ಒಂದು ಕಾಲದಲ್ಲಿ ಸಾಧನೆ ಅಂದ್ರೆ ಪುರುಷರಿಗೆ ಮಾತ್ರ ಸೀಮಿತವಾಗಿದೆ ಎಂಬಂತಿತ್ತು. ಆದರೆ ಕಾಲ ಕಳೆದಂತೆ ಪುರುಷರ ಸ್ಥಾನವನ್ನು ಮಹಿಳೆಯರು ತುಂಬಿ, ನಾವೇನು ಕಮ್ಮಿ ಇಲ್ಲ ಎಂಬಂತೆ ಬದುಕ್ತಿದ್ದಾರೆ. ಇಂದು ಸಾಧನೆ ಮಾಡಿ ಹೆಸರು ಗಳಿಸಿರುವ ಅದೆಷ್ಟೋ ಮಹಿಳೆಯರು, ಬಡತನ ಬೇಗೆಯಲ್ಲಿ ಬೆಂದು ಬಂದವರಾಗಿದ್ದಾರೆ. ತೀರ ತಳಮಟ್ಟದಿಂದ ಬಂದು ಹೆಸರು, ಆಸ್ತಿ, ಅಧಿಕಾರ ಗಳಿಸಿದ ಮಹಿಳೆಯರಿದ್ದಾರೆ. ಹಾಗೇನೆ ರಾಜಕೀಯ ವಲಯದಲ್ಲೂ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು, ಕೇಂದ್ರದ ಕ್ಯಾಬಿನೆಟ್‌ನಲ್ಲೂ ನಾರಿಶಕ್ತಿ ಇದೆ. ಹಾಗೇನೆ ನಮ್ಮ ದೇಶದ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಇಡೀ ದೇಶದ ಆರ್ಥಿಕತೆಯನ್ನು ಹೊತ್ತಿರುವ ಮಹಿಳೆಯಂತೆ ಪ್ರತಿ ಬಿಂಬಿತರಾಗಿದ್ದಾರೆ. ಇಂದು ಅವರ ಬಳಿ ಹಣ, ಆಸ್ತಿ, ಅಧಿಕಾರ ಎಲ್ಲವೂ ಇದೆ. ಆದರೆ ಅವರ ಹಿನ್ನೆಲೆ, ಅವರು ಪಟ್ಟಂತಹ ಕಷ್ಟ, ಏನೂ ಇಲ್ಲದ ಸಮಯದಲ್ಲಿ ವಿದ್ಯೆ ಕಲಿತು ಮಾಡಿದ ಸಾಧನೆ ಇಂದು ಅವರನ್ನು ತಂದು ಇಲ್ಲಿ ನಿಲ್ಲಿಸಿದೆ.

ಇಂದು ನಿರ್ಮಲಾ ಸೀತಾರಾಮನ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಸ್ತುತ ಭಾರತದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ ವಲಯದಲ್ಲಿ ತಮ್ಮದೇ ಆದ ಮಹತ್ವದ ಪಾತ್ರ ಹೊಂದಿದ್ದಾರೆ. ಇಂದು ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಕೂಡ, ಸಾಮಾನ್ಯರಂತೆ ಬದುಕಿದವರು.
ನಿರ್ಮಲಾ ಸೀತಾರಾಮನ್ ಅವರ ಬದುಕಿನ ಹಾದಿ:
1959 ಆಗಸ್ಟ್ 18ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದರು. ಇವರ ತಂದೆ ನಾರಾಯಣನ್ ಸೀತಾರಾಮನ್..ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ತಮಿಳು ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಿಂದ ಇವರಿಗೆ ಶಿಕ್ಷಣದ ಮೇಲೆ ಅದೇನೋ ಪ್ರೀತಿ. ಅಲ್ಲದೇ ಇವರ ಶಿಕ್ಷಣದ ಬೆಳವಣಿಗೆಯಲ್ಲಿ ಕುಟುಂಬದ ಸಂಸ್ಕೃತಿಯ ಪ್ರಭಾವ ದೊಡ್ಡದಾಗಿತ್ತು. ಶಾಲಾ ಶಿಕ್ಷಣವನ್ನು ಮದ್ರಾಸ್ ಮತ್ತು ತಿರುಚಿರಾಪಳ್ಳಿಯಲ್ಲಿ ಪೂರ್ಣಗೊಳಿಸಿದ ಇವರು, ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಮಾಡಿದರು. ಬಳಿಕ 1984 ರಲ್ಲಿ, ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಎ ಮಾಡಿ, ಅರ್ಥಶಾಸ್ತ್ರದಲ್ಲಿ Mphil ಪೂರ್ಣಗೊಳಿಸಲು ದೆಹಲಿಗೆ ತೆರಳಿದರು. ಹಾಗೆಯೇ ಅವರು ಅರ್ಥಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡಲು ಹೋದರು, ಆದರೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಅವರ ವೃತ್ತಿಜೀವನದ ಆರಂಭ ಲಂಡನ್‌ನ ಪ್ರೈಸ್ವಾಟರ್‌ಹೌಸ್ ಕೂಪರ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಶುರುವಾಯಿತು. ನಂತರ ಅವರು ಭಾರತಕ್ಕೆ ಮರಳಿ, ಹೈದರಾಬಾದ್‌ನ ಪಬ್ಲಿಕ್ ಪಾಲಿಸಿ ಸ್ಟಡೀಸ್ ಸೆಂಟರ್‌ನ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ವಿದೇಶಿ ವ್ಯಾಪಾರ ಮತ್ತು ಆರ್ಥಿಕ ನೀತಿ ರಚನೆಗೆ ಸಂಬಂಧಿಸಿದಂತೆ ಹಲವು ವರ್ಷಗಳ ಅನುಭವವನ್ನು ಅವರು ಸಂಪಾದಿಸಿದರು.
ರಾಜಕೀಯದಲ್ಲಿ ನಿರ್ಮಲಾ ಸೀತಾರಾಮನ್:
ಕೊನೆಗೆ ರಾಜಕೀಯದ ಬಗ್ಗೆ ಆಸಕ್ತಿ ಹೊತ್ತು 2008ರಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರಿದರು. ಅದಾದ ಬಳಿಕ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಪಕ್ಷದ ಪ್ರವಕ್ತೆಯಾಗಿ ಮತ್ತು ನಂತರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವೆಯಾಗಿಯೂ ಕೆಲಸ ಮಾಡಿದರು. ಜೂನ್ 2014ರಲ್ಲಿ ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು, ಮೇ 2016ರಲ್ಲಿ ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಅವರ ಪ್ರಭಾವಕಾರಿ ನಾಯಕತ್ವ ಮತ್ತು ಆಡಳಿತ ಕೌಶಲ್ಯದಿಂದ 2017ರಲ್ಲಿ ಭಾರತದ ರಕ್ಷಣಾ ಸಚಿವೆಯಾಗಿ ಸೇವೆ ಸಲ್ಲಿಸಿದರು. ನಂತರ 2019ರಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಂಪೂರ್ಣ ಸಚಿವೆಯಾಗಿದರು. ಅಂದಿನಿಂದ ಇಂದಿನವರೆಗೂ ಭಾರತದ ಆರ್ಥಿಕತೆಯನ್ನು ಹೊತ್ತು ನಡೆಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಎಷ್ಟು..?
2022ರ ರಾಜ್ಯಸಭಾ ಸದಸ್ಯರ ಆಸ್ತಿ ಘೋಷಣೆಯ ಪ್ರಕಾರ, ನಿರ್ಮಲಾ ಸೀತಾರಾಮನ್ ಅವರ ಒಟ್ಟು ಆಸ್ತಿ ₹2.53 ಕೋಟಿಯಾಗಿದೆ. ಮತ್ತು ಬಾಕಿ ಸಾಲ ₹26.91 ಲಕ್ಷ ಎನ್ನಲಾಗಿದೆ. ಹಾಗೂ ಅವರ ಮುಖ್ಯ ಆಸ್ತಿ ಹೈದರಾಬಾದ್‌ನ ಸಮೀಪದಲ್ಲಿರುವ ಒಂದು ವಾಸಸ್ಥಳ, ಇದು ₹1.7 ಕೋಟಿ ಬೆಲೆ ಬಾಳುವಂತದ್ದಾಗಿದೆ. ₹14.49 ಲಕ್ಷ ಮೌಲ್ಯದ 315 ಗ್ರಾಂ ಚಿನ್ನವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಅವರ ಹೂಡಿಕೆಗಳು:
ಬ್ಯಾಂಕ್‌ಗಳಲ್ಲಿ ₹35.52 ಲಕ್ಷ ಠೇವಣಿ ಮಾಡಲಾಗಿದೆ. ಮ್ಯೂಚುಯಲ್ ಫಂಡ್‌ನಲ್ಲಿ ₹5.80 ಲಕ್ಷ ಹೂಡಿಕೆ ಮಾಡಲಾಗಿದೆ. ಗೃಹಸಾಲ ₹5.44 ಲಕ್ಷ ಕಡಿತವಾಗಲಿದೆ. ₹18.93 ಲಕ್ಷ ಮಾರ್ಟಿಗೇಜ್ ಲೋನ್ ಇದೆ ಎನ್ನಲಾಗಿದೆ. ಸಾಮಾನ್ಯರಂತೆಯೇ ಜೀವನ ಸಾಗಿಸಿಕೊಂಡು ಬಂದ, ಇಂದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬದುಕಿನ ಹಿನ್ನೆಲೆ ಹೀಗಿದೆ. ಅದರಲ್ಲೂ ಹಣಕಾಸು ವಲಯದಲ್ಲಿ ಮುಂಚೂಣಿಯಲ್ಲಿರುವ ಓರ್ವ ನಾರಿಮಣಿಯಾಗಿದ್ದಾರೆ. ಸಂಪುಟದಲ್ಲಿ ದೊಡ್ಡ ಹುದ್ದೆಯನ್ನು ಹೊಂದಿರುವ ಇವರು ನಾರಿಶಕ್ತಿಯನ್ನು ಪ್ರದಿನಿಧಿಸುತ್ತಾರೆ.


Click it and Unblock the Notifications