ನವದೆಹಲಿ, ಜುಲೈ 24: ಬಜೆಟ್ ಮಂಡನೆ ದಿನ ಬಂದಾಗ ಇಡೀ ದೇಶವೇ ತಮಗೆ ಅಥವಾ ತಮಗೆ ಸಂಬಂಧಿಸಿದ ವಲಯಕ್ಕೆ ಏನೆಲ್ಲ ಅನುಕೂಲಗಳನ್ನು ನೀಡಲಾಗಿದೆ ಎನ್ನುವತ್ತ ಕುತೂಹಲ ಹರಿಸುವುದು ಸಹಜ. ಅಷ್ಟೇಅಲ್ಲ ಬ್ಯಾಂಕಿಂಗ್ ಇರಬಹುದು ಅಥವಾ ಷೇರುಪೇಟೆ ಇರಬಹುದು ಎಲ್ಲ ಆರ್ಥಿಕ ವ್ಯವಸ್ಥೆಗಳಲ್ಲಿಯೂ ನಾನಾ ರೀತಿಯ ಧನಾತ್ಮಕ ಅಥವಾ ಋನಾತ್ಮಕ ಬೆಳವಣಿಗೆ ಆ ವರ್ಷದ ಬಜೆಟ್ ಪರಿಣಾಮ ಬೀರುವುದು ಸಹಜ.
ಅದರಂತೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಮಂಡಿಸಲು ಹೊರಟಿದ್ದ ಬಜೆಟ್ ಮೇಲೆ ಷೇರು ಹೂಡಿಕೆದಾರರಲ್ಲಿಯೂ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಹಿಂದೆಯೂ ಕೂಡ ಖುದ್ದು ಪ್ರಧಾನಿ ಮೋದಿ ಅವರೇ ಭಾರತದ ಷೇರುಪೇಟೆ ಭಾರೀ ನಾಗಾಲೋಟಕ್ಕೆ ಮುಂದಿನ ದಿನಗಳಲ್ಲಿ ಸಾಕ್ಷಿಯಾಗಲಿದೆ ಎಂದಿದ್ದರು.

ಈ ನಡುವೆ ಭವಿಷ್ಯದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಮುಂಬೈ ಷೇರುಪೇಟೆಯ ಪಾಲು ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಸಲದ ಬಜೆಟ್‌ನಲ್ಲಿ ಷೇರು ಹೂಡಿಕೆದಾರರ ಕಡೆಗೆ ಹೆಚ್ಚಿನ ವರದಾನ ಉಂಟುಮಾಡುವ ಯೋಜನೆಗಳು ಅಥವಾ ಸುಧಾರಣಾ ಕ್ರಮಗಳು ಉಲ್ಲೇಖವಾಗಬಹುದು ಎನ್ನುವ ಲೆಕ್ಕಾಚಾರವಿತ್ತು. ಈ ಎಲ್ಲ ಕಾರಣಗಳಿಂದ ಮಂಗಳವಾರ ಮುಂಬೈ ಷೇರುಪೇಟೆಯಲ್ಲಿ ಗೂಳಿಯ ಓಟ ಜೋರಾಗಬಹುದು ಎನ್ನುವುದು ಬಹುತೇಕ ಷೇರು ಹೂಡಿಕೆದಾರರ ಲೆಕ್ಕಾಚಾರವಾಗಿತ್ತು. ಆದರೆ, ವಾಸ್ತವದಲ್ಲಿ ಆಗಿದ್ದು ಬೇರೆ.
ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡುವವರಿದ್ದರು. ಈ ಕಾರಣದಿಂದಾಗಿ ಬೆಳಗ್ಗೆ ಷೇರುಪೇಟೆ ಕೂಡ ಲಾಭದೊಂದಿಗೆ ವಹಿವಾಟು ಆರಂಭಿಸಿತ್ತು. ಸೆನ್ಸೆಕ್ಸ್ 173 ಅಂಕಗಳ ಏರಿಕೆಯೊಂದಿಗೆ 80,760 ರ ಮಟ್ಟದಲ್ಲಿ ವಹಿವಾಟು ಆರಂಭಿಸಿದ್ದರೆ ನಿಫ್ಟಿಯು 48 ಅಂಕಗಳ ಏರಿಕೆಯೊಂದಿಗೆ 24,564ರ ಮಟ್ಟದಲ್ಲಿ ವಹಿವಾಟು ಆರಂಭಿಸಿತ್ತು. ಅದೇರೀತಿ ಬ್ಯಾಂಕ್ ನಿಫ್ಟಿ ಸೂಚ್ಯಂಕ ಕೂಡ 103 ಅಂಕಗಳ ಏರಿಕೆಯೊಂದಿಗೆ 52,400ರ ಮಟ್ಟದಲ್ಲಿ ಟ್ರೇಡಿಂಗ್ ಶುರು ಮಾಡಿತ್ತು.
ಆದರೆ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆ ಷೇರುಪೇಟೆ ಸೂಚ್ಯಂಕಗಳು ಪತನದ ಹಾದಿ ಹಿಡಿದಿತ್ತು. ಹೂಡಿಕೆದಾರರೆಲ್ಲ ಆರಂಭದಲ್ಲಿ ಈ ರೀತಿಯ ಏರಿಳಿತ ಕಂಡು ಬಳಿಕ ಗ್ರೀನ್‌ನಲ್ಲಿ ವಹಿವಾಟು ಮುಂದುವರಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಹಲವು ಷೇರು ಪರಿಣತರು ಇದ್ದರು. ಆದರೆ, ಒಮ್ಮೆ ಕುಸಿಯಲಾರಂಭಿಸಿದ ಮುಂಬೈ ಷೇರುಪೇಟೆ ನಂತರದಲ್ಲಿಯೂ ಚೇತರಿಕೆ ಕಾಣಲಿಲ್ಲ ಎನ್ನುವುದು ವಾಸ್ತವ. ಆ ಮೂಲಕ ಕರಡಿ ಕುಣಿದ ಮುಂದೆ ಗೂಳಿಯ ಓಟದ ನಿರೀಕ್ಷೆ ಅಕ್ಷರಶಃ ಸುಳ್ಳಾಗಿದ್ದು, ಒಂದು ಹಂತದಲ್ಲಿ ಸೆನ್ಸೆಕ್ಸ್ ಸಾವಿರ ಪಾಯಿಂಟ್ಸ್ ಕುಸಿದು 79,224ರ ಮಟ್ಟಕ್ಕೆ ಬಂದಿತ್ತು.
ಆದರೆ, ಹಣಕಾಸು ಸಚಿವರು ಆದಾಯ ತೆರಿಗೆ ಪಾವತಿಸುವ ತೆರಿಗೆದಾರರ ತೆರಿಗೆ ಕಡಿತ ಮಿತಿಯನ್ನು ಹೆಚ್ಚಳ ಮಾಡಿರುವ ಜತೆಗೆ ಹೊಸ ತೆರಿಗೆ ವ್ಯವಸ್ಥೆಗಳ ಘೋಷಣೆಯಾಗುತ್ತಿದ್ದಂತೆ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಚೇತರಿಕೆ ಕಂಡಿತ್ತು. ಕೊನೆಗೆ ಸೆನ್ಸೆಕ್ಸ್ 73 ಅಂಕಗಳ ಕುಸಿತದೊಂದಿಗೆ 80,429ರ ಮಟ್ಟದಲ್ಲಿ, ನಿಫ್ಟಿ 30 ಅಂಕಗಳ ಕುಸಿತದೊಂದಿಗೆ 24,479ರ ಮಟ್ಟದಲ್ಲಿ ಟ್ರೇಡಿಂಗ್ ಅಂತ್ಯಗೊಳಿಸಿತ್ತು. ಆದರೆ ಬ್ಯಾಂಕ್ ನಿಫ್ಟಿ ಮಾತ್ರ ಹೆಚ್ಚಿನ ಚೇತರಿಕೆ ಕಾಣದೆ 502 ಅಂಕಗಳ ಕುಸಿತದೊಂದಿಗೆ 51,778ರ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.
ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಲ್ಯಾನ್ಸರ್ ಅಂಡ್ ಟರ್ಬೊ, ಬಜಾಜ್ ಫೈನಾನ್ಸ್, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪೊರೇಷನ್ ಜಾಸ್ತಿ ನಷ್ಟ ಅನುಭವಿಸಿವೆ. ನಿಫ್ಟಿ 50ಯಲ್ಲಿಯೂ ಶ್ರೀರಾಮ ಫೈನಾನ್ಸ್, ಬಜಾಜ್ ಫೈನಾನ್ಸ್, ಎಸ್‌ಬಿಐ ಲೈಫ್ ರೆಡ್‌ನಲ್ಲಿ ಅಂತ್ಯಗೊಂಡಿದೆ.


Click it and Unblock the Notifications