ಬೆಂಗಳೂರು: ಹೊಸ ವರ್ಷಾಚಣೆಗೆ (New Year Celebration) ಬೆಂಗಳೂರು ಸೇರಿ ದೇಶದ ಹಲವು ನಗರಗಳು ಸಜ್ಜಾಗಿ ನಿಂತಿದೆ. 2026ರ ಆಗಮನಕ್ಕೆ ಈಗಾಗಲೇ ದಿನಗಣನೆ ಶುರುವಾಗಿದೆ. ಈ ಮಧ್ಯೆ ಪೊಲೀಸರು ಕೂಡಾ ಹೊಸ ವರ್ಷಾಚಣೆಗೆ ಕಟ್ಟೆಚ್ಚರ ವಹಿಸಿದ್ದಾರೆ. ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಿದ್ಧವಾಗುತ್ತಿದ್ದಂತೆ, ಪೊಲೀಸರು ಕೂಡಾ ನಿಯಂತ್ರಣಕ್ಕೆ ಸಜ್ಜಾಗಿದ್ದಾರೆ. ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶುಕ್ರವಾರ ಹೊಸ ವರ್ಷದ ಆಚರಣೆಗೆ ಕಟ್ಟುನಿಟ್ಟಿನ ಕ್ರಮ ಹೊರಡಿಸಿದ್ದಾರೆ. ನಗರದಾದ್ಯಂತ ಎಲ್ಲಾ ಬಾರ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು (Bar, Restaurant) ರಾತ್ರಿ 1 ಗಂಟೆಯೊಳಗೆ ಮುಚ್ಚಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಟ್ಟು 30 ಸುರಕ್ಷತಾ ಮತ್ತು ನಿಯಂತ್ರಣ ಮಾರ್ಗಸೂಚಿಗಳನ್ನು ಸಹ ಪೊಲೀಸರು ಹೊರಡಿಸಿದ್ದಾರೆ.

ಸೆಲೆಬ್ರೇಷನ್‌ಗೆ ಬಿತ್ತು ಬ್ರೇಕ್!
ಬಾರ್, ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜನದಟ್ಟಣೆ ನಿಯಂತ್ರಣ, ಏಜ್ ಲಿಮಿಟ್ಸ್, ಸಮಯ, ಮಹಿಳೆಯರ ಸುರಕ್ಷತೆ, ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಸೇರಿ ಒಟ್ಟು 30 ಮಾರ್ಗಸೂಚಿಗಳು ನೀಡಲಾಗಿದೆ ಎಂದು ಹೇಳಿದರು. ಈ ನಿರ್ದೇಶನಗಳ ಪ್ರಮುಖ ಉದ್ದೇಶವೇ ಆಚರಣೆಗಳ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಕಾಪಾಡುವುದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಟಾಕಿ ನಿಷೇಧ
ಅಲ್ಲದೆ, ಸರಿಯಾದ ಆಗಮನ ಮತ್ತು ನಿರ್ಗಮನ ವ್ಯವಸ್ಥೆಗಳು, ಅಗ್ನಿ ಸುರಕ್ಷತಾ ಕ್ರಮಗಳು, ಪಾರ್ಕಿಂಗ್ ಸೌಲಭ್ಯಗಳು, ಹಾಗೂ ತುರ್ತು ಸಂಪರ್ಕ ವಿವರಗಳ ಬಗ್ಗೆಯೂ ಸೂಚನೆಗಳನ್ನು ನೀಡಲಾಗಿದೆ. ರೇವ್ ಪಾರ್ಟಿಗಳು ಅಥವಾ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ. ಇನ್ನು ಪಾರ್ಟಿ, ಸೆಲೆಬ್ರೇಷನ್ ಸ್ಥಳಗಳಲ್ಲಿ ಪಟಾಕಿ ಮತ್ತು ಶಸ್ತ್ರಾಸ್ತ್ರಗಳ ಬಳಕೆಯನ್ನು ಅನುಮತಿಸಲಾಗುವುದಿಲ್ಲ. ಅಲ್ಲದೆ, ಕಾರ್ಯಕ್ರಮದ ಪ್ಲಾನ್ ಬಗ್ಗೆ ಪೊಲೀಸರಿಗೆ ಮುಂಚಿತವಾಗಿಯೇ ತಿಳಿಸಬೇಕು ಎಂದು ಆಯುಕ್ತರು ಹೇಳಿದರು.
1 ಗಂಟೆಗೆ ಎಲ್ಲಾ ಬಂದ್.. ಬಂದ್..
ಇನ್ನು ಸಭೆ ವೇಳೆ ಮಾಲೀಕರು ತಮ್ಮ ಕ್ಲಬ್, ರೆಸ್ಟೋರೆಂಟ್‌ಗಳನ್ನು ಕನಿಷ್ಠ ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ತೆರೆದಿಡಲು ಅನುಮತಿ ನೀಡುವಂತೆ ಮನವಿ ಮಾಡಿದರು. ಆದರೆ, ರಾತ್ರಿ 1 ಗಂಟೆಯ ನಂತರ ಯಾವುದೇ ಸೆಲೆಬ್ರೇಷನ್‌ಗಳಿಗೆ ಅನುಮತಿ ಇಲ್ಲ ಎಂದು ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಶಾಂತಿಯುತವಾಗಿ ಹೊಸ ವರ್ಷವನ್ನು ಆಚರಿಸುವಂತೆ, ಪೊಲೀಸರೊಂದಿಗೆ ಸಹಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪತ್ರಿಕಾ ಪ್ರಕಟಣೆಯ ಪ್ರಕಾರ, ಅಗ್ನಿ ಅವಘಡಗಳು ಅಥವಾ ಕಾಲ್ತುಳಿತಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಜನಸಂದಣಿ ತಪ್ಪಿಸುವ ಉದ್ದೇಶದಿಂದ ಆಗಮನ, ನಿರ್ಗಮನ ದ್ವಾರಗಳು, ಪಾರ್ಕಿಂಗ್ ಪ್ರದೇಶಗಳನ್ನು ಸರಿಯಾಗಿ ನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಅಲ್ಲದೇ ಮಹಿಳೆಯರು ಹೆಚ್ಚಿರುವ ಸ್ಥಳಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಯಾವುದೇ ಉಲ್ಲಂಘನೆಗಳಾದಲ್ಲಿ, ಆಯೋಜಕರು ಹಾಗೂ ಸ್ಥಳದ ಮಾಲೀಕರು ಅಥವಾ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.


Click it and Unblock the Notifications