ಇಂದು ಮಕ್ಕಳ ದಿನಾಚರಣೆ. ಪುಟಾಣಿಗಳಿಗೂ ಇಂದು ಹಣಕಾಸಿನ ವ್ಯವಹಾರ ಬಗ್ಗೆ ಅಲ್ಪ ಮಟ್ಟಿನ ಜ್ಞಾನ ಅವಶ್ಯಕತೆ ಇದೆ.ಮಕ್ಕಳಲ್ಲಿ ಹಣಕಾಸಿನ ಅರಿವು ಮೂಡಿಸುವುದು ಅವರ ಭವಿಷ್ಯದ ಆರ್ಥಿಕ ಸ್ವಾತಂತ್ರ್ಯಕ್ಕೆ ಅತ್ಯಂತ ಮುಖ್ಯವಾದ ಹೆಜ್ಜೆ. ಇದರಿಂದ ಅವರು ಹಣವನ್ನು ಹೇಗೆ ಗಳಿಸುವುದು, ಉಳಿಸುವುದು ಮತ್ತು ಬುದ್ಧಿವಂತಿಕೆಯಿಂದ ಹೇಗೆ ಖರ್ಚು ಮಾಡುವುದನ್ನು ಎಂಬುದನ್ನು ಕಲಿಯುತ್ತಾರೆ.
ನಮ್ಮ ದೇಶದ ಅರ್ಥ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಹಣಕಾಸಿನ ನಿರ್ವಹಣೆ ಬಗ್ಗೆ ಪುಟಾಣಿ ಕೇಳಿದ ಪ್ರಶ್ನೆಯೊಂದಕ್ಕೆ ಮನಸೋತಿದ್ದಾರೆ. ಇಂದಿನ ಮಕ್ಕಳಲ್ಲಿ ಹಣಕಾಸಿನ ಬಗ್ಗೆ ಇರುವ ಕುತೂಹಲಕ್ಕೆ ಅಷ್ಟೇ ಪ್ರೀತಿಯಿಂದ ಉತ್ತರಿಸಿದ ವಿತ್ತ ಸಚಿವೆ ಬಾಲಕನ ಬೆನ್ನು ತಟ್ಟಿ ಹುರಿದುಂಬಿಸಿದರು. ಉಳಿತಾಯದ ಭಾವನೆ ಜೊತೆಗೆ ಹಣವನ್ನು ಹೇಗೆ ಬಳಸಬೇಕೆಂಬ ಜವಾಬ್ದಾರಿಯ ಕಿವಿಮಾತು ಹೇಳಿದರು.

ಇಂತಹ ಸ್ವಾರಸ್ಯಕರ ಘಟನೆ ನಡೆದಿರುವುದು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ. ಮಕ್ಕಳ ದಿನಾಚರಣೆಯ ಮುನ್ನ ದಿನವಾದ ನ.13 ರಂದು ಕೇಂದ್ರ ವಿತ್ತ ಸಚಿವೆ ಟಿ.ವಿ.ರಮಣಪೈ ಸಭಾಂಗಣದಲ್ಲಿ ಸಿಟಿಜನ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾದ ಅನೌಪಚಾರಿಕ ಸಂವಾದ ಸಮಾರಂಭದಲ್ಲಿ ಮಾತನಾಡಿದರು. ಅನೇಕ ನಾಗರೀಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ವಿಚಾರಗಳನ್ನು ಹಂಚಿಕೊಂಡರು.
ಇದೇ ವೇಳೆ ,ಐದನೇ ತರಗತಿ ವಿದ್ಯಾರ್ಥಿಯೊಬ್ಬ ಹಣಕಾಸಿನ ವಿಚಾರದಲ್ಲಿ ಮಕ್ಕಳು ಕಲಿಯಬೇಕಾದ ಪಾಠ ಏನು ಎಂದು ಪ್ರಶ್ನೆ ಮಾಡುವ ಮೂಲಕ ಹಣಕಾಸು ಸಚಿವರ ಹಾಗೂ ನೆರೆದವರ ಗಮನ ಸೆಳೆದಿದ್ದಾನೆ. ಪುಟಾಣಿ ಬಾಲಕನ ಪ್ರಶ್ನೆ ಕೇಳಿದ ಸಚಿವೆ ನಿರ್ಮಲಾ, ಆತನನ್ನು ವೇದಿಕೆಗೆ ಕರೆಸಿಕೊಂಡು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗಾ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರಿಷ್ಯಂತ್ ಪ್ರಶ್ನೆಯನ್ನು ವೇದಿಕೆಯಲ್ಲಿ ಮತ್ತೊಮ್ಮೆ ಪ್ರಶ್ನೆಯನ್ನು ಮರು ಕೇಳುವಂತೆ ಹೇಳಿದ ಸಚಿವರು ನಗುತ್ತಲೇ ಉತ್ತರಿಸಿ, ಹೆತ್ತವರು ಬ್ಯಾಂಕ್‌ನಲ್ಲಿ ಇದ್ದಾರೆಯೇ.. ತಾಯಿ ಖಜಾನೆ ಇಲಾಖೆಯಲ್ಲಿ ದುಡಿಯುತ್ತಿದ್ದಾರಾ ಎಂದು ಪ್ರಶ್ನಿಸಿ ಶಹಬ್ಬಾಸ್ ಎಂದು ಶ್ಲಾಘಿಸಿ " ನಾನು ಐದನೇ ತರಗತಿಯಲ್ಲಿ ಇರುವಾಗ ಈ ರೀತಿಯ ಯೋಚನೆ ನನಗೆ ಬಂದೇ ಇಲ್ಲ ಎಂದು ಹೇಳಿದರು.
ಮಕ್ಕಳಲ್ಲಿ ಹಣಕಾಸಿನ ಅರಿವು ಇರಲೇ ಬೇಕು. ಎಳವೆಯಲ್ಲೇ ಹಣಕಾಸಿನ ಕುರಿತು ಶಿಕ್ಷಣ ಸಿಕ್ಕರೆ, ಉಳಿತಾಯದ ಬಗ್ಗೆ ಕಾಳಜಿ ಮೂಡುತ್ತದೆ ಎಂದು ಹೇಳಿ ಸಿಂಡಿಕೇಟ್ ಬ್ಯಾಂಕಿನ ಧ್ಯೇಯ ವಾಕ್ಯವನ್ನು ನೆನಪಿಸಿದರು. ಮಕ್ಕಳಲ್ಲಿ ಉಳಿತಾಯದ ಭಾವನೆ ಜೊತೆಗೆ ಹಣವನ್ನು ಹೇಗೆ ಬಳಸಬೇಕೆಂಬ ಜವಾಬ್ದಾರಿಯೂ ಬರಬೇಕಿದೆ ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ ಸಚಿವೆ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೂ ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡಿಲ್ಲ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿರುವ ಆರೋಪ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಕೇರಳ- ಮಣಿಪುರಕ್ಕೆ ಕಡಿಮೆ ಅನುದಾನ ಹಂಚಿಕೆ ಮಾಡಿರುವ ಕುರಿತು ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಅಂತಹ ಯಾವ ತಾರತಮ್ಯವನ್ನೂ ಮಾಡಿಲ್ಲ. ಬಿಹಾರದಲ್ಲಿ ಕೋಸಿ ನದಿಯಲ್ಲಿ ಉಂಟಾದ ಪ್ರವಾಹ ಸಮಸ್ಯೆಯಿಂದ ಜನ- ಜೀವನ ಅಸ್ತವ್ಯಸ್ತ ಉಂಟಾಗಿದ್ದು, ಈ ಕಾರಣಕ್ಕೆ ಪರಿಶೀಲಿಸಿ ಚರ್ಚಿಸಿ, ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಹಾಗಂತ ಇತರ ರಾಜ್ಯಗಳನ್ನು ಕಡೆಗಣನೆ ಮಾಡಿಲ್ಲ. ಆದರೆ ದುರಾದೃಷ್ಟವಶಾತ್ ಈ ವಿಚಾರದಲ್ಲಿ ಕರ್ನಾಟಕದಂತೆ ಕೇರಳವೂ ರಾಜಕೀಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದೆ ಎಂದರು.


Click it and Unblock the Notifications