ಬೆಂಗಳೂರು ಮೆಟ್ರೋದಲ್ಲಿ NCMC ಕಾರ್ಡ್ ಬಳಕೆ ಸ್ಥಗಿತ: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಹೊಸ ತೊಂದರೆ ಎದುರಾಗಿದೆ. ಅದೇನೆಂದರೆ ಮೆಟ್ರೋ ಪ್ರಯಾಣಿಕರು ಓಡಾಟಕ್ಕಾಗಿ ಬಳಸುತ್ತಿರುವ NCMC ಕಾರ್ಡ್ ರೀಚಾರ್ಜ್‌ನಲ್ಲಿ ದೋಷ ಉಂಟಾಗಿದೆ. ಅಂದರೆ ಈಗಾಗಲೇ ಈ ಕಾರ್ಡ್ ಸಾವಿರಾರು ಜನರು ಬಳಸುತ್ತಿದ್ದು, ಕಾರ್ಡ್‌ಗಳನ್ನು ಮರುರಿಚಾರ್ಜ್ ಮಾಡಲಾಗದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಬಿಎಂಆರ್‌ಸಿಎಲ್ ತಾತ್ಕಾಲಿಕವಾಗಿ ಈ ಕಾರ್ಡ್‌ಗಳ ವಿತರಣೆ ಹಾಗೂ ಸೇವೆಯನ್ನು ಸ್ಥಗಿತಗೊಳಿಸಿದ್ದು, ಡಿಜಿಟಲ್ ಮೊಬಿಲಿಟಿ ಕನಸಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಬಳಕೆ ವ್ಯಾಪಕಾವಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ತಂತ್ರಜ್ಞಾನಾಧಾರಿತ ಪರಿವರ್ತನೆಗೆ ಎನ್‌ಸಿಎಂಸಿ ಎಂಬ ಯೋಜನೆ ಒಂದು ಪ್ರಮುಖ ಹೆಜ್ಜೆ ಎನ್ನಬಹುದು. ಇಂತಹ ಕಾರ್ಡ್‌ಗಳು ದೇಶಾದ್ಯಂತ ಒಂದೇ ಕಾರ್ಡ್‌ನ ಮೂಲಕ ಬಸ್, ಮೆಟ್ರೋ, ರೈಲು, ಟೋಲ್‌ಗೇಟ್ ಹಾಗೂ ಪಾರ್ಕಿಂಗ್ ಗಳಲ್ಲಿ ಉಪಯೋಗಿಸಬಹುದಾದ ಸೌಲಭ್ಯವನ್ನು ನೀಡುವ ಉದ್ದೇಶವನ್ನು ಹೊಂದಿವೆ. ಆದರೆ ಬೆಂಗಳೂರಿನಲ್ಲಿ ಈ ಡಿಜಿಟಲ್ ಪ್ರಯೋಗ ತಾತ್ಕಾಲಿಕವಾಗಿ ಕಂಟಕದಲ್ಲಿ ಸಿಕ್ಕಿರುವುದು ಪ್ರಯಾಣಿಕರ ತೊಂದರೆಗಷ್ಟೇ ಅಲ್ಲ, ಭವಿಷ್ಯದ ನಿಲುಕುವಿಕೆಯ ಮೇಲೂ ಪ್ರಶ್ನಾರ್ಚನೆ ಎಳೆದಿದೆ.
ಏನು ಸಮಸ್ಯೆ?
ರೀಚಾರ್ಜ್‌ನಲ್ಲಿ ದೋಷ ಉಂಟಾದ ಕಾರಣ ಬಿಎಂಆರ್‍ಸಿಎಲ್ ತನ್ನ ಎನ್‌ಸಿಎಂಸಿ ಕಾರ್ಡ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಹೊಸ ಕಾರ್ಡ್ ನೀಡುವುದು ಮಾತ್ರವಲ್ಲ, ಹಳೆಯ ಎನ್‌ಸಿಎಂಸಿ ಕಾರ್ಡ್‌ಗಳು ರೀಚಾರ್ಜ್ ಆಗದ ತೊಂದರೆಯಲ್ಲಿ ಸಿಲುಕಿವೆ. ನೂರಾರು ಕಾರ್ಡ್‌ಗಳನ್ನು ಪ್ರತಿದಿನ ಬಳಕೆ ಮಾಡುವ ಪ್ರಯಾಣಿಕರು, ನಿಲ್ದಾಣಗಳಲ್ಲಿ ರೀಚಾರ್ಜ್ ಮಾಡಲು ಹೋಗಿ ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ. ಈ ತೊಂದರೆಯ ಮೂಲ ಕಾರಣ RBL ಬ್ಯಾಂಕ್‌ಗೆ ತಾಂತ್ರಿಕ ಬೆಂಬಲ ನೀಡುತ್ತಿದ್ದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಎಂಬ ಕಂಪನಿಯ ದಿವಾಳಿತನ ಪ್ರಕ್ರಿಯೆ. ಈ ಸಂಸ್ಥೆಯ ಬ್ಯಾಕೆಂಡ್ ಸರ್ವರ್‌ಗಳು, ಕಾರ್ಡ್ ತಂತ್ರಜ್ಞಾನ ನಿರ್ವಹಣೆಗೆ ಪ್ರಮುಖವಾಗಿದ್ದರೂ ಈಗ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ RBL ಬ್ಯಾಂಕ್ ಇದೀಗ ಹೊಸ ತಾಂತ್ರಿಕ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತಿದೆ.
ಪ್ರಯಾಣಿಕರಿಗೂ ಭಾರಿ ಸಮಸ್ಯೆ:
ಕಾರ್ಡ್ ಇದ್ದರೂ ಮೆಟ್ರೋದಲ್ಲಿ ಪ್ರಯಾಣಿಸುವ ಸೌಲಭ್ಯವಿಲ್ಲ. ಹೀಗಾಗಿ ಸಾಕಷ್ಟು ಜನ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಡೀ ಘಟನೆಯ ತೊಂದರೆ ವ್ಯಕ್ತಗೊಳಿಸಿದ ಪ್ರಯಾಣಿಕರೊಬ್ಬರು, ₹55 ಬ್ಯಾಲೆನ್ಸ್ ಇದ್ದರೂ ರೀಚಾರ್ಜ್ ಆಗಲಿಲ್ಲ. ನಾನು KYC ಕೂಡಾ ಮಾಡಿದ್ದೆ, ಆದರೆ ಕಾರ್ಡ್ ಅನ್ನು ನಿಷ್ಕ್ರಿಯ ಮಾಡಿ ಹೊಸದನ್ನು ಕೊಡುತ್ತಾರೆ ಎಂದಾಗ ಖಿನ್ನತೆ ಉಂಟಾಯಿತು" ಎಂದರು. ಹೀಗೆ KYC ಮಾಡಿಕೊಂಡದ್ದೇ ವ್ಯರ್ಥ ಎಂದು ಅವರಿಗೆ ಅನ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಬೆಂಗಳೂರಿನ ಬಹುತೇಕ ಮಂದಿ ಅವಲಂಬಿಸಿರುವುದೇ ಮೆಟ್ರೋ ಪ್ರಯಾಣವನ್ನ. ಶಾಲೆಗೆ ಹೋಗುವ ಮಕ್ಕಳಯ, ಆಫೀಸ್‌ಗೆ ಹೋಗುವ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಎಲ್ಲರಿಗೂ ಮೆಟ್ರೋ ಅತ್ಯಗತ್ಯ. ಹೀಗೆ ದಿಢೀರ್ ಎಂದು ಈ ರೀತಿಯ ಬದಲಾವಣೆಯಾಗಿರುವುದರಿಂದ, ಹೇಳಲಾಗದ ತೊಂದರೆ ಉಂಟಾಗಿದೆ. ಬೆಂಗಳೂರು ನಗರದಾದ್ಯಂತ ದಿನನಿತ್ಯದ ಮೆಟ್ರೋ ಪ್ರಯಾಣಿಕರಿಗೆ ಇದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ.
ಬಿಎಂಆರ್‌ಸಿಎಲ್ ಹೇಳಿದ್ದೇನು..?
ಇನ್ನು ಈ ಸಮಸ್ಯೆ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್ ಯಶವಂತ್ ಚವಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಪ್ರಯಾಣಿಕರಿಗೆ ಉಚಿತ ಕ್ಲೋಸ್ಡ್-ಲೂಪ್ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುತ್ತಿದ್ದೇವೆ. ಹಳೆಯ ಎನ್‌ಸಿಎಂಸಿ ಕಾರ್ಡ್‌ನಲ್ಲಿದ್ದ ಶಿಷ್ಟ ಮೊತ್ತವನ್ನು ಹೊಸ ಕಾರ್ಡ್‌ಗೆ ವರ್ಗಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲಿವರೆಗೂ ಈ ಸಮಸ್ಯೆ..?
ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿರುವ ಪ್ರಕಾರ, ಏಪ್ರಿಲ್ 15ರೊಳಗೆ ಸಮಸ್ಯೆ ಬಗೆಹರಿಯುತ್ತದೆ ಎನ್ನಲಾಗಿದೆ. ಅಂದರೆ ಅಲ್ಲಿವರೆಗೂ ಪ್ರಯಾಣಿಕರಿಗೆ ಈ ಸಮಸ್ತೆ ತಪ್ಪಿದ್ದಲ್ಲ ಅಂದುಕೊಳ್ಳಬಹುದು. ಏಪ್ರಿಲ್ 15ರ ನಂತರ ಎನ್‌ಸಿಎಂಸಿ ಕಾರ್ಡ್ ವಿತರಣೆ ಪುನರಾರಂಭಗೊಳ್ಳಲಿದೆ. ಆದರೆ ಸಾರ್ವಜನಿಕರಲ್ಲಿ ಈ ದಿನಾಂಕದ ಮೇಲೆ ಆಧಾರಿತ ನಂಬಿಕೆ ಬೆಳೆಸುವುದು ಸುಲಭವಲ್ಲ ಎನ್ನಲಾಗಿದೆ.
ಡಿಜಿಟಲ್ ಪರಿಕಲ್ಪನೆಗೆ ತೊಂದರೆ:
NCMC ಕಾರ್ಡ್ ಯೋಜನೆ ಒಂದೇ ಭಾರತ, ಒಂದೇ ಕಾರ್ಡ್ ಎಂಬ ಘೋಷಣೆಯಡಿ ಆರಂಭಗೊಂಡಿತ್ತು. ಕಾರ್ಡ್‌ಗಳ ಮೂಲಕ ಯಾವುದೇ ನಗರದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರು ಒಂದೇ ಕಾರ್ಡ್‌ನೊಂದಿಗೆ ಎಲ್ಲ ವ್ಯವಸ್ಥೆಗಳಲ್ಲಿ ಸೇವೆ ಪಡೆಯಬಹುದಾಗಿತ್ತು. ಆದರೆ ತಾಂತ್ರಿಕ ಪಾಲುದಾರ ಕಂಪನಿಯ ಆರ್ಥಿಕ ಕುಸಿತದಿಂದಾಗಿ ಈ ಯೋಜನೆಯ ಕಾರ್ಯಚಟುವಟಿಕೆಗೆ ತೀವ್ರ ಹೊಡೆತ ಬಿದ್ದಿದೆ. ಅದಕ್ಕೂ ಮುನ್ನ, ಬೆಂಗಳೂರು ಮೆಟ್ರೋದಲ್ಲಿ AGS ಟ್ರಾನ್ಸಾಕ್ಟ್ ಮತ್ತು RBL ಬ್ಯಾಂಕ್ ಸೇರಿ ಸುಮಾರು 57,000ಕ್ಕೂ ಹೆಚ್ಚು ಎನ್‌ಸಿಎಂಸಿ ಕಾರ್ಡ್‌ಗಳನ್ನು ಮಾರ್ಚ್ 2023 ರಿಂದ ಅಕ್ಟೋಬರ್ 2024ರೊಳಗೆ ವಿತರಿಸಿದ್ದವು. ಇವುಗಳೆಲ್ಲಾ ಇದೀಗ ಅಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಮಾರ್ಟ್ ಕಾರ್ಡ್ ಉಪಯೋಗದ ಮೇಲೆ ಪ್ರಯಾಣಿಕರು ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಒಟ್ಟಿನಲ್ಲಿ ಈ ಒಂದು ಬೆಳವಣಿಗೆಯಿಂದ, ಸಾರ್ವಜನಿಕರಿಗೆ ಭಾರಿ ತೊಂದರೆಯಾಗಿದೆ ಎನ್ನಬಹುದು ಅಷ್ಟೇ.


Click it and Unblock the Notifications