್ಯವಿದ್ದು, ಗಾತ್ರವು ಸುಮಾರು 1400-1500 ಚದರ ಅಡಿ. ಪೂರ್ವದ ವೈಟ್‌ಫೀಲ್ಡ್, ಬೂದಿಗೆರೆ, ಓಲ್ಡ್ ಮದ್ರಾಸ್ ರಸ್ತೆ ಪ್ರದೇಶಗಳಲ್ಲಿ 2 ಮತ್ತು 2.5BHK ಮನೆಗಳು ₹90 ಲಕ್ಷದಿಂದ ₹1.5 ಕೋಟಿಯವರೆಗೆ ಮಾರಾಟವಾಗುತ್ತಿವೆ.
ದಕ್ಷಿಣದ ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ, ಕನಕಪುರ ರಸ್ತೆಯಲ್ಲಿ ಗೇಟೆಡ್ ಸಮುದಾಯದಲ್ಲಿ 2BHK ಮತ್ತು 3BHKಗಳ ಒಳ್ಳೆಯ ಯೋಜನೆಗಳು ಆರಂಭವಾಗಿವೆ. ಕೇಂದ್ರದಲ್ಲಿ ಇಂದಿರಾನಗರ, ಕೋರಮಂಗಲದಂತಹ ಹಳೆಯ ಆದರೆ ಉತ್ತಮವಾಗಿ ನಿರ್ವಹಿತ ಫ್ಲಾಟ್‌ಗಳಿಗೆ ಸತತವಾಗಿ ಬೇಡಿಕೆಯಿದೆ.
ಬಾಡಿಗೆ ಇಳುವರಿ ಮತ್ತು ಹೂಡಿಕೆದಾರರ ನೋಟ:
ಈ ಮನೆಗಳ ಬಾಡಿಗೆ ಇಳುವರಿ ಸಾಮಾನ್ಯವಾಗಿ ಉತ್ತಮವಾಗಿದ್ದು, ಸುಮಾರು 25,000 ದಿಂದ 40,000 ರೂ.ವರೆಗಿನ ಬಾಡಿಗೆ ರೂಪದಲ್ಲಿ ಮಾಸಿಕ ಆದಾಯವನ್ನು ನೀಡುತ್ತದೆ. ಹೀಗಾಗಿ, ಹೂಡಿಕೆದಾರರಿಗೆ ಇದು ಆಕರ್ಷಕ ಆಯ್ಕೆಯಾಗಿದೆ. 1.5 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ಗಳಿಗೆ ವಾರ್ಷಿಕ 3-3.5% ಬಾಡಿಗೆ ಲಾಭ ದೊರೆಯುತ್ತಿದೆ.
ಬದಲಾಗುತ್ತಿರುವ ವಸತಿ ಲ್ಯಾಂಡ್‌ಸ್ಕೇಪ್:
ನೈಟ್ ಫ್ರಾಂಕ್ ವರದಿಯ ಪ್ರಕಾರ, 2025ರ ಮೊದಲಾರ್ಧದಲ್ಲಿ 1-2 ಕೋಟಿ ರೂ. ಮೌಲ್ಯದ ವಸತಿ ಯುನಿಟ್‌ಗಳು 16,255 ರಷ್ಟು ಹೊಸ ಉಡಾವಣೆಯೊಂದಿಗೆ ಶೇ. 44ರಷ್ಟು ವರ್ಷದಿಂದ ವರ್ಷಕ್ಕೆ ವೃದ್ಧಿ ಕಂಡಿವೆ. ಇದನ್ನು ಹೋಲಿಸಿದರೆ 50 ರೂ. ಲಕ್ಷದೊಳಗಿನ ಬಜೆಟ್ ವಸತಿ ಮಾತ್ರ 2,000 ಯುನಿಟ್‌ಗಳನ್ನು ಸೇರಿಸಿತು. ಇದರಿಂದ 'ಆಕ್ಸೆಸಿಬಲ್ ಲಕ್ಸುರಿ' ಎಂಬ ಹೊಸ ಸೆಗ್ಮೆಂಟ್‌ವೊಂದು ಬೆಳೆಯುತ್ತಿದೆ ಎಂಬುದು ಸ್ಪಷ್ಟ.
ಮಿಲೇನಿಯಲ್‌ಗಳ ಮನಸ್ಸಿನಲ್ಲಿ ಏನಿದೆ?
ಮೆಟ್ರೋ ಸಂಪರ್ಕ, ಉದ್ಯೋಗ ಕೇಂದ್ರಗಳಿಗೆ ಹತ್ತಿರ, ಸಮುದಾಯ ಸಂಸ್ಕೃತಿ ಮತ್ತು ಅನುಕೂಲತೆಗಳನ್ನು ಹೊಂದಿರುವ ಯೋಜನೆಗಳತ್ತ ಮಿಲೇನಿಯಲ್‌ಗಳು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಇವರು ತಮ್ಮದೇ ಆದ ಇಂಟೀರಿಯರ್ ಆಯ್ಕೆ, ವಾಸ್ತು ಶಿಸ್ತು, ಪಾರ್ಕಿಂಗ್ ವ್ಯವಸ್ಥೆ, ಕ್ಲಬ್‌ಹೌಸ್, ಪ್ಲೇ ಏರಿಯಾದಂತಹ ಸೌಲಭ್ಯಗಳನ್ನು ವಿಶೇಷವಾಗಿ ನೋಡುತ್ತಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಅಭಿವೃದ್ಧಿಪಡಕರೂ ಈ ಮಾರ್ಗದಲ್ಲಿ ಹೆಚ್ಚು ಯೋಜನೆಗಳನ್ನು ಆರಂಭಿಸುತ್ತಿದ್ದಾರೆ. ಇದು ನಗರ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುತ್ತಿದ್ದು, ಮೌಲ್ಯವರ್ಧನೆಯತ್ತ ಹೆಜ್ಜೆ ಹಾಕುತ್ತಿದೆ.


Click it and Unblock the Notifications