ಸರಿ ಸುಮಾರು 50 ವರ್ಷಗಳ ಇತಿಹಾಸವಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಸಂಘ (ಕೆ.ಎಂ.ಎಫ್) ಭಾರತದ ಎರಡನೇ ಅತಿ ದೊಡ್ಡ ಹಾಲು ಒಕ್ಕೂಟವಾಗಿದೆ. ನಂದಿನಿ ಬ್ರ್ಯಾಂಡ್ ಕರ್ನಾಟಕದಲ್ಲಿ ಮಾತ್ರಲ್ಲದೇ ದೇಶದಾದ್ಯಂತ ಜನಪ್ರಿಯವಾಗಿದೆ. ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿರುವ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ದೆಹಲಿಯಲ್ಲೂ ಲಭ್ಯವಿದೆ.
ಹಾಲು, ಮೊಸರು, ಲಸ್ಸಿ, ತುಪ್ಪ, ಬೆಣ್ಣೆ, ಪನ್ನೀರ್, ಸಿಹಿ ತಿನಿಸುಗಳಿಗೆ ಫೇಮಸ್ ಅಗಿದ್ದ ನಂದಿನಿಯು ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಗ್ರಾಹಕರಿಗೆ ಪರಿಚಯಿಸಿತ್ತು. ಆದರೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೇವಲ ನಾಲ್ಕೇ ದಿನದಲ್ಲಿ ಈ ಉತ್ಪನ್ನವನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ದಾಖಲೆಯ ಪ್ರಮಾಣದಲ್ಲಿ ಹಿಟ್ಟು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ನಂದಿನಿ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿರುತ್ತವೆ ಎಂಬ ಭಾವನೆ ಹಿಂದಿನಿಂದಲೂ ಜನರಲ್ಲಿ ಇದೆ. ಇದು ನೈಸರ್ಗಿಕ ಮತ್ತು ಆರೋಗ್ಯಕರ ಎಂಬ ಭಾವನೆ ಇರುವುದರಿಂದ ಗ್ರಾಹಕರು ಇದಕ್ಕೆ ಈ ಬ್ರ್ಯಾಂಡ್'ಗೆ ಹೆಚ್ಚುಆದ್ಯತೆ ನೀಡುತ್ತಾರೆ. ಗ್ರಾಹಕರು ತನ್ನ ಮೇಲೆ ಇರಿಸಿರುವ ನಂಬಿಕೆಯನ್ನು ಹಲವು ದಶಕಗಳಿಂದ ನಂದಿನಿ ಉಳಿಸಿಕೊಂಡು ಬಂದಿದೆ. ಇದೀಗ ಹೊಸದಾಗಿ ಪರಿಚಯಿಸಿದ 'ಶೇ. 5 ವೇ ಪ್ರೋಟೀನ್ ' ಮಿಶ್ರಣದ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಭಾರೀ ಡಿಮ್ಯಾಂಡ್ ಲಭಿಸಿದೆ. ಆದರೆ ಇದು ಸದ್ಯ ಇದು ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯ ನಂದಿನಿ ಔಟ್ ಲೆಟ್ ಗಳಲ್ಲಿ ಹಾಗೂ ಬೂತ್ ಗಳಲ್ಲಿ ಈ ಹಿಟ್ಟು ಲಭ್ಯವಿದೆ.
ಕಳೆದ 3 ದಿನಗಳ ಲೆಕ್ಕಾಚಾರ ತೆಗೆದುಕೊಂಡರೆ ಮಾರುಕಟ್ಟೆಗೆ ದಿನನಿತ್ಯ ಒಂದು ಟನ್ ನಷ್ಟು ಮಾರಾಟವಾಗುತ್ತಿದೆ. ಒಟ್ಟಾರೆ ಎರಡು - ಮೂರು ದಿನಗಳಿಂದ ಸುಮಾರು ಎರಡೂವರೆ ಟನ್ ಹಿಟ್ಟು ಪೂರೈಕೆಯಾಗಿದ್ದು ಅವುಗಳೆಲ್ಲವೂ ಬಿಕರಿಯಾಗಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಇದಾಗಿರುವುದರಿಂದ ಗ್ರಾಹಕರು ಖುಷಿಯಿಂದ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೆ ಬಂದು ಕೇಳಿ ಖರೀದಿಸುತ್ತಿರುವುದರಿಂದ ನಗರದ ಎಲ್ಲಾ ಭಾಗಕ್ಕೂ ಹಂತಹಂತವಾಗಿ ಹಿಟ್ಟು ಪೂರೈಕೆ ವಿಸ್ತರಿಸಲು ಕೆಎಂಎಫ್ ಸಿದ್ದತೆ ನಡೆಸಿದೆ.
ಹಾಲಿನ ವ್ಯಾನ್ ಗಳ ಜೊತೆ ಹಿಟ್ಟಿನ ಪ್ಯಾಕೆಟ್ ಗಳ ಸರಬರಾಜು ಮಾಡುತ್ತಿಲ್ಲ ಇಡ್ಲಿ ಹಿಟ್ಟು ವಿತರಣೆಗೆ ಪ್ರಸ್ತುತ 5-6 ವಾಹನಗಳಿದ್ದು, ಬೆಂಗಳೂರಿನ ಬೇರೆ ಬೇರೆ ಭಾಗಗಳಿಗೆ ವಿಸ್ತರಣೆ ಮಾಡಿದ ಮೇಲೆ ಶೀಘ್ರದಲ್ಲೇ ಇನ್ನೂ 10 -18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದೆ.
ಎಂಟಿಆರ್, ಐಡಿ ಮತ್ತು ಅಸಲ್‌ನಂತಹ ಮಾರುಕಟ್ಟೆ ಹಿಡಿತ ಹೊಂದಿರುವ ಬ್ರ್ಯಾಂಡ್ ಗಳ ವಿರುದ್ದ ನಂದಿನಿ ಬ್ಯಾಟರ್ ಸ್ಪರ್ಧಿಸುತ್ತಿದ್ದು ಈ ಉತ್ಪನ್ನವು ಎರಡು ಗಾತ್ರಗಳಲ್ಲಿ ಲಭ್ಯವಿದೆ. 450-ಗ್ರಾಂ ಪ್ಯಾಕ್ ಬೆಲೆ ₹ 40 ಮತ್ತು 900-ಗ್ರಾಂ ಪ್ಯಾಕ್ ಬೆಲೆ ₹ 80 ಆಗಿದ್ದು ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆ ಅವಲೋಕಿಸಿ, ರಾಜ್ಯ ಮತ್ತು ದೇಶದ ಇತರೆ ನಗರಗಳಿಗೂ ನಂದಿನಿ ಇಡ್ಲಿ, ದೋಸೆ ಹಿಟ್ಟಿನ ಮಾರಾಟ ವಿಸ್ತರಿಸಲು ಕೆಎಂಎಫ್ ಉದ್ದೇಶಿಸಿದೆ.
ಬೆಂಗಳೂರಿನಲ್ಲಿ ರೆಡಿ ಟು ಕುಕ್ ಮಾದರಿಯ ಆಹಾರ ಹೆಚ್ಚು ಜನಪ್ರೀಯವಾಗುತ್ತಿದ್ದು ಆದರಲ್ಲೂ ಆರೋಗ್ಯಕ್ಕೆ ಹಿತಕರವಾದ ಆಹಾರಕ್ಕೆ ಬೇಡಿಕೆ ಹೆಚ್ಚು ನಂದಿನಿ ಇಡ್ಲಿ, ದೋಸೆ ಹಿಟ್ಟಿನ ಉತ್ಪಾದನೆ ಹಾಗೂ ಪ್ಯಾಕಿಂಗ್‌ಗೆ ಖಾಸಗಿ ಏಜೆನ್ಸಿಯೊಂದಿಗೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ನಿತ್ಯ 10 ರಿಂದ 20 ಸಾವಿರ ಕೆ.ಜಿ ಹಿಟ್ಟನ್ನು ಮಾರಾಟ ಮಾಡುವ ಉದ್ದೇಶ ಇದೆ. ಇದಕ್ಕಾಗಿ ಜಯನಗರದಲ್ಲಿ ಪ್ಯಾಕಿಂಗ್ ಘಟಕ ತೆರೆಯಲಾಗಿದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ.


Click it and Unblock the Notifications