ಬೆಂಗಳೂರು (Bengaluru) ಮಾತ್ರವಲ್ಲದೇ ದೇಶದ ವಿವಿಧೆಡೆ ಇಂಡಿಗೋ ವಿಮಾನಗಳ ಹಾರಾಟ ನಿರಂತವಾಗಿ ರದ್ದಾಗುತ್ತಿದೆ. ಇದೀಗ ಸತತ 3ನೇ ದಿನವೂ ಇಂಡಿಗೋ ತನ್ನ ವಿಮಾನ ಹಾರಾಟವನ್ನು ರದ್ದು ಮಾಡಿದೆ. ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Airport) ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿ ಮತ್ತು ನಿರಂತರ ವಿಳಂಬದಿಂದಾಗಿ ನೂರಾರು ಪ್ರಯಾಣಿಕರು ರಾತ್ರಿಯಿಡೀ ತೀವ್ರ ಪರದಾಡುವಂತಾಗಿದೆ. ಡಿಸೆಂಬರ್ 5, 2025 ರಂದು, ಬಹು ನಗರಗಳಿಂದ ಬರುವ ಮತ್ತು ಹೊರಡುವ ಒಟ್ಟು 102 ಇಂಡಿಗೋ ವಿಮಾನ ಸಂಚಾರಗಳನ್ನು (IndiGo Flights) ರದ್ದುಗೊಳಿಸಲಾಗಿದೆ. ಈ ನಿರ್ಧಾರದಿಂದ ಸದ್ಯ ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿದೆ..

ವರದಿ ಪ್ರಕಾರ, ಡಿಸೆಂಬರ್ 5 ರಂದು ರದ್ದಾದ 102 ವಿಮಾನಗಳಲ್ಲಿ 52 ಆಗಮನ ಮತ್ತು 50 ನಿರ್ಗಮನ ವಿಮಾನಗಳು ಸೇರಿವೆ. ಕಳೆದ ನಾಲ್ಕು ದಿನಗಳಿಂದಲೂ ಇಂಡಿಗೋ ಈ ಸಮಸ್ಯೆಗೆ ಗುರಿಯಾಗುತ್ತಲೇ ಇದೆ. ಡಿಸೆಂಬರ್ 4 ರಂದು 99 ವಿಮಾನಗಳು, ಡಿಸೆಂಬರ್ 3 ರಂದು 62 ವಿಮಾನಗಳು ಮತ್ತು ಡಿಸೆಂಬರ್ 2 ರಂದು 20 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಪೈಲಟ್‌ಗಳ ಕರ್ತವ್ಯದ ಸಮಯದಲ್ಲಾದ ಬದಲಾವಣೆ ಮತ್ತು ಹೊಸ ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ಇಂಡಿಗೋ ತನ್ನ ಕಾರ್ಯಸೂಚಿಯನ್ನು ಸರಿಯಾಗಿ ರೂಪಿಸದ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವರದಿಯಾಗಿದೆ.
ಇನ್ನು ವಿಮಾನ ನಿಲ್ದಾಣದಲ್ಲಿ ತೀವ್ರ ಅವ್ಯವಸ್ಥೆ ಸೃಷ್ಟಿಯಾಗಿದ್ದು, ನೂರಾರು ಪ್ರಯಾಣಿಕರು 12 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿ ಪರದಾಡಿದ್ದಾರೆ. ವಿಮಾನಗಳ ನಿರಂತರ ವಿಳಂಬದಿಂದ ರೋಸಿಹೋದ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1ರ ನೆಲದ ಮೇಲೆಯೇ ಮಲಗಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 5 ರಂದು ಬೆಳಿಗ್ಗೆ 8 ಗಂಟೆಗೆ ಎಕ್ಸ್‌ನಲ್ಲಿ (X) ಟ್ವೀಟ್ ಮಾಡಿದ ನಿತಿನ್ ಮಾಲ್ಪಾನಿ, "ಫ್ಲೈಟ್ ನಂಬರ್ 6E684... ಇಂಡಿಗೋ ವಿಮಾನ, ಇದು ನಿಂತು 12 ಗಂಟೆಗಳಿಗೂ ಹೆಚ್ಚಾಗಿದೆ . ನಿನ್ನೆ ಸಂಜೆ 8 ರಿಂದ ನಾವು ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇವೆ ಮತ್ತು ಇನ್ನೂ ಇಲ್ಲೇ ಇದ್ದೇವೆ. ಕೇವಲ ಸಮಯವನ್ನು ಬದಲಾಯಿಸುವ ಮೂಲಕ ನಮ್ಮೊಂದಿಗೆ ಆಟವಾಡುತ್ತಿದ್ದೀರಿ. ಸ್ವಲ್ಪ ನಾಚಿಕೆಯಾಗಬೇಕು ನಿಮಗೆ... ಇಲ್ಲಿ ಮಕ್ಕಳು, ಹಿರಿಯರು ಮತ್ತು ರೋಗಿಗಳು ಇದ್ದಾರೆ" ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಇಂಡಿಗೋ ವಿಮಾನ ಹಾರಾಟದಲ್ಲಿ ಹೆಚ್ಚಾಗಿ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಸ್ವತಃ ಕಂಪನಿಯೇ ಸ್ಪಷ್ಟನೆ ನೀಡಿದೆ. ಅಲ್ಲದೇ ಮುಂದಿನ ಕೆಲವು ದಿನ ಈ ಸಮಸ್ಯೆ ಮುಂದುವರೆಯಲಿದೆ ಎಂದು ಪ್ರಯಾಣಿಕರಿಗೆ ಸ್ಪಷ್ಟನೆ ನೀಡಿದೆ. ಆದ್ರೆ ಕೆಲವು ಪ್ರಯಾಣಿಕರು ಲಗೇಜ್ ಸಿಗದೆ, ಊರಿಗೆ ಹೋಗದೆ, ಆಹಾರ, ನೀರು ಇಲ್ಲದೇ ವಿಮಾನ ನಿಲ್ದಾಣದಲ್ಲಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಇನ್ನೆಷ್ಟು ದಿನ ಈ ಸಮಸ್ಯೆ ಮುಂದುವರೆಯಲಿದೆ ಎಂದು ಜನ ಕೇಳುತ್ತಿದ್ದಾರೆ.


Click it and Unblock the Notifications