ಬೆಂಗಳೂರಿನಲ್ಲಿ (Bengaluru) ಎಲ್ಲಿ ನೋಡಿದ್ರೂ ಜನಜಂಗುಳಿ, ಟ್ರಾಫಿಕ್ ಸಮಸ್ಯೆ, ದೊಡ್ಡ ದೊಡ್ಡ ಕಟ್ಟಡಗಳೇ ಕಾಣಿಸಿಕೊಳ್ಳುತ್ತದೆ.. ಆದರೂ ಒಂದಿಷ್ಟು ಜಾಗಗಳೂ ಖಾಲಿಯಿದ್ದರೂ, ಮುಂದೊಂದು ದಿನ ಅಲ್ಲಿಯೂ ಯಾವುದೋ ಕಟ್ಟಡ ಎದ್ದುನಿಲ್ಲೋದು ಅಂತೂ ಪಕ್ಕಾ. ಇದೀಗ ಬೆಂಗಳೂರಿನಲ್ಲಿ ಸಣ್ಣ ನಿವೇಶನ ಹೊಂದಿರುವವರಿಗೆ ಕಟ್ಟಡ ನಿರ್ಮಾಣ ಮತ್ತಷ್ಟು ಸುಲಭವಾಗುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಪರಿಷ್ಕೃತ ಮಹಾಯೋಜನೆ (Revised Master Plan) 2015 ಅಡಿಯಲ್ಲಿ, ಕಟ್ಟಡ ನಿಯಮಾವಳಿಗಳಲ್ಲಿ ಹೊಸ ಬದಲಾವಣೆ ತರಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದು ಸೆಟ್‌ಬ್ಯಾಕ್ ನಿಯಮಗಳನ್ನು ಸಡಿಲಗೊಳಿಸುವುದು, ನೆಲಮಾಳಿಗೆಯ ನಿಯಮಗಳನ್ನು ಸರಳಗೊಳಿಸುವುದು ಮತ್ತು ಪಾರ್ಕಿಂಗ್ ನಿಯಮಗಳನ್ನು ಅಪ್ಡೇಟ್ ಮಾಡುವುದಾಗಿದೆ.

ಸರ್ಕಾರದ ಈ ಮಹತ್ವದ ಬದಲಾವಣೆಗಳಿಂದ ಕಾನೂನುಬದ್ಧ ಕಟ್ಟಡ ನಿರ್ಮಾಣವನ್ನು ಸುಲಭಗೊಳಿಸುತ್ತದೆ ಮತ್ತು ಅನಧಿಕೃತವಾಗಿ ಕಟ್ಟಡ ನಿರ್ಮಾಣಗಳ ಸಂಖ್ಯೆ ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಗರಾಭಿವೃದ್ಧಿ ಇಲಾಖೆ (UDD) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಈ ಬಗ್ಗೆ ಮಾತನಾಡಿ, "ನಿಯಮಗಳು ತುಂಬಾ ಸಂಕೀರ್ಣ ಅಥವಾ ಅವಾಸ್ತವಿಕವಾಗಿದ್ದಾಗ, ಜನರು ನಿಯಮ ಮೀರಿ ಕಟ್ಟಡ ನಿರ್ಮಾಣಗಳಿಗೆ ಮುಂದಾಗುತ್ತಾರೆ. ಅವುಗಳನ್ನು ಸರಳೀಕರಿಸುವುದರಿಂದ, ಸಣ್ಣ ನಿವೇಶನ ಮಾಲೀಕರಿಗೆ ತಮ್ಮ ಕಟ್ಟಡ ನಿರ್ಮಾಣ ಪ್ರದೇಶವನ್ನು ಕಳೆದುಕೊಳ್ಳದಂತೆ ಸಹಾಯ ಮಾಡುತ್ತೇವೆ, ಜೊತೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತೇವೆ" ಎಂದು ಹೇಳಿದರು.
ಅನೇಕ 30x40 ಅಡಿ ಅಳತೆಯ ಮನೆಗಳು ಹಳೆಯ ಸೆಟ್‌ಬ್ಯಾಕ್ ನಿಯಮಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು ಪಡೆಯಲು ವಿಫಲವಾಗುತ್ತವೆ ಎಂದು ಗಿರಿ ನಾಥ್ ಹೇಳಿದರು. ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಆಕ್ಟ್, 1961 ರ ಅಡಿಯಲ್ಲಿ, ನವೆಂಬರ್ 11 ರಂದು UDD ಹೊರಡಿಸಿದ ಕರಡು ಅಧಿಸೂಚನೆಯ ಪ್ರಕಾರ, ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ತಿದ್ದುಪಡಿಗಳು ಬೆಂಗಳೂರು ಮತ್ತು ಬೃಹತ್ ಬೆಂಗಳೂರು ಯೋಜನೆ ಪ್ರದೇಶಗಳಲ್ಲಿನ ಎಲ್ಲಾ ಹೊಸ ಕಟ್ಟಡ ನಿರ್ಮಾಣಗಳು, ನಡೆಯುತ್ತಿರುವ ಯೋಜನೆಗಳು ಮತ್ತು ಮಾರ್ಪಾಡಿಗಾಗಿ ಅನುಮೋದನೆಗೆ ಮನವಿ ಮಾಡುವ ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ಅನ್ವಯಿಸುತ್ತವೆ.
ಪ್ರಸ್ತಾವಿತ ನಿಯಮಗಳ ಅಡಿಯಲ್ಲಿ, ಸೆಟ್‌ಬ್ಯಾಕ್‌ಗಳನ್ನು ಇನ್ನು ಮುಂದೆ ಒಟ್ಟು ಕಟ್ಟಡದ ಎತ್ತರ ಮತ್ತು ನಿವೇಶನದ ಗಾತ್ರಕ್ಕೆ ತಕ್ಕಂತೆ ನಿರ್ಧರಿಸಲಾಗುತ್ತದೆ. ಸ್ಟಿಲ್ಟ್ ಮಹಡಿಯನ್ನು ಹೊರತುಪಡಿಸಿ, 39.4 ಅಡಿ ಎತ್ತರದ ಕಟ್ಟಡಗಳು ಹೊಸ ಸೆಟ್‌ಬ್ಯಾಕ್ ಮಾನದಂಡಗಳಿಗೆ ಅನ್ವಯವಾಗುತ್ತದೆ. 1,614 ಚದರ ಅಡಿವರೆಗಿನ ನಿವೇಶನಗಳಿಗೆ ಮತ್ತು 49 ಅಡಿ ಎತ್ತರದ ಕಟ್ಟಡಗಳಿಗೆ ಇದೇ ಹೊಸ ನಿಯಮಗಳು ಅನ್ವಯವಾಗುತ್ತದೆ.
ಆದರೆ, 43,055.6 ಚದರ ಅಡಿಗಿಂತ ದೊಡ್ಡ ನಿವೇಶನಗಳು ಎಲ್ಲಾ ಕಡೆಗಳಲ್ಲಿ ಕನಿಷ್ಠ 5 ಮೀಟರ್ (16.4 ಅಡಿ) ಸೆಟ್‌ಬ್ಯಾಕ್ ನಿಯಮವನ್ನು ಕಾಯ್ದುಕೊಳ್ಳಬೇಕು ಎಂದು ಹಿರಿಯ ನಗರ ಯೋಜನೆ ಅಧಿಕಾರಿ ತಿಳಿಸಿದರು. ಆದರೆ ಸಣ್ಣ ನಿವೇಶನ ಮಾಲೀಕರು ಇನ್ನಷ್ಟು ಪ್ರಯೋಜನ ಪಡೆಯಲಿದ್ದಾರೆ, ಏಕೆಂದರೆ 1,614.5 ಚದರ ಅಡಿವರೆಗಿನ ನಿವೇಶನಗಳಿಗೆ ಗರಿಷ್ಠ ಅನುಮತಿಸಲಾದ ಎತ್ತರವು ಸ್ಟಿಲ್ಟ್ ಮಹಡಿಯನ್ನು ಹೊರತುಪಡಿಸಿ 39.4 ಅಡಿ ಎಂದು ಕರಡು ಸ್ಪಷ್ಟಪಡಿಸಿದೆ.
8,072.9 ಚದರ ಅಡಿವರೆಗಿನ ನಿವೇಶನಗಳಿಗೆ ಸೆಟ್‌ಬ್ಯಾಕ್ ಪ್ರದೇಶಗಳಲ್ಲಿ ತೆರೆದ ಮೆಟ್ಟಿಲುಗಳನ್ನು ಈಗ ನಿರ್ಮಿಸಬಹುದು. ಎಲ್ಲಾ ಕಟ್ಟಡಗಳು ಬೆಳಕು, ಗಾಳಿ ಮತ್ತು ಅಗ್ನಿ ಸುರಕ್ಷತೆಗಾಗಿ ರಾಷ್ಟ್ರೀಯ ಕಟ್ಟಡ ಸಂಹಿತೆ (NBC) 2016 ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನಲಾಗಿದೆಎ. ನೆಲಮಾಳಿಗೆಯ ನಿಯಮಾವಳಿಗಳಲ್ಲೂ ಭಾರೀ ಬದಲಾವಣೆಗಳನ್ನು ತರಲಾಗಿದ್ದು, ನೆಲಮಾಳಿಗೆಗಳಿಗೆ ಕನಿಷ್ಠ ಸೆಟ್‌ಬ್ಯಾಕ್ ಈಗ ಕಟ್ಟಡದ ಸೆಟ್‌ಬ್ಯಾಕ್ ಅಥವಾ 2 ಮೀಟರ್ (6.5 ಅಡಿ). ಅಂದರೆ ಇವುಗಳಲ್ಲಿ ಯಾವುದು ಕಡಿಮೆಯೋ ಅದು ಇರುತ್ತದೆ.
ನೀವೇ ಜವಾಬ್ದಾರರು!
ಅಷ್ಟೇ ಅಲ್ಲದೇ, ಕಟ್ಟಡ ನಿರ್ಮಾಣ ಮಾಡುವ ಮುನ್ನ, ಜಾಗ ಅಗೆಯುವ ಸಮಯದಲ್ಲಿ ಪಕ್ಕದ ಕಟ್ಟಡಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಯಾವುದೇ ಹಾನಿಗೂ ಆಸ್ತಿ ಮಾಲೀಕರು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಮತ್ತು ಪರಿಹಾರ ಕೂಡಾ ನೀಡಬೇಕು. ಪ್ರವಾಹ ಪೀಡಿತ ಅಥವಾ ತಗ್ಗು ಪ್ರದೇಶಗಳಲ್ಲಿನ ನೆಲಮಾಳಿಗೆಗಳ ನಿರ್ಮಾಣ ನಿಷೇಧ.
ಮಳೆನೀರು ಹೋಗಲು ಸೆಟ್‌ಬ್ಯಾಕ್ ಪ್ರದೇಶಗಳನ್ನು ಸಾಧ್ಯವಾಗುವಂತೆ ಮಾಡಬೇಕು ಎಂದು ಕರಡು ಕಡ್ಡಾಯಗೊಳಿಸುತ್ತದೆ.


Click it and Unblock the Notifications