ನವದೆಹಲಿ, ಮೇ 21: ಎಜ್ಯುಟೆಕ್ ಕಂಪನಿ ಬೈಜೂಸ್ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದ್ದು, ಇದೀಗ ಸಂಸ್ಥೆಯ ಸಲಹಾ ಸಮಿತಿಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಮತ್ತು ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿವಿ ಮೋಹನ್‌ದಾಸ್ ಪೈ ಬೈಜೂಸ್ ತೊರೆಯಲಿದ್ದಾರೆ.
ರಜನೀಶ್ ಕುಮಾರ್ ಮತ್ತು ಮೋಹನ್‌ದಾಸ್ ಪೈ ಈ ಜೋಡಿಯು , ಕಾನೂನು ಸಮಸ್ಯೆಗಳ ನಡುವೆ ಬೈಜು ಭವಿಷ್ಯದ ಬಗ್ಗೆ ಕಾಳಜಿವಹಿಸುವ ಹೂಡಿಕೆದಾರರಿಗೆ ಭರವಸೆ ನೀಡಲು ರಚಿಸಲಾದ ಸಲಹಾ ಸಮಿತಿಯ ಭಾಗವಾಗಿತ್ತು. ಇವರಿಬ್ಬರ ಒಂದು ವರ್ಷದ ಅಧಿಕಾರಾವಧಿಯು ಜೂನ್ 30 ರಂದು ಕೊನೆಗೊಳ್ಳಲಿದ್ದು , ಮತ್ತೆ ಒಪ್ಪಂದಗಳನ್ನು ನವೀಕರಿಸಲು ಬಯಸದೇ ಸಲಹಾ ಸಮಿತಿಯಿಂದ ನಿರ್ಗಮಿಸಲು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

ರಜನೀಶ್ ಕುಮಾರ್ ಮತ್ತು ಮೋಹನ್‌ದಾಸ್ ಪೈ ಬೈಜೂಸ್ ಮಾತೃ ಸಂಸ್ಥೆ ಥಿಂಕ್ ಆಂಡ್ ಲರ್ನ್ ಸಂಸ್ಥಾಪಕ ಬೈಜು ರವೀಂದ್ರನ್ ಚರ್ಚಿಸಿದ ನಂತರ ಸಲಹಾ ಮಂಡಳಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಬೈಜೂಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಲಹಾ ಸಮಿತಿಯು ಹಣಕಾಸು, ತಂಡದ ಪುನರಚನೆ ಮತ್ತು ಷೇರುದಾರರೊಂದಿಗೆ ಸಂವಹನವನ್ನು ಸುಧಾರಿಸಲು ಬೈಜುಸ್‌ಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
"ಸಲಹೆಗಾರರಾಗಿ ಕಂಪನಿಯೊಂದಿಗಿನ ನಮ್ಮ ಒಪ್ಪಂದ ಒಂದು ವರ್ಷದವರೆಗೆ ಸ್ಥಿರ-ಅವಧಿಯ ಆಧಾರದ ಮೇಲೆ ಇತ್ತು. ಸಂಸ್ಥಾಪಕರೊಂದಿಗಿನ ಚರ್ಚೆಯ ನಂತರ ಸಲಹಾ ಮಂಡಳಿಯ ಅಧಿಕಾರಾವಧಿಯನ್ನು ವಿಸ್ತರಿಸುವುದು ಬೇಡ ಎಂಬ ನಿರ್ಧಾರಕ್ಕೆ ಪರಸ್ಪರ ಬರಲಾಯಿತು. ಔಪಚಾರಿಕ ಒಪ್ಪಂದ ಮುಕ್ತಾಯವಾದರೂ, ಸಂಸ್ಥಾಪಕರು ಮತ್ತು ಕಂಪನಿಯು ಯಾವುದೇ ಸಲಹೆಗಾಗಿ ಯಾವ ಸಮಯದಲ್ಲೂ ನಮ್ಮನ್ನು ಸಂಪರ್ಕಿಸಬಹುದು. ಸಂಸ್ಥಾಪಕರು ಮತ್ತು ಕಂಪನಿಯು ಭವಿಷ್ಯದಲ್ಲಿ ಉತ್ತಮವಾಗಲಿ ಎಂದು ನಾವು ಶುಭಹಾರೈಸುತ್ತೇವೆ "ಎಂದು ಕುಮಾರ್ ಮತ್ತು ಪೈ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗದು ಕೊರತೆ, ಹಣಕಾಸು ವರದಿಯಲ್ಲಿನ ವಿಳಂಬಗಳು, ಸಾಲದಾತರು ಮತ್ತು ಹೂಡಿಕೆದಾರರೊಂದಿಗಿನ ಕಾನೂನು ವಿವಾದಗಳು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಕುಮಾರ್ ಮತ್ತು ಪೈ ಅವರು ಬೈಜುಸ್‌ನೊಂದಿಗಿನ ಒಪ್ಪಂದವನ್ನು ನವೀಕರಿಸದಿರುವ ನಿರ್ಧಾರ ಹೊರಬಿದ್ದಿದೆ.
"ಕಳೆದೊಂದು ವರ್ಷದಿಂದ ರಜನೀಶ್ ಕುಮಾರ್ ಮತ್ತು ಮೋಹನ್‌ದಾಸ್ ಪೈ ಅವರು ಅಮೂಲ್ಯವಾದ ಬೆಂಬಲವನ್ನು ನೀಡಿದ್ದಾರೆ. ಕೆಲವು ವಿದೇಶಿ ಹೂಡಿಕೆದಾರರಿಂದ ನಡೆಯುತ್ತಿರುವ ದಾವೆಗಳು ನಮ್ಮ ಯೋಜನೆಗಳನ್ನು ವಿಳಂಬಗೊಳಿಸಿದೆ. ಸಲಹೆಗಾರರೊಂದಿಗಿನ ಸಂಬಂಧವನ್ನು ಕಂಪನಿಯು ಗೌರವಿಸುತ್ತದೆ ಮತ್ತು ಕಷ್ಟದ ಸಮಯದಲ್ಲಿ ಕಂಪನಿಯನ್ನು ಮುನ್ನಡೆಸುವಲ್ಲಿ ಅವರ ಎಲ್ಲಾ ಪ್ರಯತ್ನಗಳನ್ನು ಪ್ರಶಂಸಿಸುತ್ತದೆ" ಎಂದು ಬೈಜೂಸ್ ಹೇಳಿಕೆಯಲ್ಲಿ ತಿಳಿಸಿದೆ.
ಇಂದು ಉದ್ಯೋಗಿಗಳಿಗೆ ಸಂಬಳ ನೀಡುವಲ್ಲಿ ವಿಳಂಬವನ್ನು ಎದುರಿಸುತ್ತಿರುವ ಬೈಜೂಸ್, 2022 ರಲ್ಲಿ ಉತ್ತುಂಗದಲ್ಲಿದ್ದು, ಸುಮಾರು 50,000 ಉದ್ಯೋಗಿಗಳನ್ನು ಹೊಂದಿತ್ತು, ಇದರಲ್ಲಿ edtech ಸಂಸ್ಥೆಯ ವಿವಿಧ ಅಂಗಸಂಸ್ಥೆಗಳು ಸೇರಿವೆ. ಆದರೆ ನಷ್ಟದ ಹಾದಿಯಲ್ಲಿ ನಡೆಯುತ್ತಿರುವ ಬೈಜೂಸ್ ಈಗ ಸುಮಾರು 12,000 ಉದ್ಯೋಗಿಗಳನ್ನು ಹೊಂದಿದೆ.


Click it and Unblock the Notifications