ಕಳೆದೊಂದು ವಾರದಿಂದ ಹಲವಾರು ವಿಮಾನಗಳು (Flight) ತನ್ನ ಸೇವೆಯಲ್ಲಿ ವಿಳಂಬವನ್ನು ಎದುರಿಸಿದೆ. ಅದರಲ್ಲೂ ಇಂಡಿಗೋ ಏರ್‌ಲೈನ್ ಸದ್ಯ ಭಾರೀ ಸುದ್ದಿಯಲ್ಲಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಮಂಗಳವಾರ ಮತ್ತು ಬುಧವಾರ ದೇಶಾದ್ಯಂತ ಸುಮಾರು 150ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಹಲವು ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಸಿಬ್ಬಂದಿಗಳ ಕೆಲಸದ ವೇಳಾಪಟ್ಟಿ, ತಾಂತ್ರಿಕ ಸಮಸ್ಯೆಗಳಿಂದ ಇಂಡಿಗೋ ವಿಮಾನ ಸೇವೆಗಳಲ್ಲಿ (IndiGo) ಅಡೆತಡೆಯನ್ನು ಎದುರಿಸುವಂತಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ತೀವ್ರ ಮಟ್ಟದ ಈ ವ್ಯತ್ಯಯಕ್ಕೆ ಕ್ಷಮೆಯಾಚಿಸಿರುವ ವಿಮಾನಯಾನ ಸಂಸ್ಥೆ, ಶುಕ್ರವಾರದವರೆಗೂ ಮತ್ತಷ್ಟು ವಿಮಾನ ರದ್ದತಿಗಳನ್ನು ನಿರೀಕ್ಷಿಸುವಂತೆ ಪ್ರಯಾಣಿಕರಿಗೆ ಮೊದಲೇ ಸೂಚನೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಕಾರ್ಯಾಚರಣೆಗಳನ್ನು ಸರಿ ಮಾಡುವ ಉದ್ದೇಶದಿಂದ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದೆ.
ವಿಮಾನಯಾನ ಸಂಸ್ಥೆಯ ವಕ್ತಾರರೊಬ್ಬರು, "ಕಳೆದ ಎರಡು ದಿನಗಳಿಂದ ಇಂಡಿಗೋದ ಕಾರ್ಯಾಚರಣೆಗಳು ನಮ್ಮ ನೆಟ್‌ವರ್ಕ್‌ನಲ್ಲಿ ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ. ಇದರಿಂದ ಉಂಟಾದ ಅನಾನುಕೂಲತೆಗಾಗಿ ನಮ್ಮ ಗ್ರಾಹಕರಲ್ಲಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ" ಎಂದು ಹೇಳಿದ್ದಾರೆ. ಈ ವೈಫಲ್ಯಕ್ಕೆ ತಾಂತ್ರಿಕ ದೋಷಗಳು, ಪ್ರತಿಕೂಲ ಹವಾಮಾನ, ಹೆಚ್ಚಿದ ದಟ್ಟಣೆ ಮತ್ತು ನವೆಂಬರ್‌ನಲ್ಲಿ ಜಾರಿಗೆ ಬಂದ ಅಪ್ಡೇಟೆಡ್ ವಿಮಾನ ಕೆಲಸದ ಸಮಯದ ಮಿತಿಗಳು (FDTL) ಸೇರಿದಂತೆ ಹಲವು ಅಂಶಗಳು ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ.
ಇನ್ನು ಈ ಸಮಸ್ಯೆಗೆ ಮತ್ತೊಂದು ಕಾರಣವಿತ್ತು. ಅದೇನೆಂದರೆ ನವೆಂಬರ್ 29-30ರ ವಾರಾಂತ್ಯದಲ್ಲಿ ಏರ್‌ಬಸ್ ಎ320 ವರ್ಗದ ವಿಮಾನಗಳ ಸಾಫ್ಟ್‌ವೇರ್ ಅಪ್ಡೇಟ್ ಮಾಡಲು ಜಾರಿಗೊಳಿಸಿದ ಪ್ರಕಟಣೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ದ ಮಾಹಿತಿಯ ಪ್ರಕಾರ, ಇಂಡಿಗೋ ಈಗಾಗಲೇ ಸಿಬ್ಬಂದಿ ಕೊರತೆಯಿಂದ ಸಂಕಷ್ಟದಲ್ಲಿತ್ತು. ನವೆಂಬರ್‌ನಲ್ಲಿ 1,232 ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ 755 ವಿಮಾನ ರದ್ದತಿಗಳಿಗೆ ಎಫ್‌ಡಿಟಿಎಲ್ ಸಮಸ್ಯೆಗಳನ್ನು ಕಾರಣವೆಂದು ಹೇಳಲಾಗಿದೆ.
ಎಲ್ಲೆಲ್ಲಾ, ಎಷ್ಟು ವಿಮಾನಗಳು ರದ್ದು?
- ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 42 ದೇಶೀಯ ವಿಮಾನಗಳು (22 ಆಗಮನ, 20 ನಿರ್ಗಮನ) ರದ್ದಾಗಿದೆ.
- ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ 33 ವಿಮಾನಗಳು ರದ್ದಾಗಿದೆ.
- ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ 51 ಕ್ಕೂ ಅಧಿಕ ವಿಮಾನಗಳು ರದ್ದು.
- ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದು.
ಕಾರಣವೇನು?
- ತಾಂತ್ರಿಕ ದೋಷ ಮತ್ತು ಹೊಸ FDTL ನಿಯಮಗಳಿಂದ.
- ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಹವಾಮಾನ ಬದಲಾವಣೆ, ವಿಮಾನ ನಿಲ್ದಾಣದಲ್ಲಾದ ದಟ್ಟಣೆ
- ಪೈಲಟ್‌ಗಳ ಕೊರತೆ
- ಹೊಸ FDTL ನಿಯಮಗಳು ಪೈಲಟ್‌ಗಳ ವಾರದ ವಿಶ್ರಾಂತಿ ಸಮಸಯವನ್ನು 48 ಗಂಟೆಗೆ ಹೆಚ್ಚಿಸಿದೆ.
ಏನಿದು FDTL ನಿಯಮ?
ಎಫ್‌ಡಿಟಿಎಲ್ ಎಂದರೆ ವಿಮಾನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವಾರದ ವಿಶ್ರಾಂತಿ ಅವಧಿಯನ್ನು 48 ಗಂಟೆಗಳವರೆಗೆ ಹೆಚ್ಚಿಸುವುದು. ಅಲ್ಲದೇ ರಾತ್ರಿ ವೇಳೆ ಕರ್ತವ್ಯದ ಸಮಯವನ್ನು ವಿಸ್ತರಣೆ ಮಾಡುವುದಾಗಿದೆ.
ಸದ್ಯ ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬದಿಂದಾಗಿ ಪ್ರಯಾಣಿಕರು ತಾವು ಪ್ರಯಾಣ ಮಾಡುವ ವಿಮಾನದ ವೆಬ್‌ಸೈಟ್‌ನಲ್ಲಿ ಅಥವಾ ಆಪ್‌ನಲ್ಲಿ ಸ್ಥಿತಿಯನ್ನು ಗಮನಿಸಿಕೊಂಡು ಮುಂದುವರೆದರೆ ಉತ್ತಮ.


Click it and Unblock the Notifications