ಬೆಂಗಳೂರು, ಜೂನ್ 11: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೂತನ ಸಮ್ಮಿಶ್ರ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಮರು ನೇಮಕಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸರ್ಕಾರದ 71 ಸಚಿವರೊಂದಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು,ಇದಾದ ಒಂದು ದಿನದ ಬಳಿಕ ಜೂನ್ 10 ರಂದು ಸಂಪುಟದ ವಿವರಗಳನ್ನು ಬಹಿರಂಗಪಡಿಸಲಾಯಿತು. ಸೀತಾರಾಮನ್ ಅವರು ಮೋದಿ ಸರ್ಕಾರದಲ್ಲಿ ಸತತ ಮೂರನೇ ಅವಧಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ.

ಮೋದಿ ನೇತೃತ್ವದ ಕ್ಯಾಬಿನೆಟ್‌ಗಳಲ್ಲಿ (2014 ಮತ್ತು 2019) ಎರಡು ಬಾರಿ ಕೇಂದ್ರ ಸಚಿವರಾಗಿರುವ ಸೀತಾರಾಮನ್ ಮೂರನೇ ಬಾರಿಗೆ ಹೊಸ ಮಂತ್ರಿ ಮಂಡಳಿಯ ಭಾಗವಾಗಿದ್ದಾರೆ. ಅವರು ಹಣಕಾಸು ಸಚಿವಾಲಯಕ್ಕೆ ನೇಮಕಗೊಂಡ ಬಳಿಕ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರ ಖಾತೆಯಲ್ಲಿನ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದಂತಾಯಿತು. ಮೇ 31, 2019 ರಂದು ಹಣಕಾಸು ಸಚಿವಾಲಯದ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ವಾಣಿಜ್ಯ ಮತ್ತು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಜೀವಿತಾವಧಿಯಲ್ಲಿ ಒಮ್ಮೆ ಸಂಭವಿಸುವಂತಹ ಸಾಂಕ್ರಾಮಿಕ ಕಾಲಘಟ್ಟ(ಕೋವಿಡ್) ದಲ್ಲಿ ಭಾರತೀಯ ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ ಮತ್ತು ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ ಸಮಯದಲ್ಲಿ ದೇಶವನ್ನು ವೇಗವಾಗಿ ಬೆಳೆಯುತ್ತಿರುವ ಹಾಗೂ ಪ್ರಮುಖ ಆರ್ಥಿಕತೆಯ ಹಾದಿಯಲ್ಲಿ ಹಳಿತಪ್ಪದಂತೆ ಸಾಗಿಸಿದ ಕೀರ್ತಿ ಸೀತಾರಾಮನ್ ಅವರಿಗೆ ಸಲ್ಲುತ್ತದೆ.
ಭಾರತವು ಈಗ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು,ಹೊರಹೊಮ್ಮಿದ್ದು ಜನವರಿ-ಮಾರ್ಚ್ 2024 ರಲ್ಲಿ,ಭಾರತವು 7.8 ಪ್ರತಿಶತದಷ್ಟು ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನೊಂದೆಡೆ ಸೀತಾರಾಮನ್ ತಮ್ಮ 7 ನೇ ಬಜೆಟ್ ಮಂಡನೆಗೆ ಸಜ್ಜಾಗುತ್ತಿದ್ದು, ಮುಂದಿನ ತಿಂಗಳು ಕೇಂದ್ರ ಸರ್ಕಾರ ಆಯವ್ಯಯ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲರ ಚಿತ್ತ 2024-25 ರ ಪೂರ್ಣ ಬಜೆಟ್‌ನ ಮೇಲೆ ಇದೆ.
ಮೂಲತಃ ತಮಿಳುನಾಡಿನವರಾದ ಸೀತಾರಾಮನ್ ಅವರು ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಸೀತಾರಾಮನ್ ಮತ್ತು ಸಾವಿತ್ರಿ ದಂಪತಿಗೆ ಮಧುರೈನಲ್ಲಿ 18 ಆಗಸ್ಟ್ 1959 ರಂದು ಜನಿಸಿದರು. ಜೆಎನ್‌ಯುಯೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಎಂಫಿಲ್ ಮಾಡಲು ಸೀತಾರಾಮನ್ ದೆಹಲಿಗೆ ಬಂದರು. ಪತಿ ಪರಕಾಲ ಪ್ರಭಾಕರ್ ಜೆಎನ್‌ಯುನಲ್ಲಿ ಓದುತ್ತಿದ್ದಾಗ ಭೇಟಿಯಾಗಿ 1986 ರಲ್ಲಿ ವಿವಾಹವಾದರು. ಈ ದಂಪತಿಗಳಿಗೆ ಪರಕಾಲ ವನ್ಮಯಿ ಎಂಬ ಮಗಳಿದ್ದಾಳೆ.


Click it and Unblock the Notifications