ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರವಾಗುತ್ತಿದೆ. ಇನ್ನು ಹಳದಿ ಮತ್ತು ಪಿಂಕ್ ಲೈನ್ ಮೆಟ್ರೋ ಕಾರ್ಯಚರಣೆ ನಡೆಯುತ್ತಿದೆ. ನಿರೀಕ್ಷಿತ ಸಾರ್ವಜನಿಕ ಸಾರಿಗೆ ಯೋಜನೆಗಳಲ್ಲಿ ಪ್ರಮುಖವಾದ ಪಿಂಕ್ ಲೈನ್ ಮೆಟ್ರೋ, ದಕ್ಷಿಣದಿಂದ ಉತ್ತರದವರೆಗೆ ದೈನಂದಿನ ಪ್ರಯಾಣಿಕರಿಗೆ ನೂತನ ಅನುಭವ ಒದಗಿಸಲು ಸಜ್ಜಾಗುತ್ತಿದೆ. ಒಟ್ಟು 21.25 ಕಿ.ಮೀ ಉದ್ದದ ಈ ಪಿಂಕ್ ಲೈನ್, ನಗರದ ದಕ್ಷಿಣದ ಕಾಳೇನ ಅಗ್ರಹಾರದಿಂದ ಆರಂಭವಾಗಿ ನಾಗವಾರದವರೆಗೆ ಸಾಗುತ್ತದೆ. ಈ ಪಿಂಕ್‌ಲೈನ್ ಮೆಟ್ರೋ ಸಂಚಾರ ಡಿಸೆಂಬರ್ 2025ರೊಳಗೆ ಕಾರ್ಯಾರಂಭಗೊಳ್ಳುವ ನಿರೀಕ್ಷೆಯಿದೆ.

ಹೌದು, ಈ ಯೋಜನೆ ಎರಡು ಹಂತಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಮೊದಲ ಹಂತವು 13.92 ಕಿ.ಮೀ ಉದ್ದವಿದ್ದು, ಇದರಲ್ಲಿ ಆರು ಭೂಗತ ನಿಲ್ದಾಣಗಳು ಮತ್ತು ಆರು ಎತ್ತರದ ನಿಲ್ದಾಣಗಳು ಸೇರಿವೆ. ಇದರ ನಿರ್ಮಾಣ ಕಾರ್ಯ ದ್ವಿತೀಯ ಹಂತಕ್ಕಿಂತ ಮುಂಚಿತವಾಗಿ ಸಾಗುತ್ತಿದೆ ಮತ್ತು ಡಿಸೆಂಬರ್ 2025ರೊಳಗೆ ಕಾರ್ಯಾರಂಭಗೊಳ್ಳುವ ನಿರೀಕ್ಷೆಯಿದೆ.
ಇನ್ನು ಎರಡನೇ ಹಂತವು ಉಳಿದಿರುವ ಭಾಗಗಳನ್ನು ಒಳಗೊಂಡಿದೆ. ಈ ಹಂತ 2026ರ ಡಿಸೆಂಬರ್‍ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ತಿರುವಿನಲ್ಲಿಯೇ ಬಿಎಂಟಿಸಿ, ಮೆಟ್ರೋ ಜಾಲ ಮತ್ತು ನಗರದ ಒಳನೋಟ ಸಾರಿಗೆ ವ್ಯವಸ್ಥೆಗಳ ನಡುವೆ ಉತ್ತಮ ಸಂಯೋಜನೆ ನಡೆಯಲಿದೆ.
ಪಿಂಕ್ ಲೈನ್‌ನಲ್ಲಿ ಯಾವ್ಯಾವ ನಿಲ್ದಾಣಗಳಿವೆ:
ಪಿಂಕ್ ಲೈನ್ ಯೋಜನೆ ಅಷ್ಟೊಂದು ಮಾರ್ಗಗಳಲ್ಲಿ ಬರುವ ನಿಲ್ದಾಣಗಳ ಸಂಖ್ಯೆ 14 ಆಗಿವೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಇಂಟರ್‌ಚೇಂಜ್), ತಾವರೆಕೆರೆ, ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ರಾಷ್ಟ್ರೀಯ ಮಿಲಿಟರಿ ಶಾಲೆ, ಮಹಾತ್ಮ ಗಾಂಧಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡಡನಹಳ್ಳಿ, ನಾಗವಾರ ನಿಲ್ದಾಣಗಳಲ್ಲಿ ಪಿಂಕ್ ಲೈನ್ ಮೆಟ್ರೋ ಸಂಚರಿಸಲಿದೆ.
ಪಿಂಕ್ ಲೈನ್ ಮೆಟ್ರೋದಿಂದಾಗುವ ಪ್ರಯೋಜನಗಳೇನು..?
1. ಸಂಪರ್ಕದ ಸುಧಾರಣೆ:
ಪಿಂಕ್ ಲೈನ್ ಮೆಟ್ರೋ ಯೋಜನೆಯ ಪ್ರಮುಖ ಉದ್ದೇಶವೆಂದರೆ ವಾಣಿಜ್ಯ, ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳ ನಡುವೆ ಹೆಚ್ಚು ಪರಿಣಾಮಕಾರಿಯಾದ ಸಂಪರ್ಕವನ್ನು ಕಲ್ಪಿಸುವುದು. ಈ ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಐಐಎಂ-ಬೆಂಗಳೂರು, ಜಯದೇವ ಹೃದಯ ಸಂಸ್ಥೆ, ರಾಷ್ಟ್ರೀಯ ಮಿಲಿಟರಿ ಶಾಲೆ, ಶಿವಾಜಿನಗರ, ಎಂ.ಜಿ. ರಸ್ತೆ ಮುಂತಾದ ಬಹುಪಾಲು ಜನಪ್ರಿಯ ಸ್ಥಳಗಳಿಗೆ ನೇರ ಸಂಪರ್ಕ ಸಿಗುತ್ತದೆ. ಈ ಸ್ಥಳಗಳು ಸಾರ್ವಜನಿಕ ಸೇವೆಗಳಿಗೆ ಅಗತ್ಯವಿರುವ ಸ್ಥಳಗಳಾಗಿದ್ದು, ಇಲ್ಲಿ ಪ್ರತಿದಿನವೂ ಸಾವಿರಾರು ಮಂದಿ ಓಡಾಟ ಮಾಡುತ್ತಾರೆ. ಈ ಲೈನ್ ಪ್ರಾರಂಭವಾದ ಮೇಲೆ ಈ ಎಲ್ಲಾ ಪ್ರದೇಶಗಳಿಗೆ ತಲುಪುವುದು ಹೆಚ್ಚು ಸುಲಭ ಮತ್ತು ಸಮಯ ಉಳಿತಾಯದಾಯಕವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ರೋಗಿಗಳು, ಉದ್ಯೋಗಿಗಳಿಗೆ ಅನೇಕ ಅನುಕೂಲಗಳು ಲಭ್ಯವಾಗುತ್ತವೆ.
2. ರಸ್ತೆ ದಟ್ಟಣೆ ನಿಯಂತ್ರಣ:
ಬೆಂಗಳೂರು ಮೊದಲೇ ಟ್ರಾಫಿಕ್ ಹಬ್. ಇಲ್ಲಿ ಬೆಳಗ್ಗೆ ಎಬ್ಬಿಸೋದು ಟ್ರಾಫಿಕ್, ರಾತ್ರಿ ಗುಡ್‌ನೈಟ್ ಹೇಳೋದು ಕೂಡ ಟ್ರಾಫಿಕ್ ಆಗಿರುತ್ತದೆ. ಹೀಗಿರುವಾಗ ಬೆಂಗಳೂರಿನಲ್ಲಿ ಟ್ರಾಪಿಕ್ ಕಂಟ್ರೋಲ್‌ಗೆ ಕ್ರಮ ಕೈಗೊಳ್ಳಲೇಬೇಕು. ಪ್ರತಿದಿನವೂ ಹೌಸ್‌ಫುಲ್ ರಸ್ತೆಗಳು, ಸಿಗ್ನಲ್‌ಗಳ ಲೈನ್‌ಗಳು, ಡೆಟೂರ್‌ಗಳ ತೊಂದರೆಗಳು ಮೊದಲಾದವುಗಳಿಂದ ನಾಗರಿಕರು ಬೇಸತ್ತಿದ್ದಾರೆ. ಪಿಂಕ್ ಲೈನ್ ಕಾರ್ಯನಿರ್ವಹಣೆಗೆ ಬರುತ್ತಿದ್ದಂತೆ, ಈ ರಸ್ತೆಗಳ ಮೇಲಿನ ವಾಹನ ಭಾರವು ಬಹುಮಟ್ಟಿಗೆ ಕಡಿಮೆಯಾಗಲಿದೆ ನಿರೀಕ್ಷೆಯಿದೆ. ಅಲ್ಲದೇ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳ ಬದಲು ಮೆಟ್ರೋ ಮಾರ್ಗವನ್ನು ಆರಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಸಂಚಾರದಲ್ಲಿ ವೇಗದಷ್ಟು ಸುಧಾರಣೆಯುಂಟಾಗಬಹುದು. ಇದರಿಂದ ಪ್ರಯಾಣದ ಸಮಯದ ಉಳಿತಾಯವಷ್ಟೇ ಅಲ್ಲ, ಇಂಧನದ ಉಪಯೋಗವೂ ಕಡಿಮೆಯಾಗುತ್ತದೆ.
3. ಪರಿಸರ ಸ್ನೇಹಿ ಆಯ್ಕೆ:
ಇನ್ನು ಮೆಟ್ರೋ ರೈಲು ವ್ಯವಸ್ಥೆಯು ವಿದ್ಯುತ್ ಚಾಲಿತ ವ್ಯವಸ್ಥೆಯಾಗಿರುವುದರಿಂದ ಇದು ಡೀಸೆಲ್ ಅಥವಾ ಪೆಟ್ರೋಲ್ ಚಾಲಿತ ವಾಹನಗಳಿಗಿಂತ ಬಹಳಷ್ಟು ಪರಿಸರ ಸ್ನೇಹಿಯಾಗಿದ್ದು, ಕಾರ್ಬನ್ ಉಳಿತ್‌ಸರ್ಜನೆಯನ್ನೂ ಕಡಿಮೆ ಮಾಡುತ್ತದೆ. ಈ ಹೊಸ ಲೈನ್‌ನ ಪ್ರಾರಂಭದಿಂದ ಜನರ ಈಕೋ ಫ್ರೆಂಡ್ಲಿ ಸಾರಿಗೆ ತಂತ್ರಗಳ ಕಡೆಗೆ ಗಮನ ಹೆಚ್ಚು ಹರಿಯಲಿದೆ. ಬಸ್‌ಗಳು, ಬೈಕುಗಳು ಅಥವಾ ಕಾರುಗಳ ಅವಲಂಬನೆ ಕಡಿಮೆಯಾಗುವ ಮೂಲಕ ಗಾಳಿಯ ಗುಣಮಟ್ಟ ಸುಧಾರಣೆಯಾಗುತ್ತದೆ. ಇದನ್ನು ನಗರದ ಆರೋಗ್ಯಪೂರ್ಣ ಜೀವಮಾನದತ್ತ ನಡೆಯುವ ಹೆಜ್ಜೆಯೆನ್ನಬಹುದು.
4. ಆರ್ಥಿಕ ಚಟುವಟಿಕೆಗೆ ಉತ್ತೇಜನ:
ಪ್ರತಿ ಮೆಟ್ರೋ ನಿಲ್ದಾಣವು ತಾನು ಇರಿಸಿರುವ ಪ್ರದೇಶದ ಆರ್ಥಿಕ ಚಟುವಟಿಕೆಗೆ ಹೊಸ ಉಸಿರನ್ನು ತರುತ್ತದೆ. ಪಿಂಕ್ ಲೈನ್‌ನ ನಿಲ್ದಾಣಗಳು ಕಾರ್ಯನಿರ್ವಹಣೆ ಆರಂಭಿಸಿದ ನಂತರ, ಅವುಗಳ ಸುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ ವೃದ್ಧಿಯಾಗಬಹುದು. ನೂತನ ಮಳಿಗೆಗಳು, ಆಫೀಸ್‌ಗಳು, ನಿವಾಸಿ ಕಟ್ಟಡಗಳು ಇತ್ಯಾದಿಗಳ ಉತ್ಥಾನದಿಂದ ಆಸ್ಥಿ ಮೌಲ್ಯಗಳು ಏರಿಕೆಯಾಗಬಹುದು. ಈ ಲೈನ್ ಶಾಶ್ವತ ಉದ್ಯೋಗಾವಕಾಶಗಳನ್ನೂ ನಿರ್ಮಿಸಬಹುದು, ಉದಾಹರಣೆಗೆ ನಿರ್ವಹಣೆ ಸಿಬ್ಬಂದಿ, ಸುರಕ್ಷತಾ ಸಿಬ್ಬಂದಿ, ವ್ಯಾಪಾರಸ್ಥರು ಮತ್ತು ಇತರ ಸೌಕರ್ಯ ಉದ್ಯೋಗಿಗಳು.
5. ಇತರೆ ಮೆಟ್ರೋ ಮಾರ್ಗಗಳ ಜೋಡಣೆ:
ಪಿಂಕ್ ಲೈನ್ ಅನ್ನು ಇತರೆ ಪ್ರಮುಖ ಮೆಟ್ರೋ ಲೈನ್‌ಗಳಾದ ಗ್ರೀನ್ ಲೈನ್ ಮತ್ತು ಪರ್ಪಲ್ ಲೈನ್‌ಗಳಿಗೆ ಜೋಡಿಸಲು ಯೋಜನೆ ರೂಪಿಸಲ್ಪಟ್ಟಿದೆ. ಇದರಿಂದಾಗಿ ಪ್ರಯಾಣಿಕರು ಬೇರೆ ಬೇರೆ ಮಾರ್ಗಗಳಲ್ಲಿ ತಾವು ಬಯಸುವ ತಾಣಗಳಿಗೆ ತಲುಪಲು ಯಾವುದೇ ತೊಂದರೆಯಿಲ್ಲದೆ ಲಘುವಾಗಿ ಲೈನ್ ಬದಲಾಯಿಸಬಹುದು. ಈ ಸಮಗ್ರ ಜಾಲಬಂಧದಿಂದಾಗಿ ನಗರದ ಒಳಗೂ ಮತ್ತು ಹೊರಗೂ ಇತರ ಪ್ರದೇಶಗಳಿಗೆ ಸಂಪರ್ಕ ಸುಗಮವಾಗುತ್ತದೆ. ಅಂತಿಮವಾಗಿ, ಇದು ಮೆಟ್ರೋ ವ್ಯವಸ್ಥೆಯ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಸುಧಾರಿತ ನಗರ ಸಾರಿಗೆ ತಂತ್ರಜ್ಞಾನವನ್ನು ಪ್ರತಿನಿಧಿಸುತ್ತದೆ.


Click it and Unblock the Notifications