ದೇಶದ ಹಲವು ನಗರಗಳ ಕನಸು ವಂದೇ ಭಾರತ್ (Vande Bharat Express).ಈಗಾಗಲೇ ದೇಶದೆಲ್ಲೆಡೆ ವಂದೇ ಭಾರತ್ ರೈಲು ವ್ಯಾಪಿಸಿದೆ. ಸಾಮಾನ್ಯ ರೈಲಿಗಿಂತ ಈ ವಂದೇ ಭಾರತ್ ರೈಲು ಹೈಸ್ಪೀಡ್ ಆಗಿದೆ. ಅದೇ ಕಾರಣದಿಂದ ಹೆಚ್ಚಿನ ಪ್ರಯಾಣಿಕರು ವಂದೇ ಭಾರತ್ ರೈಲು ಸಂಚಾರವನ್ನು ಆಯ್ಕೆ ಮಾಡುತ್ತಾರೆ. ಇದೀಗ ವಂದೇ ಭಾರತ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ. ಎರ್ನಾಕುಲಂ-ಬೆಂಗಳೂರು (Ernakulam-Bengaluru) ನಡುವೆ ಭಾರತೀಯ ರೈಲ್ವೆಯ ಮಹತ್ವದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ. ಇನ್ನು ಈ ಹೊಸ ಬೆಂಗಳೂರು ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನರೇಂದ್ರ ಮೋದಿ (Narendra Modi) ನವೆಂಬರ್ 8 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಹೊಸ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೊಚ್ಚಿ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಇದು ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದ ನಡುವಿನ ಸಂಪರ್ಕ, ವ್ಯಾಪಾರಕ್ಕಾಗಿ ಮತ್ತಷ್ಟು ಪ್ರಯೋಜನವಾಗಲಿದೆ.
11 ಗಂಟೆಯಿಂದ 9 ಗಂಟೆಗೆ ಇಳಿಕೆ!
ಈ ವಂದೇ ಭಾರತ್ ರೈಲು ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು 11 ಗಂಟೆಯಿಂದ ಕೇವಲ 9 ಗಂಟೆಗಳಿಗೆ ಇಳಿಸಲಿದೆ. ಪ್ರಸ್ತುತ, ಈ ಮಾರ್ಗದಲ್ಲಿ ಸಂಚರಿಸುವ ಇತರ ಸಾಮಾನ್ಯ ರೈಲುಗಳು 11 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದರೆ ಹೊಸ ವಂದೇ ಭಾರತ್ ರೈಲಿನಿಂದಾಗಿ ಸಮಯ ಸ್ವಲ್ಪ ಉಳಿಯಲಿದೆ. ಇನ್ನು ಈ ರೈಲು ಕೇರಳಿಗರು, ವಿಶೇಷವಾಗಿ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ವೇಗವಾದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ನೀಡುವ ಮೂಲಕ ಅನುಕೂಲವಾಗಲಿದೆ.
ಸದರ್ನ್ ರೈಲ್ವೆ (SR) ವಲಯವು ಈ ಹೊಸ ರೈಲಿನ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇದು ದಕ್ಷಿಣ ಭಾರತದಲ್ಲಿ ವಂದೇ ಭಾರತ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 ನಿಲ್ದಾಣ, 8 ಬೋಗಿಗಳು:
ರೈಲು ಸಂಖ್ಯೆ 26651/26652 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೊಯಮತ್ತೂರು, ಪಾಲಕ್ಕಾಡ್ ಮಾರ್ಗವಾಗಿ ಸಂಚಾರ ಮಾಡಲಿದೆ. ಇನ್ನು ಎರ್ನಾಕುಲಂ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಪ್ರಯಾಣದಲ್ಲಿ, ಈ ರೈಲು ಒಟ್ಟು ಏಳು ನಿಲ್ದಾಣಗಳಲ್ಲಿ ನಿಲ್ಲಲಿದೆ. ಇನ್ನು ಉದ್ಘಾಟನಾ ದಿನದ ವಿಶೇಷ ರೈಲು ಸಂಖ್ಯೆ 06652 ಬೆಳಿಗ್ಗೆ 8 ಗಂಟೆಗೆ ಹೊರಟು ಸಂಹೆ 5.50 ಕ್ಕೆ ಕೆಸಎಸ್‌ಆರ್ ಬೆಂಗಳೂರಿಗೆ ಆಗಮಿಸಲಿದೆ ಎನ್ನಲಾಗಿದೆ.
ಎರ್ನಾಕುಲಂ ಟು ಬೆಂಗಳೂರು ನಿಲ್ದಾಣಗಳು: ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ನಗರಗಳಿಗೂ ಸಂಪರ್ಕ ಲಭ್ಯವಾಗಲಿದೆ.
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ರೈಲು ಸಮಯ:
ರೈಲು ಸಂಖ್ಯೆ 26651 ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 05:10ಕ್ಕೆ ಹೊರಟು ಮಧ್ಯಾಹ್ನ 01:50ಕ್ಕೆ ಎರ್ನಾಕುಲಂ ತಲುಪಲಿದೆ. ಮತ್ತೆ ಎರ್ನಾಕುಲಂನಿಂದ ರೈಲು ಸಂಖ್ಯೆ 26652 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಾಹ್ನ 02:20ಕ್ಕೆ ಎರ್ನಾಕುಲಂನಿಂದ ಹೊರಟು ರಾತ್ರಿ 11:00ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ಇನ್ನು ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಭಾರತೀಯ ರೈಲ್ವೆ ಶೀಘ್ರದಲ್ಲೇ ಆರಂಭಿಸಲಿದೆ ಎಂದು ವರದಿಯಾಗಿದೆ. ಪ್ರಯಾಣಿಕರು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಟಿಕೆಟ್ ಬುಕ್ ಮಾಡಬಹುದು. ಆನ್‌ಲೈನ್ ಬುಕಿಂಗ್ ಮಾಡಲು ನೀವು ಐಆರ್‌ಸಿಟಿಸಿ ಬಳಕೆದಾರ ಐಡಿ ಅಗತ್ಯವಿದೆ, ಆದರೆ ಆಫ್‌ಲೈನ್ ಬುಕಿಂಗ್‌ಗಳನ್ನು ಹತ್ತಿರದ ರೈಲ್ವೆ ಕಾಯ್ದಿರಿಸುವಿಕೆ ಕೌಂಟರ್‌ನಲ್ಲಿ ಮಾಡಬಹುದು.


Click it and Unblock the Notifications