ನವದೆಹಲಿ: ಬರೋಬ್ಬರಿ 4 ವರ್ಷಗಳ ನಂತರ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತಕ್ಕೆ ಇಂದು (ಡಿ.4) ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 4 ಮತ್ತು 5 ರಂದು ದೆಹಲಿಯಲ್ಲಿ ನಡೆಯಲಿರೋ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯನ್ನೂ ಭೇಟಿಯಾಗಲಿದ್ದಾರೆ. ಭಾರತಕ್ಕೆ ರಷ್ಯಾ ಅಧ್ಯಕ್ಷ ಭೇಟಿಯಾಗುತ್ತಿದ್ದಂತೆ ಪ್ರಧಾನಿ ಮೋದಿ (PM Narendra Modi) ಕೂಡಾ ಅವರಿಗೆ ಖಾಸಗಿ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ.

ಇನ್ನು ಮೋದಿ-ಪುಟಿನ್ ಭೇಟಿ ವೇಳೆ ದ್ವಿಪಕ್ಷೀಯ ಕಾರ್ಯತಂತ್ರ, ಆರ್ಥಿಕ ಪಾಲುದಾರಿಕೆ, ರಷ್ಯಾ-ಉಕ್ರೇನ್ ಯುದ್ಧ ಹೀಗೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಕುತೂಹಲ ಹುಟ್ಟಿಸಿದ ಮೋದಿ-ಪುಟಿನ್ ಭೇಟಿ!
ಪ್ರಧಾನಿ ಮೋದಿ ಮತು ಪುಟಿನ್ ಭೇಟಿ ದೇಶ ಮಾತ್ರವಲ್ಲದೇ ವಿಶ್ವದ ನಾಯಕರಲ್ಲಿಯೂ ಭಾರೀ ಕುತೂಹಲ ಹುಟ್ಟಿಸಿದೆ. ರಷ್ಯಾದ ಜೊತೆಗಿನ ಭಾರತದ ಸಂಬಂಧ ನೋಡಿ ಅಮೆರಿಕ ಹಲವಾರು ಬಾರಿ ರೊಚ್ಚಿಗೆದ್ದಿದೆ. ಅಲ್ಲದೇ ಹೆಚ್ಚುವರಿ ಸುಂಕ ವಿಧಿಸುವ ಮೂಲಕವೂ ತನ್ನ ಬುದ್ಧಿಯನ್ನು ತೋರಿಸಿತ್ತು. ಆದ್ರೆ ರಷ್ಯಾ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಯ್ತೇ ಹೊರತು, ಕಮ್ಮಿಯಂತೂ ಆಗಿಲ್ಲ. ಇದೀಗ ಈ ಭೇಟಿ ಭಾರತ ಮತ್ತು ರಷ್ಯಾದ ಸಂಬಂಧ ಹೇಗಿದೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಲಿದೆ.
ಒಂದು ಭೇಟಿ, ಹಲವು ಮಾತುಕತೆ!
ಇನ್ನು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಹಲವು ಮಾತುಕತೆಗಳಿಗೆ ಮುಹೂರ್ತವಾಗಲಿದೆ. ವಿಶೇಷವಾಗಿ ಮಿಲಿಟರಿ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಈಗಾಗಲೇ ರಷ್ಯಾದ ಸಂಸತ್ (ಡುಮಾ) ಭಾರತದ ಜೊತೆ ಮಿಲಿಟರಿ ಒಪ್ಪಂದಕ್ಕೆ ಜೈ ಅಂದಿತ್ತು. ಅಂದರೆ "RELOS" ಒಪ್ಪಂದ. ಇದು ಯುದ್ಧದ ಸಂದರ್ಭದಲ್ಲಿ ಅಥವಾ ಸೈನ್ಯಕ್ಕೆ ಅಗತ್ಯ ಬಂದಾಗ ಒಬ್ಬರಿಗೊಬ್ಬರು ನೆರವಾಗುವುದು. ಸದ್ಯ ಇದರ ಕಾರ್ಯವೈಖರಿ ಬಗ್ಗೆಯೂ ಮಾತುಕತೆ ನಡೆಸುವ ನಿರೀಕ್ಷೆಯಿದೆ.
S-400 ಮಿಸೈಲ್ ಮತ್ತು ಸುಖೋಯ್ ವಿಮಾನದ ಬಗ್ಗೆಯೂ ಚರ್ಚೆ ನಡೆಯಲಿದೆ. ಈಗಾಗಲೇ ಭಾರತಕ್ಕೆ ರಷ್ಯಾದಿಂದ ಬಲಿಷ್ಠ S-400 ಮಿಸೈಲ್ ಸಿಸ್ಟಮ್ ನೀಡುತ್ತಿದೆ. ಉಳಿದ ಯೂನಿಟ್‌ಗಳನ್ನು ನೀಡುವಂತೆ ಭಾರತ ಡಿಮ್ಯಾಂಡ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕಚ್ಚಾ ತೈಲದ ಮಾತುಕತೆ:
ಅಮೆರಿಕಾ ಎಷ್ಟೇ ಒತ್ತಡ ಹೇರಿದರೂ, ರಷ್ಯಾ ಮಾತ್ರ ನಮಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ನೀಡುತ್ತಿದೆ. ಇದೇ ಕಾರಣಕ್ಕೆ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಇನ್ನು ಪೆಟ್ರೋಲ್ ಮಾತ್ರವಲ್ಲದೇ, ನ್ಯೂಕ್ಲಿಯರ್ ಪವರ್ (ಅಣು ವಿದ್ಯುತ್) ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇನ್ನು ಪುಟಿನ್ ಅವರ ಪ್ರಮುಖ ಕಾರ್ಯಕ್ರಮಗಳು ಶುಕ್ರವಾರಕ್ಕೆ ನಿಗದಿಯಾಗಿವೆ. ರಾಜಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪತಿ ಭವನದಲ್ಲಿ ಸ್ವಾಗತಗೊಳ್ಳಲಿದ್ದಾರೆ. ಮುಖ್ಯ ಶೃಂಗಸಭೆ ಮಾತುಕತೆ ಹೈದರಾಬಾದ್ ಹೌಸ್‌ನಲ್ಲಿ ಜರುಗಲಿದೆ ಎನ್ನಲಾಗಿದೆ.
ಮೋದಿ-ಪುಟಿನ್ ಭೋಜನಾನಂತರ, ಪುಟಿನ್ ಭಾರತ-ರಷ್ಯಾ ವಾಣಿಜ್ಯ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಪುಟಿನ್ ಭೇಟಿಯಾಗಲಿದ್ದಾರೆ.
ಈ ವರ್ಷದ SCO ಶೃಂಗಸಭೆ ವೇಳೆ ಮೋದಿ ಕೊನೆಯ ಬಾರಿಗೆ ಪುಟಿನ್ ಅವರನ್ನು ಭೇಟಿಯಾಗಿದ್ದರು. 2024ರಲ್ಲಿ ಉಭಯ ನಾಯಕರು 5 ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. "ಈ ಭೇಟಿಯು ರಷ್ಯಾ-ಭಾರತ ಸಂಬಂಧಗಳ ಕಾರ್ಯವೈಖರಿ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅವಕಾಶ ನೀಡುತ್ತದೆ. ಮುಖ್ಯ ಮಾತುಕತೆ, ವಾಣಿಜ್ಯ ವೇದಿಕೆ ಭೇಟಿ, ಭಾರತದಲ್ಲಿ RT ಟಿವಿ ಚಾನೆಲ್ ಉದ್ಘಾಟನಾ ಸಮಾರಂಭವೂ ಕಾರ್ಯಕ್ರಮದಲ್ಲಿ ಸೇರಿವೆ," ಎಂದು ಉಷಾಕೋವ್ ವಿವರಿಸಿದರು.


Click it and Unblock the Notifications