ನವದೆಹಲಿ, ಜುಲೈ 24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ತೆರಿಗೆ ಕಡಿತದ ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಸಾಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಜನತೆಗೆ ಆರ್ಥಿಕ ಬಲ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ದೇಶದ ಆರೋಗ್ಯ ವ್ಯವಸ್ಥೆ ಸುಧಾರಣೆ ಹಾಗೂ ಅಭಿವೃದ್ಧಿಗೆ 89,287 ಕೋಟಿ ರೂ.ಗಳನ್ನು ಕಾಯ್ದಿರಿಸುವ ಜತೆಗೆ ಮೂರು ಕ್ಯಾನ್ಸರ್‌ಗೆ ಸಂಬಂಧಿಸಿದ ಔಷಧಗಳ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ತೆರವುಗೊಳಿಸಲಾಗಿದೆ.
ಎಕ್ಸ್-ರೇ ಟ್ಯೂಬ್‌ಗಳು ಹಾಗೂ ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ರಷ್ಟು ಹಾಗೂ ಪ್ಲಾಟಿನಂ ಔಷಧದ ಮೇಲಿನ ಸುಂಕವನ್ನು ಶೇ.64ರಷ್ಟು ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಹಿಂದಿನ ವರ್ಷದ 88,956 ಕೋಟಿ ರೂ.ಗೆ ಹೋಲಿಸಿದರೆ, ಈ ಬಾರಿ ದೇಶದ ಆರೋಗ್ಯ ಕ್ಷೇತ್ರಕ್ಕೆ 89,287 ಕೋಟಿ ರೂ. ಕಾಯ್ದಿರಿಸುವ ಮೂಲಕ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಕಳೆದ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ 9-14 ವರ್ಷದೊಳಗಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ಇರುವ ಲಸಿಕೆಯನ್ನು ಪ್ರೋತ್ಸಾಹಿಸುವುದಕ್ಕೆ ಹೊಸ ಉಪಕ್ರಮವನ್ನು ಘೋಷಣೆ ಮಾಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಫ್‌ಐಸಿಸಿಐ ಹೆಲ್ತ್ ಸರ್ವೀಸ್ ಕಮಿಟಿ ಅಧ್ಯಕ್ಷ ಹರ್ಷ ಮಹಾಜನ್ ಹೇಳುವ ಪ್ರಕಾರ, ಮೂರು ಜೀವರಕ್ಷಕ ಔಷಧದ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ಕಡಿಮೆ ಮಾಡಿರುವುದು ಸ್ವಾಗತಾರ್ಹ ಕ್ರಮ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಮೂರು ಕ್ಯಾನ್ಸರ್ ಔಷಧದ ಮೇಲೆ ಕಸ್ಟಮ್ಸ್ ಡ್ಯೂಟಿಯಿಂದ ವಿನಾಯಿತಿ ನೀಡಿರುವುದು ಹಾಗೂ ಎಕ್ಸ್‌ರೇ ಟ್ಯೂಬ್, ಫ್ಲಾಟ್ ಪಾನೆಲ್ ಡಿಟೆಕ್ಟರ್ ಸೇರಿದಂತೆ ಕೆಲವು ವೈದ್ಯ ತಂತ್ರಜ್ಞಾನಗಳ ಮೇಲೆ ಸುಂಕ ಕಡಿಮೆಗೊಳಿಸಿರುವುದು ದೇಶೀಯ ಮಟ್ಟದ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದಕ್ಕೆ ಉತ್ತಮ ಕ್ರಮ ಎಂದು ಫೋರ್ಟಿಸ್ ಆಸ್ಪತ್ರೆಯ ಪ್ರಿನ್ಸಿಪಲ್ ಡೈರೆಕ್ಟರ್ ಪ್ರವೀಣ್ ಗುಪ್ತಾ ಹೇಳಿದ್ದಾರೆ. ಜತೆಗೆ ಸರ್ಕಾರದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ತೆಗೆದುಕೊಂಡಿರುವ ಈ ರೀತಿಯ ಉಪಕ್ರಮಗಳಿಂದ ದುಬಾರಿ ವೆಚ್ಚದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವುದಕ್ಕೆ ಅನುಕೂಲವಾಗಲಿದೆ ಎಂದರು.


Click it and Unblock the Notifications