ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ, ಭಾರತದ ಅತ್ಯಂತ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ರಿಲಯನ್ಸ್ ಸಂಸ್ಥೆಯಡಿಯಲ್ಲಿ ಸಾಕಷ್ಟು ಕಂಪನಿಗಳನ್ನು ನಡೆಸುತ್ತಿರುವ ಭಾರತದ ಹೆಸರಾಂತ ಉದ್ಯಮಿ. ಆದರೆ ಈ ವರ್ಷ ಅವರು ವಿಶ್ವದ ಟಾಪ್ ಹತ್ತು ಶ್ರೀಮಂತರ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಹೌದು, ಇತ್ತೀಚಿಗೆ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಒಂದು ವರದಿ ಮಾಡಿದೆ. ಈ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಸಂಪತ್ತು ಕಳೆದ ವರ್ಷಕ್ಕಿಂತ 1 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾದಗಿದ್ದರಿಂದ, ಟಾಪ್ ಹತ್ತು ಶ್ರೀಮಂತರ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗುತ್ತಿದೆ. ಈ ನಷ್ಟಕ್ಕೆ ಪ್ರಮುಖ ಕಾರಣವೆಂದರೆ, ರಿಲಯನ್ಸ್ ಇಂಡಸ್ಟ್ರೀಸ್‌ನ ಇಂಧನ ಮತ್ತು ಚಿಲ್ಲರೆ ವ್ಯಾಪಾರ ವಿಭಾಗಗಳಲ್ಲಿ ನಷ್ಟಗಳು, ಹೂಡಿಕೆದಾರರ ಆತಂಕ, ಹಾಗೂ ಸಾಲದ ಸಮಸ್ಯೆ ಎನ್ನಲಾಗಿದೆ. ಇದರ ಹೊರತಾಗಿಯೂ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಇನ್ನು 2025ರ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ವಿಶ್ವದ ಅತಿದೊಡ್ಡ ಶ್ರೀಮಂತ ಎಂಬ ಸ್ಥಾನವನ್ನು, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪಡೆದುಕೊಂಡಿದ್ದಾರೆ. ಎಲೋನ್ ಮಸ್ಕ್ ಸಂಪತ್ತು ಈ ವರ್ಷ 82% ಹೆಚ್ಚಾಗಿ, ಸುಮಾರು 420 ಬಿಲಿಯನ್ ಡಾಲರ್ ತಲುಪಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಈ ಮೊತ್ತ 3.5 ಲಕ್ಷ ಕೋಟಿ ರೂಪಾಯಿ ಎನ್ನಬಹುದಾಗಿದೆ. ಇದು ವಿಶ್ವದ ಶ್ರೀಮಂತ ವ್ಯಕ್ತಿಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಸ್ಥಿತಿ ಎನ್ನಬಹುದು.
ಇನ್ನು HCL ಟೆಕ್ ಕಂಪನಿಯ ರೋಶ್ನಿ ನಾಡರ್ ಅವರಿಗೆ ಭಾರತದ ಮೊದಲ ಟಾಪ್, ಹತ್ತು ಶ್ರೀಮಂತ ಮಹಿಳೆ ಎಂಬ ಬಿರುದು ಸಿಕ್ಕಿದೆ. ಶಿವ ನಾಡರ್ ಅವರ 47% ಷೇರುಗಳನ್ನು ಸ್ವೀಕರಿಸಿದ ನಂತರ, ಅವರ ಒಟ್ಟು ಸಂಪತ್ತು 3.5 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದರಿಂದಾಗಿ ಅವರು ಜಾಗತಿಕ ಮಟ್ಟದಲ್ಲಿ ಐದನೇ ಶ್ರೀಮಂತ ಮಹಿಳೆ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತಕ್ಕೆ ಕಿರೀಟ ತಂದುಕೊಟ್ಟಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷದಲ್ಲಿ ಟಾಪ್ 10 ಪಟ್ಟಿಯಿಂದ ಹೊರಗುಳಿದಿರಬಹುದು. ಆದರೆ ಅವರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳು ಭವಿಷ್ಯದಲ್ಲಿ ದೊಡ್ಡ ಪ್ರಭಾವ ಬೀರುವ ಲಕ್ಷಣ ಎದ್ದುಕಾಣುತ್ತಿದೆ. ಈ ಕ್ಷೇತ್ರಗಳಲ್ಲಿ ಅವರು ಬಲಪ್ರದರ್ಶನದ ಮೂಲಕ ಅವರು ಮುಂದಿನ ವರ್ಷಗಳು ಮತ್ತೆ ಉನ್ನತಿ ಸಾಧಿಸಬಹುದು.
ಅಂದರೆ ಅವರ ಜಿಯೋ ಪ್ಲಾಟ್‌ಫಾರ್ಮ್ ಭಾರತದ ಟೆಲಿಕಾಂ, ಡಿಜಿಟಲ್ ಸೇವೆಗಳು, ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳ ಪ್ರಮುಖ ವೇದಿಕೆಯಾಗಿದೆ. ಮುಂಬರುವ ವರ್ಷಗಳಲ್ಲಿ ಇದರಿಂದ ದೊಡ್ಡ ಪ್ರಮಾಣದ ವೃದ್ಧಿ ಸಾಧ್ಯ. Jio ಭಾರತದಲ್ಲಿ 5G ತಂತ್ರಜ್ಞಾನವನ್ನು ವ್ಯಾಪಕವಾಗಿ ವಿಸ್ತರಿಸುತ್ತಿದ್ದು, ಇದು ಹೊಸ ಆಧುನಿಕ ಸೇವೆಗಳಿಗೆ ದಾರಿ ಮಾಡಿಕೊಡಬಹುದು. ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಜಿಯೋ ಫೈಬರ್ ಈಗಾಗಲೇ ಪ್ರಬಲ ನಾಯಕನಾಗಿದ್ದು, ಭಾರತದೆಲ್ಲೆಡೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ. ಜಿಯೋ ಮಾರ್ಟ್, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಮೀಟ್ ಹೀಗೆ ಮುಂತಾದ ಡಿಜಿಟಲ್ ಸೇವೆಗಳ ಮೂಲಕ ಜಿಯೋ ತನ್ನ ವ್ಯಾಪಾರವನ್ನು ಇತರ ತಂತ್ರಜ್ಞಾನ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇವರ ಆರ್ಥಿಕತೆ ಪ್ರಗತಿ ಸಾಧಿಸುವುದರಲ್ಲಿ ಅನುಮಾನವೇ ಇಲ್ಲ.
ಆರ್ಥಿಕ ಸ್ಥಿರತೆ, ತೈಲ ಮಾರುಕಟ್ಟೆಯ ಮೇಲಿನ ಅವಲಂಬನೆ, ಹೂಡಿಕೆದಾರರ ವಿಶ್ವಾಸ, ಹಾಗೂ ಹೊಸ ತಂತ್ರಜ್ಞಾನಗಳ ಯಶಸ್ಸು ಮುಂಬರುವ ವರ್ಷಗಳಲ್ಲಿ ಅವರ ಶ್ರೀಮಂತಿಕೆಯ ಮೇಲೆ ಪ್ರಭಾವ ಬೀರುತ್ತವೆ. ಈ ಕಾರಣದಿಂದ, ಅಂಬಾನಿಯ ಭವಿಷ್ಯವನ್ನು ನಿರ್ಧರಿಸುವುದು Jio ಮತ್ತು ಹಸಿರು ಇಂಧನ ಯೋಜನೆಗಳ ಯಶಸ್ಸಿನ ಮೇಲೆ ನಿಂತಿದೆ.


Click it and Unblock the Notifications