ಬೆಂಗಳೂರು, ಆಗಸ್ಟ್ 9: ಪ್ರತಿಯೊಬ್ಬ ವ್ಯಕ್ತಿಗೂ ಸಂಬಳ ಎನ್ನುವಂತದ್ದು ಬಹುಮುಖ್ಯವಾಗಿರುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ವ್ಯಕ್ತಿಯ ಆದಾಯವನ್ನು ಆತನಿಗಿರುವ ಸಂಬಳದಿಂದಲೇ ಲೆಕ್ಕ ಹಾಕಿತ್ತೇವೆ. ಹೀಗಿರುವಾಗ ಜುಲೈ 12ರಂದು ಅದ್ಧೂರಿಯಾಗಿ ಇಡೀ ವಿಶ್ವವೇ ತಿರುಗಿ ನೋಡುವಂತೆ ತಮ್ಮ ಪುತ್ರ ಅನಂತ್ ಅಂಬಾನಿಯ ವೈಭಯುತ ಮದುವೆ ಮಾಡಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ವೇತನದ ಎಷ್ಟು ಪಡೆಯುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಇರಬಹುದು.
ಆದರೆ ಆಶ್ಚರ್ಯವಾದರೂ ಸತ್ಯ, ಪ್ರಪಂಚದಲ್ಲೇ ಸಿರಿವಂತ ವ್ಯಕ್ತಿಗಳ ಸಾಲಿನಲ್ಲಿ ನಿಂತಿರುವ ರಿಲಯನ್ಸ್ ಗ್ರೂಪ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ನಾಲ್ಕನೇ ವರ್ಷವೂ ಯಾವುದೇ ವೇತನ ಪಡೆದುಕೊಳ್ಳುತ್ತಿಲ್ಲ.

67 ವರ್ಷದವರಾಗಿರುವ ಅಂಬಾನಿ, ಕೋವಿಡ್ ಸಾಂಕ್ರಮಿಕ ವೇಳೆ ಸ್ವಯಂಪ್ರೇರಣೆಯಿಂದ ಕಂಪನಿಯ ಸಂಬಳವನ್ನು ಬಿಟ್ಟುಕೊಟ್ಟಿದ್ದರು. 20- 2021ರ ಮಾರ್ಚ್ 31ಕ್ಕೆ ಕೊನೆಯಾದ ಆರ್ಥಿಕ ವರ್ಷದಿಂದ ಅವರು ಯಾವುದೇ ವೇತನವನ್ನು ಪಡೆದಿಲ್ಲ. ರಿಲಯನ್ಸ್ ವ್ಯವಹಾರಗಳು ತಮ್ಮ ಗಳಿಕೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ತಮ್ಮ ಸಂಬಳವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.
ಅಂಬಾನಿಯವರ ಹಿಂದಿನ ವೇತನ ಎಷ್ಟು?
ಮುಖೇಶ್ ಅಂಬಾನಿಯವರು ಏಪ್ರಿಲ್ 2008 ರಿಂದ ಮಾರ್ಚ್ 2020ರ ತನಕ ವಾರ್ಷಿಕ ವೇತನವಾಗಿ 15 ಕೋಟಿ. ರೂ ಪಡೆದುಕೊಳ್ಳುತ್ತಿದ್ದರು. ಅಂದರೆ ಅವರು ತಮ್ಮ ವೇತನವನ್ನು ಹನ್ನೆರಡು ವರ್ಷಗಳಿಂದ 15 ಕೋಟಿ ರೂಪಾಯಿಗಳಿಗಿಂತ ಹೆಚ್ಚಿಸಿಕೊಂಡಿರಲಿಲ್ಲ. ಇದಾದ ಬಳಿಕ ಅವರು ಕೊರೊನಾ ವೇಳೆ ಅಂದರೆ ಆರ್ಥಿಕ ವರ್ಷ 21 ರಿಂದ ಯಾವುದೇ ವೇತನವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರು. 2023-24 ಹಣಕಾಸು ವರ್ಷಕ್ಕೆ , ಅವರು ಯಾವುದೇ ಸಂಬಳ ಸೇರಿ ಯಾವುದೇ ಭತ್ಯೆ ಪಡೆದಿಲ್ಲ ಎಂದು ಅವರ ಕಂಪನಿ ತಿಳಿಸಿದೆ.
ಸಂಬಳವನ್ನೇ ತ್ಯಾಗ ಮಾಡಿದ ಮುಕೇಶ್ ಅಂಬಾನಿ ಅವರ ಇತರ ವ್ಯಾವಹಾರಿಕ ವೆಚ್ಚಗಳನ್ನು ಕಂಪನಿಯೇ ಭರಿಸಲಿದೆ. ಪ್ರಯಾಣ, ಬೋರ್ಡಿಂಗ್, ಲಾಡ್ಜಿಂಗ್ ವೆಚ್ಚಗಳು, ಅವರ ಮತ್ತವರ ಕುಟುಂಬದ ಭದ್ರತಾ ವೆಚ್ಚಗಳನ್ನೂ ಆರ್ಐಎಲ್ ಭರಿಸುತ್ತದೆ. ಭಾರತದ ಅತಿದೊಡ್ಡ ಮಾರುಕಟ್ಟೆಮೌಲ್ಯದ ಕಂಪನಿ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ನ ಛೇರ್ಮನ್ ಮತ್ತು ಎಂಡಿಯಾಗಿ ಅವರು 2029ರವರೆಗೂ ಮುಂದುವರಿಯಲಿದ್ದಾರೆ.
ರಿಲಯನ್ ನಲ್ಲಿ ಮುಖೇಶ್ ಅಂಬಾನಿ ಪಾಲು ಎಷ್ಟು?
ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದವರು ರಿಲಯನ್ಸ್ ಶೇಕಡಾ 50.33 ರಷ್ಟು ಷೇರುಗಳನ್ನು ಹೊಂದಿದ್ದಾರೆ, ಇದು ಪ್ರತಿ ಷೇರಿಗೆ 10 ರೂಪಾಯಿಗಳ ಡಿವಿಡೆಂಡ್ ಆಧಾರದ ಮೇಲೆ 2023-24 ಹಣಕಾಸು ವರ್ಷದಲ್ಲಿ 3,322.7 ಕೋಟಿ ಲಾಭಾಂಶವನ್ನು ಗಳಿಸುತ್ತಿದ್ದಾರೆ. 1977ರಿಂದಲೂ ಮುಕೇಶ್ ಅವರು ರಿಲಯನ್ಸ್ ಸಮೂಹದ ಆಡಳಿತ ಮಂಡಳಿಯಲ್ಲಿದ್ದಾರೆ. 2002ರಲ್ಲಿ ಅವರ ತಂದೆ ಧೀರೂಬಾಯಿ ಅಂಬಾನಿ ಅವರು ನಿಧನರಾದ ಬಳಿಕ ರಿಲಯನ್ಸ್ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿರುವ ಅಂಬಾನಿ ವಿಶ್ವ ದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆಗಸ್ಟ್ 28, 2023 ರವರೆಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಅಂಬಾನಿ ಅವರ ಪತ್ನಿ ನೀತಾ ಅವರು ಸಿಟ್ಟಿಂಗ್ ಶುಲ್ಕವಾಗಿ 2 ಲಕ್ಷ ರೂ. ಮತ್ತು ಕಮಿಷನ್ ರೂಪದಲ್ಲಿ 97 ಲಕ್ಷ ರೂ . ಗಳಿಸಿದ್ದಾರೆ. ಇವರ ಮೂವರು ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ಕಳೆದ ಅಕ್ಟೋಬರ್ ನಲ್ಲಿ ಮಂಡಳಿಗೆ ನೇಮಿಸಲಾಯಿತು. ಪ್ರತಿಯೊಬ್ಬರು ಸಿಟ್ಟಿಂಗ್ ಶುಲ್ಕವಾಗಿ 4 ಲಕ್ಷ ರೂ. ಹಾಗೂ ಕಮಿಷನ್ ಆಗಿ ವರ್ಷಕ್ಕೆ 97 ಲಕ್ಷ ರೂ. ಪಡೆಯುತ್ತಿದ್ದಾರೆ.


Click it and Unblock the Notifications