ಬೆಂಗಳೂರು (Bengaluru) ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬಹುತೇಕರು ಇರುವುದು ಬಾಡಿಗೆ ಮನೆಯಲ್ಲೇ, ಆದ್ರೆ ಕೆಲವು ಪ್ರದೇಶಗಳಲ್ಲಿ ಬಾಡಿಗೆ ಹಣ ಹೆಚ್ಚಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಕಡಿಮೆ ಇರುತ್ತದೆ. ಆದ್ರೆ ಇದೀಗ ಕೇಂದ್ರ ಸರ್ಕಾರ ಬಾಡಿಗೆ ಮನೆಗಳಿಗೆ (Rent Home) ಸಂಬಂಧಿಸಿ ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಬಗ್ಗೆ ಸರ್ಕಾರವು 'ಹೊಸ ಬಾಡಿಗೆ ಒಪ್ಪಂದ 2025' (New rental agreement 2025) ಅನ್ನು ಪರಿಚಯಿಸಿದೆ. ಈ ಮೂಲಕ ಇನ್ಮೇಲೆ, ಬಾಡಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸುವುದು, ಒಪ್ಪಂದಗಳ ನಿಯಮ ಮತ್ತು ವಿವಾದಗಳಿಗೆ ತೆರೆ ಎಳೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಇತ್ತೀಚೆಗೆ ಬಾಡಿಗೆ ಮನೆಗಳು ಮತ್ತು ವಾಣಿಜ್ಯ ಸ್ಥಳಗಳ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ, ಸರ್ಕಾರ ಈ 'ಹೊಸ ಬಾಡಿಗೆ ಒಪ್ಪಂದ 2025' (New Rental Agreement) ಅನ್ನು ಪರಿಚಯಿಸಲು ಸಿದ್ಧವಾಗಿದೆ.
ಮಾದರಿ ಟೆನೆನ್ಸಿ ಕಾಯಿದೆ (MTA) ಮತ್ತು ಇತ್ತೀಚಿನ ಕೇಂದ್ರ ಬಜೆಟ್‌ನ ಆಧಾರದ ಮೇಲೆ, 'ಮನೆ ಬಾಡಿಗೆ ನಿಯಮಗಳು 2025'ರ ಪ್ರಕಾರ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಈ ಹೊಸ ನಿಯಮಗಳ ಪ್ರಕಾರ, ಎಲ್ಲಾ ಬಾಡಿಗೆ ಅಗ್ರಿಮೆಂಟ್‌ಗೆ ಸಹಿ ಮಾಡಿದ ಎರಡು ತಿಂಗಳೊಳಗೆ ನೋಂದಣಿ ಪ್ರಕ್ರಿಯೆ ಮುಗಿಸಬೇಕು.
ಇನ್ನು ಈ ನೋಂದಣಿ ಪ್ರಕ್ರಿಯೆಯನ್ನು ರಾಜ್ಯ ಆಸ್ತಿ ನೋಂದಣಿ ಪೋರ್ಟಲ್‌ಗಳ (State Property Registration Portal) ಮೂಲಕ ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ರಿಜಿಸ್ಟ್ರಾರ್ ಕೇಂದ್ರದಲ್ಲಿ ಪೂರ್ಣಗೊಳಿಸಬಹುದು. ಒಂದು ವೇಳೆ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡಲು ವಿಫಲವಾದ್ರೆ, 5,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಹೊಸ ನಿಯಮಗಳು ಮನೆಮಾಲೀಕರು ಮತ್ತು ಬಾಡಿಗೆದಾರರು ಇಬ್ಬರಿಗೂ ಅನುಕೂಲಕರವಾಗಿದೆ.
ಬಾಡಿಗೆದಾರರ ಹೊಸ ನಿಯಮಗಳೇನು?
- ನೋಂದಣಿ ಕಡ್ಡಾಯ: ದಂಡ ತಪ್ಪಿಸಲು ಒಪ್ಪಂದಗಳನ್ನು ಎರಡು ತಿಂಗಳೊಳಗೆ ನೋಂದಾಯಿಸಬೇಕು.
- ಡೆಪಾಸಿಟ್: ಮನೆ ಬಾಡಿಗೆಗೆ ಎರಡು ತಿಂಗಳ ಬಾಡಿಗೆ ಮೊತ್ತ, ಕಮರ್ಷಿಯಲ್ ಬಾಡಿಗೆಗಾದರೆ ಆರು ತಿಂಗಳ ಬಾಡಿಗೆ ಮೊತ್ತ ಡೆಪಾಸಿಟ್ ಆಗಿ ನೀಡಬೇಕು.
- ಬಾಡಿಗೆ ಹೆಚ್ಚಳ ನಿಯಮ: ಬಾಡಿಗೆ ಹೆಚ್ಚಳ ಮಾಡುವ ಮುನ್ನ ನಿಗದಿತ ನಿಯಮಗಳನ್ನು ಪಾಲಿಸಬೇಕು ಮತ್ತು ಮುಂಚಿತವಾಗಿ ಬಾಡಿಗೆದಾರರಿಗೆ ಸೂಚನೆ ನೀಡಬೇಕು.
- ನ್ಯಾಯಯುತವಾಗಿ ಖಾಲಿ ಮಾಡಿಸುವುದು: ಬಾಡಿಗೆದಾರರನ್ನು ಇದ್ದಕ್ಕಿದ್ದಂತೆ ಹೊರ ಹಾಕುವಂತಿಲ್ಲ. ಅಂದರೆ ನಿಯಮಾನುಸಾರ ಖಾಲಿ ಮಾಡಿಸಬೇಕು.
- ವಿವಾದ ತೆರೆ ಎಳೆಯಲು ನಿಯಮ: ಯಾವುದೇ ಬಾಡಿಗೆ ಸಂಬಂಧಿಸಿ ವಿವಾದಗಳಿಗೆ ಪರಿಹಾರ ನೀಡಲು 60 ದಿನಗಳಲ್ಲಿ ವಿಶೇಷ ಬಾಡಿಗೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ.
- 11 ತಿಂಗಳ ಅಗ್ರಿಮೆಂಟ್ ಮುಗಿದ ನಂತರ, ಮತ್ತೆ ಅಗ್ರಿಮೆಂಟ್ ಬರೆಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು.
ಮನೆಮಾಲೀಕರಿಗೆ ಪ್ರಯೋಜನಗಳು:
- ಟಿಡಿಎಸ್ ವಿನಾಯಿತಿ: ಬಾಡಿಗೆ ಆದಾಯದ ಮೇಲೆ ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುತ್ತದೆ. ಆದ್ರೆ ಇದೀಗ ಇದಕ್ಕೂ ವಿನಾಯಿತಿ ಘೋಷಿಸಲಾಗಿದ್ದು, ವಾರ್ಷಿಕವಾಗಿ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಮನೆ ಮಾಲೀಕರ ಹಣ ಉಳಿತಾಯವಾಗಲಿದೆ.
- ತ್ವರಿತ ಕ್ರಮ: ಮೂರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ಬಾಡಿಗೆ ಪಾವತಿ ಮಾಡದಿದ್ದರೆ, ಈ ಬಗ್ಗೆ ದೂರು ನೀಡಬಹುದು. ಅಲ್ಲದೇ ತ್ವರಿತ ಇತ್ಯರ್ಥಕ್ಕಾಗಿ ಬಾಡಿಗೆ ನ್ಯಾಯಮಂಡಳಿಗಳಿಗೆ ಕಳುಹಿಸಬಹುದು.
- ಬಾಡಿಗೆಯ ಅಗ್ರಿಮೆಂಟ್ ಅನ್ನು ನೋಂದಾವಣಿ ಮಾಡಿದ್ದರೆ, ಸರ್ಕಾರ ಯೋಜನೆಗಳಲ್ಲಿ ಪರಿಗಣಿಸಲಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು.
ನಿಮ್ಮ ಬಾಡಿಗೆ ಅಗ್ರಿಮೆಂಟ್ ಅನ್ನು ನೋಂದಾಯಿಸುವುದು ಹೇಗೆ:
- ನಿಮ್ಮ ರಾಜ್ಯ ಆಸ್ತಿ ನೋಂದಣಿ ಪೋರ್ಟಲ್‌ಗೆ (State Property Registration Portal) ಭೇಟಿ ನೀಡಿ.
- ಬಾಡಿಗೆದಾರರ, ಮಾಲೀಕರ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಬಾಡಿಗೆ ವಿವರಗಳನ್ನು ಭರ್ತಿ ಮಾಡಿ.
- ಇ-ಸಹಿ ಮಾಡಿ ಮತ್ತು ಅಗ್ರಿಮೆಂಟ್ ಸಲ್ಲಿಸಿ.
- ಅಲ್ಲಿಗೆ ನಿಮ್ಮ ರೆಂಟಲ್ ಅಗ್ರಿಮೆಂಟ್ ನೋಂದಣಿ ಮಾಡಿದಂತೆ.
ಇನ್ನು ಈ ನಿಯಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದಕ್ಕೆ ಹಲವಾರು ಪರ-ವಿರೋಧ ಕಾಮೆಂಟ್‌ಗಳು ಬಂದಿದೆ.
ಅದರಲ್ಲೂ ಒಬ್ಬ ಬಳಕೆದಾರ, "ಬೆಂಗಳೂರಿನ ಮನೆಮಾಲೀಕರು ಈಗ ಅಳುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಾನು ಈ ವಿಡಿಯೋವನ್ನು ನನ್ನ ಮನೆಮಾಲೀಕರಿಗೆ ತೋರಿಸಿದೆ. ಅವರು ಇದು AI ಎಂದು ಹೇಳಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications