ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕಾರ್ಮಿಕ ಸಂಹಿತೆ ಹಲವಾರು ಕಾರ್ಮಿಕ ವಲಯಕ್ಕೆ ಪ್ರಯೋಜನವಾಗಲಿದೆ. ಹಳೆಯ 29 ಕಾನೂನುಗಳನ್ನು ರದ್ದುಗೊಳಿಸಿ, ಇದೀಗ ನಾಲ್ಕು ಸುಧಾರಿತ ಕಾರ್ಮಿಕ ಸಂಹಿತೆಗಳಾಗಿ ರೂಪಿಸಿದೆ. ಇದರಿಂದ ಮಹಿಳೆಯರಿಗೆ, ಅಸಂಘಟಿತ ಕಾರ್ಮಿಕರಿಗೆ, ಅನೌಪಚಾರಿಕ ನೌಕರರಿಗೆ ಹಲವು ಪ್ರಯೋಜನಗೆಳು ಸಿಗಲಿದೆ. ಹೊಸ ಕಾರ್ಮಿಕ ಸಂಹಿತೆಯಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ.

ಈ ಮೊದಲು ನೈಟ್ ಶಿಫ್ಟ್‌ನಲ್ಲಿ ಮತ್ತು ಕೆಲವು ನಿರ್ದಿಷ್ಟ ಉದ್ಯೋಗಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿರಲಿಲ್ಲ. ಆದರೆ ಈಗ ಮಹಿಳೆಯರು ತಮ್ಮ ಒಪ್ಪಿಗೆ ಮತ್ತು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಎಲ್ಲಾ ಸಂಸ್ಥೆಗಳಲ್ಲಿ, ನೈಟ್ ಶಿಫ್ಟ್ ಸೇರಿದಂತೆ, ಎಲ್ಲಾ ರೀತಿಯ ಕೆಲಸಗಳನ್ನು ಮಾಡಬಹುದು ಎಂದು ಸಂಹಿತೆ ಹೇಳುತ್ತದೆ.
ಮಹಿಳೆಯರಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿಯಿಂದ ಮಹಿಳೆಯರು ಹೆಚ್ಚಿನ ಆದಾಯದ ಉದ್ಯೋಗಗಳಲ್ಲಿ ಸಮಾನ ಅವಕಾಶಗಳನ್ನು ಪಡೆಯಲಿದ್ದಾರೆ. ಭಾರತ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಮಗ್ರ ಕಾರ್ಮಿಕ ಸಂಹಿತೆಗಳಾಗಿ ವಿಂಗಡಣೆ ಮಾಡಿದೆ. ಇದು ಕಾರ್ಮಿಕರ ಕಲ್ಯಾಣ ಮತ್ತು ಅನುಕೂಲದ ದೃಷ್ಟಿಯಿಂದ ಕೈಗೊಂಡ ವಿಶೇಷ ಕ್ರಮ.
ಮಹಿಳಾ ಕಾರ್ಮಿಕರಿಗೆ, ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ, ಆದ್ಯತೆ ನೀಡುವುದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇದು ಒಂದು ಕೆಲಸದಲ್ಲಿ ಅವರ ಭಾಗವಹಿಸುವಿಕೆ, ಕೆಲಸ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಭಾರತದ ಹೊಸ ಕಾರ್ಮಿಕ ಸಂಹಿತೆಗಳು ಲಿಂಗ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸಿದೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವ ಕ್ರಮವನ್ನು ಜಾರಿಗೆ ತಂದಿದೆ.
ಮಹಿಳೆಯರು ನೈಟ್ ಶಿಫ್ಟ್‌ಗಳಲ್ಲಿ ಮತ್ತು ಭೂಗತ ಗಣಿಗಾರಿಕೆ ಹಾಗೂ ಭಾರೀ ಯಂತ್ರೋಪಕರಣಗಳು ಸೇರಿದಂತೆ ಹಲವು ಉದ್ಯೋಗಗಳಲ್ಲಿ ಕೆಲಸ ಮಾಡಲು ಈ ಹಿಂದೆ ಅನುಮತಿ ನೀಡಲಾಗುತ್ತಿರಲಿಲ್ಲ. ಆದ್ರೆ ಇದೀಗ ಹೊಸ ಸಂಹಿತೆಯಲ್ಲಿ ಅವಕಾಶ ನೀಡಲಾಗಿದೆ. ಇದಕ್ಕೆ ಅವರ ಒಪ್ಪಿಗೆ ಮತ್ತು ಉದ್ಯೋಗದಾತರು ಕಡ್ಡಾಯ ಸುರಕ್ಷತಾ ಕ್ರಮಗಳನ್ನು ನೀಡುವುದು ಕೂಡಾ ಅವಶ್ಯಕವಾಗಿದೆ.
ಆರೋಗ್ಯ ರಕ್ಷಣೆ, ಉತ್ಪಾದನೆ, ಐಟಿ ಸೇವೆಗಳು ಮತ್ತು ಲಾಜಿಸ್ಟಿಕ್ಸ್‌ನಂತಹ ರಾತ್ರಿ ಹಗಲು ಕಾರ್ಯನಿರ್ವಹಿಸುವ ಕೈಗಾರಿಕೆಗಳಲ್ಲಿ ಸಮಾನ ಅವಕಾಶಗಳನ್ನು ನೀಡುವ ಉದ್ದೇಶದಿಂದ ಈ ನೀತಿ ಜಾರಿಗೆ ತರಲಾಗಿದೆ. ಮಹಿಳೆಯರಿಗೆ ಸಮಾನ ವೇತನ, ರಾತ್ರಿ ಪಾಳಿಗಳ ಕೆಲಸದ ಅನುಮತಿ ಹೊರತಾಗಿ, ಕಾರ್ಮಿಕ ಸಂಹಿತೆಗಳು ಮಹಿಳೆಯರು ಮತ್ತು ಕಾರ್ಮಿಕರನ್ನು ಬೆಂಬಲಿಸುವ ಹಲವಾರು ಸುಧಾರಣೆಗಳನ್ನು ಪರಿಚಯಿಸಿವೆ.
ನಿಗದಿತ ಅವಧಿಯ ನೌಕರರಿಗೂ ಗ್ರಾಚ್ಯುಟಿ!
ಹೊಸ ಸಂಹಿತೆಯಲ್ಲಿ, ಪರ್ಮನೆಂಟ್ ನೌಕರರು ಮಾತ್ರವಲ್ಲದೇ, ನಿಗದಿತ ಅವಧಿಯ ಉದ್ಯೋಗಿಗಳು (Fixed Term Employees) ಕೂಡಾ ಇನ್ಮೇಲೆ ಗ್ರಾಚುಟಿಗೆ ಅರ್ಹರಾಗುತ್ತಾರೆ. ಅಂದರೆ ಕೇವಲ ಒಂದು ವರ್ಷದ ಸೇವೆಯ ನಂತರ, ನಿಗದಿತ ಅವಧಿಯ ಉದ್ಯೋಗಿಗಳು ಗ್ರಾಚ್ಯುಟಿ ಪಡೆಯಬಹುದು. ಈ ಹಿಂದಿನ ನೀತಿಯಲ್ಲಿ ಪರ್ಮನೆಂಟ್ ನೌಕರರು ಮಾತ್ರ 5 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಗ್ರಾಚ್ಯುಟಿ ಪಡೆಯಬೇಕಿತ್ತು. ಆದ್ರೆ ಇನ್ಮೇಲೆ ನಿಗದಿತ ಅವಧಿಯ ನೌಕರರು ಕೂಡಾ ಒಂದು ವರ್ಷ ಒಂದು ಸಂಸ್ಥೆಯಲ್ಲಿ ಪೂರೈಸಿದರೆ ಗ್ರಾಚುಟಿ ಪಡೆಯಬಹುದು.


Click it and Unblock the Notifications