ಬೆಂಗಳೂರು, ಭಾರತದ ಐಟಿ ರಾಜಧಾನಿ, ಸ್ಟಾರ್ಟ್‌ಅಪ್ ಹಬ್, ಸಿಲಿಕಾನ್ ವ್ಯಾಲಿ ಎನ್ನುವ ಹೆಸರಿನಿಂದಲೇ ಹೆಸರಾಗಿದೆ. ಇಲ್ಲಿನ ಹವಾವಾನ, ಉದ್ಯೋಗಾವಕಾಶಗಳು ದೇಶ, ವಿದೇಶಗಳಿಂದ ಜನರನ್ನು ಆಕರ್ಷಿಸುತ್ತವೆ. ಇದೇ ಕಾರಣದಿಂದ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆದುಕೊಳ್ಳಲು ಲಕ್ಷ ಲಕ್ಷ ಹಣ ಸುರಿಯಬೇಕು. ಅದರಲ್ಲೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸೈಟು ಪಡೆಯಲು ಲಕ್ಷಗಳು ಏನಕ್ಕೂ ಆಗಲ್ಲ, ಅಲ್ಲೇನಿದ್ದರೂ ಕೋಟಿ ಕೋಟಿ ಇದ್ದರೆ ಮಾತ್ರ ಸೈಟು ಖರೀದಿ ಸಾಧ್ಯ.
2024ರ ಮೊದಲ ತ್ರೈಮಾಸಿಕ ವರದಿಯ ಪ್ರಕಾರ ಬೆಂಗಳೂರಿನಲ್ಲಿ ವಸತಿ ಬೆಲೆಗಳು 19 ಪ್ರತಿಶತ ಏರಿಕೆಯಾಗಿದೆ. 27 ಬಿಲಿಯೇನರ್ ಗಳು ಬೆಂಗಳೂರಿನಲ್ಲಿದ್ದು, ಮುಂಬೈ, ದೆಹಲಿ ಬಳಿಕ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ಬೆಂಗಳೂರಿನ ಯಾವ ಪ್ರದೇಶದಲ್ಲಿ ವಸತಿ ದರಗಳು ದುಬಾರಿಯಾಗಿವೆ, ಎಲ್ಲಿ ಹೆಚ್ಚು ಶ್ರೀಮಂತರು ವಾಸವಾಗಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಇಂದಿರಾ ನಗರ
ಬೆಂಗಳೂರಿನ ಪೂರ್ವಭಾಗದಲ್ಲಿರುವ ಇಂದಿರಾ ನಗರ ಪ್ರದೇಶ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿದೆ. ಉನ್ನತ ಮಟ್ಟದ ವಸತಿ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಹೆಸರು ಪಡೆದಿದೆ. ಐಷಾರಾಮಿ ಬಂಗಲೆಗಳು, ಕೋಟಿ ಕೋಟಿಗೆ ಮಾರಾಟವಾಗುವ ಅಪಾರ್ಟ್‌ಮೆಂಟ್‌ಗಳು ಇಲ್ಲಿವೆ. ಜನಪ್ರಿಯ ಕೆಫೆಗಳು, ಶಾಪಿಂಗ್ ಸೆಂಟರ್, ರೆಸ್ಟೋರೆಂಟ್‌ಗಳು ಈ ಪ್ರದೇಶದಲ್ಲಿ ಹೆಚ್ಚಾಗಿದ್ದು, ಐಟಿ ಉದ್ಯೋಗಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತದೆ.
ಕೋರಮಂಗಲ
ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಕೋರಮಂಗಲ ದುಬಾರಿ ಏರಿಯಾ ಎಂದೇ ಹೆಸರಾಗಿದೆ. ಇಲ್ಲಿನ ನಿವೇಶನಗಳ ಬೆಲೆ ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗುತ್ತದೆ. ಐಟಿ ಪಾರ್ಕ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅನೇಕ ವರ್ಕ್ ಸ್ಪೇಸ್‌ಗಳು ಇಲ್ಲಿಗೆ ಸಮೀಪದಲ್ಲೇ ಇವೆ. ಇಲ್ಲಿ ಅಪಾರ್ಟ್‌ಮೆಂಟ್ ಪಡೆಯಬೇಕೆಂದರೂ ಕೋಟಿ ಕೋಟಿ ನೀಡಬೇಕಾಗುತ್ತದೆ. ರಾಜಕಾರಣಿಗಳು, ಉದ್ಯಮಿಗಳ ಮನೆಗಳು ಈ ಪ್ರದೇಶದಲ್ಲಿ ಹೆಚ್ಚಾಗಿವೆ.
ಸದಾಶಿವನಗರ
ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಸದಾಶಿವನಗರ ಕೇಂದ್ರ ಭಾಗದಲ್ಲಿದೆ. ಇದು ಕೂಡ ಶ್ರೀಮಂತರು, ಸೆಲೆಬ್ರೆಟಿಗಳು, ರಾಜಕಾರಣಿಗಳು ವಾಸಿಸುವ ಪ್ರದೇಶವಾಗಿದೆ. ಐಟಿ ಹಬ್‌ಗಳಿಗೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಉತ್ತಮವಾಗಿರುವ ಕಾರಣ ಹೆಚ್ಚಿನ ಶ್ರೀಮಂತರನ್ನು ಆಕರ್ಷಿಸುತ್ತದೆ. ವಿಶಾಲವಾದ ವಿಲ್ಲಾಗಳು, ಅಪಾರ್ಟ್‌ಮೆಂಟ್‌ಗಳು, ದೊಡ್ಡ ದೊಡ್ಡ ಮನೆಗಳು ಈ ಪ್ರದೇಶದ ವೈಭವವನ್ನು ಸಾರುತ್ತವೆ. ಮುಖ್ಯವಾಗಿ ಪ್ರಮುಖ ರಾಜಕಾರಣಿಗಳ ಮನೆಗಳು ಇಲ್ಲಿದ್ದು, ದುಬಾರಿ ಪ್ರದೇಶ ಎನಿಸಿಕೊಂಡಿದೆ.
ಶಾಂತಲಾ ನಗರ
ಶಾಂತಲಾ ನಗರ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಮತ್ತೊಂದು ಪ್ರಮುಖ ಪ್ರದೇಶವಾಗಿದೆ. ಅನೇಕ ಉದ್ಯಮಿಗಳು, ರಾಜಕಾರಣಿಗಳ ಮನೆಗಳು ಇಲ್ಲಿವೆ. ಈ ನಗರದಲ್ಲಿರುವ ವಿಠಲ್ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಕಸ್ತೂರ್ ಬಾ ರಸ್ತೆ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಈ ಪ್ರದೇಶದಲ್ಲಿ ನೋಡಬಹುದು. ಇದೇ ಕಾರಣದಿಂದ ಇಲ್ಲಿ ವಸತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಬೆಲೆಗಳು ಗಗನಕ್ಕೇರಿವೆ.
ವೈಟ್‌ಫೀಲ್ಡ್
ಬೆಂಗಳೂರಿನ ಬಹುತೇಕ ಐಟಿ ಕಂಪನಿಗಳು ಇರುವ ಪ್ರದೇಶ ಇದಾಗಿದ್ದು, ನಗರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ. 90ರ ದಶಕದ ಅಂತ್ಯದಲ್ಲಿ ಐಟಿ ಕಂಪನಿಗಳು ಬೆಂಗಳೂರಿಗೆ ಬಂದಾಗಿನಿಂದ ಇಲ್ಲಿನ ವಸತಿ ಬೆಲೆಗಳು ಗಗನಕ್ಕೇರಿವೆ. ಉನ್ನತ ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ಉದ್ಯಾನವನಗಳು, ರೆಸ್ಟೋರೆಂಟ್‌ಗಳು ಮತ್ತು ಐಟಿ ಕಂಪನಿಗಳು ಹೂಡಿಕೆದಾರರನ್ನು ಹೆಚ್ಚಾಗಿ ಸೆಳೆಯುತ್ತಿವೆ.


Click it and Unblock the Notifications