ನವದೆಹಲಿ: ಡಿಸೆಂಬರ್ 1 ರಿಂದ ಆರಂಭವಾದ ಲೋಕಸಭಾ ಚಳಿಗಾಲದ ಅಧಿವೇಶನ (Lokasabha Session 2025) ಹಲವು ಮಸೂದೆಗಳಿಗೆ ನಾಂದಿಯಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾರ್ಮಿಕರ ಅನುಕೂಲಕ್ಕಾಗಿ 4 ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು. ಇದೀಗ ಮತ್ತೊಂದು ಮಸೂದೆ ಪ್ರಸ್ತಾಪವಾಗಿದ್ದು, ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಉದ್ಯೋಗಿಗಳ ಒತ್ತಡವನ್ನು ಇದು ನಿರಾಳ ಮಾಡಲಿದೆ.

ಇದೀಗ NCP ಸಂಸದೆ ಸುಪ್ರಿಯಾ ಸುಳೆ ಅವರು ಶುಕ್ರವಾರ ಲೋಕಸಭೆಯಲ್ಲಿ 'ರೈಟ್ ಟು ಡಿಸ್ಕನೆಕ್ಟ್ ಬಿಲ್ 2025 (Right To Disconnect Bill 2025) ಮಂಡನೆ ಮಾಡಲಾಗಿದೆ. ಅಂದರೆ ಭಾರತದಲ್ಲಿ ಉದ್ಯೋಗಿಗಳು ಕೆಲಸ ಮುಗಿದ ನಂತರ ಮತ್ತು ರಜಾದಿನಗಳಲ್ಲಿ ಕಚೇರಿ ಸಂಬಂಧಿತ ಕರೆ, ಸಂದೇಶ ಹಾಗೂ ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಕಾನೂನುಬದ್ಧ ಹಕ್ಕನ್ನು ಈ ಮಸೂದೆ ನೀಡುತ್ತದೆ. ಡಿಸೆಂಬರ್ 1 ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಲಾಯಿತು. ಅಂದರೆ ರಜಾದಿನಗಳಲ್ಲಿ, ಕೆಲಸದ ನಂತರ ಉದ್ಯೋಗಿಗಳಿಗೆ ಕಚೇರಿ ಕೆಲಸಗಳಿಂದ ಮುಕ್ತಿ ನೀಡುವುದು ಇದರ ಉದ್ದೇಶವಾಗಿದೆ.
Right To Disconnect Bill ಎಂದರೇನು?
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಂಡಿಸಿರುವ ಮಸೂದೆಯ ಪ್ರಕಾರ, ಕಚೇರಿ ಕೆಲಸ ಮುಗಿದ ನಂತರ, ಕಚೇರಿ ಸಂಬಂಧಿತ ಕರೆ, ಮೆಸೇಜ್, ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು ಉದ್ಯೋಗಿಗಳಿಗೆ ಕಡ್ಡಾಯವಲ್ಲ. ಯಾವುದೇ ಭಯವಿಲ್ಲದೆ ಕರೆ ಅಥವಾ ಇಮೇಲ್‌ಗಳನ್ನು ತಿರಸ್ಕರಿಸುವ ಹಕ್ಕು ಪ್ರತಿಯೊಬ್ಬ ಕಾರ್ಮಿಕನಿಗೂ ಇದೆ. ಫೋನ್, ಮೆಸೇಜ್, ಇಮೇಲ್, ವಿಡಿಯೋ ಕರೆ ಸೇರಿದಂತೆ ಎಲ್ಲ ಡಿಜಿಟಲ್ ಸಂವಹನಗಳಿಗೆ ಇದು ಅನ್ವಯವಾಗಲಿದೆ.
ಡಿಜಿಟಲ್ ಸಾಧನಗಳು ಕೆಲಸದಲ್ಲಿ ಬಹಳ ಪ್ರಯೋಜನಕಾರಿಯೆಂದೆನಿಸಿದರೂ, ದಿನ ಹೋದಂತೆ ಇದು ಜೀವನಶೈಲಿ, ಸಂಸ್ಕೃತಿಯನ್ನೇ ಬದಲಿಸಿದೆ ಎಂದು ಹೇಳಿದೆ. ಇದು ನಿದ್ರಾಹೀನತೆ, ಒತ್ತಡ, ಮಾನಸಿಕ ಸಮಸ್ಯೆ, ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಕಾರಣ ಎಂದು ಸಂಶೋಧನೆ ಉಲ್ಲೇಖಿಸುತ್ತದೆ. ಅದೆಲ್ಲಾ ಸಮಸ್ಯೆಗಳಿಂದ ಪರಿಹಾರ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮುಟ್ಟಿನ ಪ್ರಯೋಜನ ಮಸೂದೆ:
ಕಾಂಗ್ರೆಸ್ ಸಂಸದೆ ಕಡಿಯಂ ಕಾವ್ಯ ಅವರು ಮುಟ್ಟಿನ ಪ್ರಯೋಜನ ಮಸೂದೆಯನ್ನು ಮಂಡನೆ ಮಾಡಿದ್ದರು. ಈ ಮೂಲಕ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ನೀಡಬೇಕಾದ ಎಲ್ಲಾ ಸೌಲಭ್ಯಗಳು ಮತ್ತು ಬೆಂಬಲವನ್ನು ಇದು ಪ್ರಸ್ತಾಪಿಸುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ, ಅಗತ್ಯ ಸೌಲಭ್ಯವನ್ನು ಒದಗಿಸುವುದು, ಪ್ರಯೋಜನಗಳು ಸಿಗುವಂತೆ ಮಾಡಲು ಕಾನೂನು ಚೌಕಟ್ಟನ್ನು ರೂಪಿಸಲು ಈ ಮಸೂದೆ ಕಾರಣವಾಗಲಿದೆ. ಇದೇ ಸಂದರ್ಭದಲ್ಲಿ ಎಲ್‌ಜೆಪಿ ಪಕ್ಷದ ಸಂಸದೆ ಶಾಂಭವಿ ಚೌಧರಿ ಅವರು, ಮಹಿಳಾ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವುದನ್ನು ಮತ್ತಷ್ಟು ಖಾತರಿಪಡಿಸಲು, ಅಗತ್ಯ ಸೌಲಭ್ಯಗಳನ್ನು, ಆರೋಗ್ಯವನ್ನು ಕಾಪಾಡಲು ಒಂದು ಶಾಸನವನ್ನು ಸಹ ಪರಿಚಯಿಸಿದರು. ಈಗಾಗಲೇ ಕರ್ನಾಟಕದಲ್ಲಿ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ಮುಟ್ಟಿನ ರಜೆಯನ್ನು ಘೋಷಣೆ ಮಾಡಿದೆ.


Click it and Unblock the Notifications