2025 ರಲ್ಲಿ ಸರ್ಕಾರ ದರ ಏರಿಕೆ (Price Hike) ಶಾಕ್ ನೀಡುತ್ತಲೇ ಬಂದಿದೆ. ಗಾಯದ ಮೇಲೆ ಬರೆ ಎಳೆದಂತೆ ಒಂದರ ಮೇಲೊಂದರಂತೆ ದರ ಏರಿಕೆ ಮಾಡುತ್ತಲೇ ಇದೆ. ಬಸ್, ಮೆಟ್ರೋ, ಹಾಲು, ನೀರು ಹೀಗೆ ಹಲವಾರು ಉತ್ಪನ್ನಗಳ ಬೆಲೆ ಈಗಾಗಲೇ ಹೆಚ್ಚಳವಾಗಿದೆ. ಇದೀಗ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗಿದೆ. ಕರ್ನಾಟಕದ ಜನಪ್ರಿಯ ನಂದಿನಿ ತುಪ್ಪದ (Nandini Ghee) ಬೆಲೆ ದಿಢೀರ್ ಏರಿಕೆಯಾಗಿದೆ.

ಕೆಲ ತಿಂಗಳ ಹಿಂದಷ್ಟೇ ಕೆಎಂಎಫ್ ಜಿಎಸ್‌ಟಿ ದರ ಇಳಿಕೆಯಾದ ಬೆನ್ನಲ್ಲೇ, ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿತ್ತು. ಅದರಲ್ಲೂ ನಂದಿನಿ ತುಪ್ಪದ ಬೆಲೆ 40 ರೂ. ಇಳಿಕೆ ಮಾಡಿತ್ತು. ಆದರೆ ಮತ್ತೆ ನಂದಿನಿ ತುಪ್ಪದ ಬೇಡಿಕೆ ಹೆಚ್ಚಾಗಿದ್ದು, ಇದೀಗ ದಿಢೀರ್ ಬೆಲೆ ಏರಿಕೆ ಕಂಡಿದೆ.
ನಂದಿನಿ ತುಪ್ಪ ಮತ್ತಷ್ಟು ದುಬಾರಿ!
ಕರ್ನಾಟಕದ ಜನಪ್ರಿಯ ನಂದಿನಿ ತುಪ್ಪದ ಬೆಲೆ ಏರಿಕೆಯಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಕೆ.ಜಿ.ಗೆ ₹90 ರೂ.ನಷ್ಟು ಏರಿಕೆ ಮಾಡಿದ್ದು, ಈ ಮೂಲಕ ಒಂದು ಲೀಟರ್ ತುಪ್ಪದ ಹೊಸ ಬೆಲೆ ₹700ಕ್ಕೆ ತಲುಪಿದೆ. ಈ ಹಿಂದೆ ಜಿಎಸ್‌ಟಿ ಕಡಿತದಿಂದಾಗಿ ₹650 ರಿಂದ ₹610 ಕ್ಕೆ ಇಳಿಸಲಾಗಿತ್ತು. ಆದರೆ ಇದೀಗ ದಿಢೀರ್ ಏರಿಕೆಯಾಗಿದೆ. ಇನ್ನು ಈ ಏರಿಕೆಗೆ ಮುಖ್ಯ ಕಾರಣ ಜಾಗತಿಕ ಮಾರುಕಟ್ಟೆಯಲ್ಲಾದ ತುಪ್ಪದ ಬೆಲೆ ಏರಿಕೆ.
ನವೆಂಬರ್ 5 ರಿಂದಲೇ ಜಾರಿ
ಇನ್ನು ಈ ತುಪ್ಪದ ಹೊಸ ದರ ಏರಿಕೆ ನೀತಿ ನವೆಂಬರ್ 5, 2025 ರಂದು ಜಾರಿಗೆ ಬಂದಿದೆ. ಕೆಎಂಎಫ್ ಕರ್ನಾಟಕದ ರಾಜ್ಯ-ಚಾಲಿತ ಹಾಲು ಸಹಕಾರಿ ಸಂಸ್ಥೆಗಿದೆ. ಅದರಲ್ಲೂ ನಂದಿನಿ ಪ್ರಮುಖ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಹಾಲು, ತುಪ್ಪ, ತಿಂಡಿ ಸೇರಿದಂತೆ ವಿವಿಧ ಹೈನು ಉತ್ಪನ್ನಗಳಿಗೆ ನಂದಿನಿ ಹೆಸರುವಾಸಿಯಾಗಿದೆ. ಅಲ್ಲದೇ ರಾಜ್ಯ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಈ ಬ್ರಾಂಡ್ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ.
ಸದ್ಯ ಜಿಎಸ್‌ಟಿ ದರ ಕಡಿತದಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿತ್ತು. ಇದರಿಂದ ಜನಸಾಮಾನ್ಯರೂ ಸಂತಸಗೊಂಡಿದ್ದರು. ಆದ್ರೆ ಇದೀಗ ಕೆಎಂಎಫ್‌ನ ಈ ನಿರ್ಧಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಕೇವಲ ತುಪ್ಪದ ಬೆಲೆ ಏರಿಕೆ ಮಾಡಿದ್ದು, ನಂದಿನಿಯ ಬೇರೆ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ಜಾಗತಿಕವಾಗಿ ತುಪ್ಪದ ಬೆಲೆ ಹೆಚ್ಚಾಗಿರುವುದರಿಂದ ಈ ಬೆಲೆ ಏರಿಕೆ ಅನಿವಾರ್ಯ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. (BAMUL) ಅಧ್ಯಕ್ಷ ಡಿ.ಕೆ. ಸುರೇಶ್, ಸಹಕಾರಿ ಸಂಘಗಳು ನಷ್ಟ ಅನುಭವಿಸುತ್ತಿವೆ, ಅದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು "ನಾವು ಪ್ರತಿದಿನ ಸುಮಾರು 95 ಲಕ್ಷದಿಂದ 1 ಕೋಟಿ ಲೀಟರ್ ಹಾಲು ಉತ್ಪಾದಿಸುತ್ತಿದ್ದೇವೆ. ಆದರೆ ಸದ್ಯ ಕೇವಲ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಸರ್ಕಾರವು 50 ಲಕ್ಷ ಲೀಟರ್ ಹಾಲಿಗೆ ಪ್ರತಿ ಲೀಟರ್‌ಗೆ ₹4 ಪ್ರೋತ್ಸಾಹಧನ ನಿಗದಿಪಡಿಸಿದೆ, ಇದನ್ನು ನಾವು ಬೆಂಬಲಿಸುತ್ತೇವೆ. ಆದರೆ ಉಳಿದ ಹಾಲನ್ನು ಖರೀದಿಸಿ ₹4 ಪಾವತಿಸಬೇಕಾಗುತ್ತದೆ, ಇದರಿಂದ ಸಹಕಾರಿ ಸಂಘಗಳಿಗೆ ನಷ್ಟವಾಗುತ್ತಿದೆ" ಎಂದು ಡಿ.ಕೆ. ಸುರೇಶ್ ವಿವರಿಸಿದರು.


Click it and Unblock the Notifications