ನವದೆಹಲಿ,ಸೆಪ್ಟೆಂಬರ್ 23: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ವಿರೋಧ ಪಕ್ಷಗಳು ಹಾಗೂ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಅಧಿಕ ಕೆಲಸದ ಒತ್ತಡದಿಂದ ಇವೈ ಇಂಡಿಯಾ ಉದ್ಯೋಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನೀಡಿರುವ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಇವೈ ಉದ್ಯೋಗಿ, ಲೆಕ್ಕಪರಿಶೋಧಕಿ ಅನ್ನಾ ಸೆಬಾಸ್ಟಿಯಲ್ ಪೆರಾಯಿಲ್ ಒತ್ತಡದ ಕಾರಣಕ್ಕೆ ಸಾವಿಗೀಡಾಗಿದ್ದರು. ಈ ಬಗ್ಗೆ ಅವರ ತಾಯಿ ಕಂಪನಿ ಸಿಇಒಗೆ ಪತ್ರ ಬರೆಯುವ ಮೂಲಕ ಇದು ದೇಶದಲ್ಲೆಡೆ ಭಾರೀ ಸುದ್ದಿಯಾಗಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಉದ್ಯೋಗಿಯ ಸಾವಿಗೆ ಕೆಲಸದ ಒತ್ತಡವನ್ನು ನಿಭಾಯಿಸಲು ಅವರಿಗಿದ್ದ ಅಸಮರ್ಥತೆ ಕಾರಣ ಎಂದು ಸೀತಾರಾಮನ್ ಹೇಳಿದ್ದರು.

ಈ ಘಟನೆ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ವೈದ್ಯಕೀಯ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಈ ಘಟನೆಯ ಬಗ್ಗೆ ಉಲ್ಲೇಖಿಸದೇ ಮಾತನಾಡಿದ್ದು, ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲದೆ ಆಧ್ಯಾತ್ಮಿಕತೆ ಮತ್ತು ಆಂತರಿಕ ಶಕ್ತಿಯ ಮೂಲಕ ಒತ್ತಡ ನಿರ್ವಹಣೆಯನ್ನು ಕಲಿಯಬೇಕು. ದೇವರಲ್ಲಿ ನಂಬಿಕೆ ಇಡಿ, ದೇವರ ಅನುಗ್ರಹ ಬೇಕು, ದೇವರನ್ನು ಹುಡುಕಿ, ಒಳ್ಳೆಯ ಶಿಸ್ತನ್ನು ಕಲಿಯಿರಿ, ಇದರಿಂದ ಮಾತ್ರ ನಿಮ್ಮ ಆತ್ಮ ಶಕ್ತಿ (ಆಂತರಿಕ ಶಕ್ತಿ) ಬೆಳೆಯುತ್ತದೆ ಎಂದು ಹೇಳಿದ್ದರು.
"ನಾನು ಒಂದು ಕಂಪನಿ ಹೆಸರಿಸುವುದಿಲ್ಲ, ಸಿಎ ಚೆನ್ನಾಗಿ ಅಧ್ಯಯನ ಮಾಡಿದ ಯುವತಿಗೆ ಕೆಲಸ ಒತ್ತಡ ತಡೆಯಲಾಗದೇ ಅಸುನೀಗಿದ್ದಾಳೆ.. ನಮ್ಮ ಮಕ್ಕಳು ಡಿಗ್ರಿ ಪಡೆದು ಹೊರಬರುತ್ತಾರೆ. ಆದರೆ ಇದನ್ನು ನಿಭಾಯಿಸಲು ಕಲಿಯುವುದಿಲ್ಲ. ನೀವು ಯಾವುದೇ ಅಧ್ಯಯನ ಮಾಡಿ, ಯಾವುದೇ ಕೆಲಸ ಮಾಡಿ, ಒತ್ತಡವನ್ನು ನಿಭಾಯಿಸಲು ನಿಮಗೆ ಆಂತರಿಕ ಶಕ್ತಿಯನ್ನು ಬೇಕು. ಇದನ್ನು ದೈವತ್ವದ ಮೂಲಕ ಮಾತ್ರ ಸಾಧಿಸಬಹುದು" ಎಂದು ಹೇಳಿದ್ದರು.
ವಿತ್ತ ಸಚಿವೆಯವರ ಈ ಹೇಳಿಕೆ ವಿರುದ್ದ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವೆಯ ಈ ಪ್ರತಿಕ್ರಿಯೆಯಯು ವಿಲಕ್ಷಣ ಮತ್ತು ಸಂವೇದನಾಶೀಲವಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ಹೇಳಿಕೆಯನ್ನು ಖಂಡಿಸಿದ್ದು, "ಹಣಕಾಸು ಸಚಿವರು ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರ ನೋವನ್ನು ಮಾತ್ರ ನೋಡುತ್ತಾರೆ, ಶ್ರಮಶೀಲ ಮತ್ತು ದುಡಿಯುವ ಯುವ ಪೀಳಿಗೆಯ ನೋವನ್ನಲ್ಲ... ಈ ಹೇಳಿಕೆ ತುಂಬಾ ಕ್ರೂರವಾಗಿದೆ" ಎಂದು ಹೇಳಿದ್ದಾರೆ.
ಸಿಪಿಐ ಸಂಸದ ಪಿ ಸಂತೋಷ್ ಕುಮಾರ್ , " ಹಣಕಾಸು ಸಚಿವರ ಹೇಳಿಕೆ ವಿಲಕ್ಷಣ ಮತ್ತು ಸಂವೇದನಾರಹಿತ" ಎಂದು ಹೇಳಿದ್ದು, ಯುವ ಉದ್ಯೋಗಿಗಳು ದೇವರ ಮೇಲೆ ಅವಲಂಬಿತರಾಗಲು ಸಲಹೆ ನೀಡುವ ಬದಲು ಅವರು ಎದುರಿಸುತ್ತಿರುವ "ಅಮಾನವೀಯ ಕೆಲಸದ ಪರಿಸ್ಥಿತಿಗಳನ್ನು" ಪರಿಹರಿಸುವತ್ತ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಲೆಕ್ಕಪರಿಶೋಧಕಿ ಅನ್ನಾ ಸೆಬಾಸ್ಟಿಯಲ್ ಪೆರಾಯಿಲ್ ಸಾವಿನ ಬಳಿಕ ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ, EY ಯ ಕೆಲಸದ ವಾತಾವರಣವನ್ನು ತನಿಖೆ ಮಾಡವುದಾಗಿ ಸರ್ಕಾರವು ಭರವಸೆ ನೀಡಿದೆ. ಆದರೆ ಹಲವರು ಯುವ ವೃತ್ತಿಪರರ ಮೇಲೆ ಇರುವ ಅತಿಯಾದ ಕೆಲಸದ ಒತ್ತಡದಿಂದ ರಕ್ಷಿಸುವ ರಚನಾತ್ಮಕ ಬದಲಾವಣೆಗಳನ್ನು ತರುವಂತೆ ಒತ್ತಾಯಿಸುತ್ತಿದ್ದಾರೆ.


Click it and Unblock the Notifications