ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಕರ್ನಾಟಕ ಸರ್ಕಾರವು ಇತ್ತೀಚೆಗೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆದ್ರೆ ಸರ್ಕಾರದ ಆ ನಿರ್ಧಾರ ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾವು (Karnataka Govt) 2025-26 ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಪ್ರವೇಶ ಮಾಡಬೇಕೆಂದರೆ ಜೂನ್ 1 ರಂದು ಕನಿಷ್ಠ 6 ವರ್ಷ ವಯಸ್ಸು ಕಡ್ಡಾಯಗೊಳಿಸಿತ್ತು. ಆದ್ರೆ ಇದೀಗ ಸರ್ಕಾರದ ಆ ಕಠಿಣ ನಿರ್ಧಾರ, 2.3 ಲಕ್ಷಕ್ಕೂ ಅಧಿಕ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ.

ಹೌದು, ಎನ್‌ಇಪಿ 1 ನೇ ತರಗತಿಗೆ ಪ್ರವೇಶ ಪಡೆಯಬೇಕೆಂದರೆ, ಜೂನ್ 1 ರಂದು ಕನಿಷ್ಠ 6 ವರ್ಷ ವಯಸ್ಸಾಗಿರಬೇಕು. ಆದ್ರೆ ಇದೀಗ ಈ ನಿಯಮದಿಂದ ಹಲವು ಮಕ್ಕಳು 1 ನೇ ತರಗತಿಗೆ ಹೋಗದೇ, ಯುಕೆಜಿ ಅಥವಾ ಮಾಂಟೆಸ್ಸರಿ ಮರುಪ್ರವೇಶವನ್ನು ಮಾಡಬೇಕಾಗಿ ಬಂದಿದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ, ಶೈಕ್ಷಣಿಕ ಒತ್ತಡ ಮತ್ತು ಪೋಷಕರಿಗೂ ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ನಿಯಮ?
2022ರ ನವೆಂಬರ್‌ನಲ್ಲಿ ಸರ್ಕಾರವು ಹಿಂದಿನ 5 ವರ್ಷ 5 ತಿಂಗಳು (5.5 ವರ್ಷ) ಇದ್ದ ವಯೋಮಿತಿಯನ್ನು, 6 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದು NEP ಮತ್ತು RTE ಕಾಯ್ದೆಗೆ ಅನುಗುಣವಾಗಿ ತರಲಾಗಿದ್ದು, ಮಕ್ಕಳ ಮಾನಸಿಕ-ಶಾರೀರಿಕ ಬೆಳವಣಿಗೆಗೆ ಸಹಕಾರಿ ಎಂದು ವಾದಿಸಲಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ಮಕ್ಕಳ ಜನನ ತಡವಾಗಿದ್ದು, ಇದೀಗ ಯುಕೆಜಿ ಮುಗಿಸಿದರೂ, ಕೇವಲ ಕೆಲವು ದಿನಗಳು ಅಥವಾ ಒಂದೆರಡು ತಿಂಗಳುಗಳಿಂದ 1ನೇ ತರಗತಿಗೆ ಪ್ರವೇಶ ಪಡೆಯದಂತಾಗಿದೆ. ಈ ಹಿನ್ನೆಲೆ ಹಲವು ಮಕ್ಕಳು ಮತ್ತೆ ಯುಕೆಜಿಯಲ್ಲೇ ಕುಳಿತುಕೊಳ್ಳುವಂತಾಗಿದೆ.
ಪೋಷಕರ ಆಕ್ರೋಶ, ಸರ್ಕಾರಕ್ಕೆ ಒತ್ತಾಯ!
ಇದೀಗ ಶಿಕ್ಷಣ ನೀತಿ ವಿರುದ್ಧ ಆಕ್ರೋಶಗೊಂಡಿರುವ ಪೋಷಕರು, ಬೆಂಗಳೂರಿನ ಪ್ರೆಸ್ ಕ್ಲಬ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮಕ್ಕಳು ಶೈಕ್ಷಣಿಕವಾಗಿ ಸಿದ್ಧರಾಗಿದ್ದರೂ, ಶಿಕ್ಷಣ ನೀತಿಯಿಂದಾಗಿ ಯುಕೆಜಿಯಲ್ಲೇ ಉಳಿದುಕೊಳ್ಳುವಂತಾಗಿದೆ. ಇದರಿಂದ ಮಕ್ಕಳಲ್ಲಿ ಮಾನಸಿಕ ಒತ್ತಡವೂ ಮನೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಇನ್ನು ಅನೇಕ ಮಕ್ಕಳು ಒಂದೆರಡು ತಿಂಗಳ ಅಂತರದಿಂದಾಗಿ, ಸಂಪೂರ್ಣವಾಗಿ ಒಂದು ವರ್ಷ ಶೈಕ್ಷಣಿಕ ಅವಧಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದ್ದರಿಂದ ಮೂರು ವರ್ಷಗಳ ಯುಕೆಜಿ ಪೂರ್ಣಗೊಳಿಸಿದ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಈ ಬಗ್ಗೆ ಚಿಂತೆ ನಡೆಸುತ್ತೆ ಎಂಬುದು ನಮಗೆ ನಂಬಿಕೆಯಿದೆ. ಈಗಾಗಲೇ 2 ಲಕ್ಷಕ್ಕೂ ಅಧಿಕ ಮಕ್ಕಳು ಸರಕಾರದ ಆದೇಶದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ದಾಖಲಾತಿ ವಿಚಾರದಲ್ಲಿ 90 ದಿನಗಳ ವಯಸ್ಸಿನ ಸಡಿಲಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದರಿಂದಾಗಿ, ಪೋಷಕರ ಆರ್ಥಿಕ ಹೊರೆ ಹೆಚ್ಚಾಗುತ್ತಿರುವುದರಿಂದಾಗಿ, ಪೋಷಕರು ಇದೀಗ ಸಡಿಲಿಕೆಗೆ ಪಟ್ಟು ಹಿಡಿದಿದ್ದು, ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications