ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಇತ್ತೀಚೆಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಟ್ರಾಫಿಕ್ ಸಮಸ್ಯೆಯಿಂದ (Traffic Problem) ಬೇಸತ್ತಿದ್ದ ಏರ್‌ಪೋರ್ಟ್ ಪ್ರಯಾಣಿಕರು ಇದೀಗ ಕ್ಯಾಬ್ ಸೇವೆಯಿಂದಾಗಿ ಆಕ್ರೋಶಗೊಂಡಿದ್ದಾರೆ. ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡುತ್ತಾರೆ. ಆದ್ರೆ ಇತ್ತೀಚೆಗೆ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದಲ್ಲಾದ ಕ್ಯಾಬ್ ವಿಳಂಬದ (Cab Service) ಬಗ್ಗೆ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಬೆನ್ನಲ್ಲೇ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಹೊಸ ಕ್ಯಾಬ್ ನಿರ್ವಾಹಕರನ್ನು ನಿಯೋಜಿಸಲಾಗಿದೆ. ಆದರೂ ಪ್ರಯಾಣಿಕರ ಕಾಯುವಿಕೆ ಸಮಯ ಮತ್ತು ಕ್ಯಾಬ್ ಕೊರತೆ ಇನ್ನೂ ಕಡಿಮೆಯಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಯಾಣಿಕರ ಆಕ್ರೋಶದ ವಿಡಿಯೋ ವೈರಲ್!
ನವೆಂಬರ್ 5 ರಂದು, ದಿಶಾ ಸೈನಿ ಎಂಬ ಪ್ರಯಾಣಿಕರೊಬ್ಬರು, ಊಬರ್ ಪಿಕಪ್ ಪಾಯಿಂಟ್‌ನಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ಪ್ರಯಾಣಿಕರು ನಿಂತಿರುವ ವಿಡಿಯೋವನ್ನು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೇ "ಸಮಯ ಉಳಿಸುವ ಉದ್ದೇಶದಿಂದ ರಾತ್ರಿ ಬೆಂಗಳೂರಿನಲ್ಲಿ ಇಳಿದೆ. ಆದ್ರೆ ವಿಮಾನ ನಿಲ್ದಾಣದಲ್ಲಿ ಊಬರ್ ಪಿಕಪ್ ಪಾಯಿಂಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ, 2 ಗಂಟೆಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು" ಎಂದು ಬರೆದುಕೊಂಡಿದ್ದರು. ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಹೊಸ ಸೇವೆ ನಂತರವೂ ಸಮಸ್ಯೆ ನೀಗಿಲ್ಲ!
ಇತ್ತೀಚೆಗಷ್ಟೇ ಒಹೆಚ್‌ಎಂ ಮೊಬಿಲಿಟಿ ಮಾರುಕಟ್ಟೆಗೆ ಸೇರ್ಪಡೆಗೊಂಡ ನಂತರ ಮತ್ತು ಮೆಗಾ ಕ್ಯಾಬ್ಸ್ ವಿಮಾನ ನಿಲ್ದಾಣದ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ವಹಿಸಿಕೊಂಡ ನಂತರ ಕ್ಯಾಬ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿತ್ತು. ಅಲ್ಲದೇ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, ಕ್ಯಾಬ್ ಸಂಚಾರಕ್ಕೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಐಪಿ ಪಿಕಪ್ ವ್ಯವಸ್ಥೆಯನ್ನು ಟರ್ಮಿನಲ್ 1 ರ ಕೆಳಗೆ ಸ್ಥಳಾಂತರಿಸಲು ಪ್ಲಾನ್ ಮಾಡಿದೆ. ಆದರೆ ಸದ್ಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ವ್ಯವಸ್ಥೆಯಿಂದ ಪ್ರಯಾಣಿಕರು ಮಾತ್ರ ಸುಸ್ತಾಗಿದ್ದಾರೆ.
ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಓಲಾ, ಊಬರ್, ಕ್ವಿಕ್ ರೈಡ್, ಒಹೆಚ್‌ಎಂ ಮೊಬಿಲಿಟಿ ಮತ್ತು ವಿಮಾನ ನಿಲ್ದಾಣದ ಟ್ಯಾಕ್ಸಿಗು ಕಾರ್ಯನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದ ಟ್ಯಾಕ್ಸಿ ಫ್ಲೀಟ್ ಸುಮಾರು 1000 ಕ್ಯಾಬ್‌ಗಳನ್ನು ಹೊಂದಿದೆ. ಅದೇ ರೀತಿ ಕ್ವಿಕ್ ರೈಡ್550, ಒಹೆಚ್‌ಎಮ್ ಮೊಬಿಲಿಟಿ ಸುಮಾರು 150 ಕ್ಯಾಬ್ ಸೇವೆಗಳನ್ನು ಹೊಂದಿದೆ. ಇನ್ನು ಊಬರ್ ತನ್ನ ದಿನನಿತ್ಯದ ಸೇವೆ ಮತ್ತು ಊಬರ್ ಬ್ಲ್ಯಾಕ್ ಎರಡನ್ನೂ ಕಾರ್ಯಾಚರಣೆ ನಡೆಸುತ್ತಿದೆ. ಅದರಲ್ಲೂ ಊಬರ್ ಬ್ಲ್ಯಾಕ್ ಸುಮಾರು 1000 ವಾಹನಗಳನ್ನು ಹೊಂದಿದೆ ಎಂದು ವರದಿಯಾಗಿದೆ.
ಇಷ್ಟೆಲ್ಲಾ ಕ್ಯಾಬ್ ಸೇವೆ ಇದ್ದರೂ ಏರ್‌ಪೋರ್ಟ್‌ನಲ್ಲಿ ಕಾಯುವ ಸಮಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಸೇವಾ ಗುಣಮಟ್ಟ ಕೂಡಾ ಸುಧಾರಿಸಿಲ್ಲ ಎಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ. ಇನ್ನು ಜನದಟ್ಟಣೆ ಇಲ್ಲದ ಸಮಯದಲ್ಲೂ ಕಾಯುವಿಕೆ ಸಮಯ ಹೆಚ್ಚಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರತಕ್ರಿಯೆ ನೀಡಿರುವ ಕ್ವಿಕ್ ರೈಡ್ ಅಧಿಕಾರಿಯೊಬ್ಬರು, "ಸಾಮಾನ್ಯವಾಗಿ ಭಾನುವಾರದಂದು ಕ್ಯಾಬ್‌ಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಈ ದಿನ ಕ್ಯಾಬ್‌ಗಳ ಕೊರತೆ ಎದುರಿಸುತ್ತೇವೆ. ಆದ್ದರಿಂದ ನಾವು ಮೊದಲು ಬುಕ್ ಮಾಡಿದವರ ರೈಡ್ ಅನ್ನು ಮಾತ್ರ ಸ್ವೀಕರಿಸುತ್ತೇವೆ" ಎಂದು ಹೇಳಿದ್ದಾರೆ.


Click it and Unblock the Notifications