ಬೆಂಗಳೂರು, ಆಗಸ್ಟ್ 28: "ಮುಂದಿನ ತಿಂಗಳು ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಚರ್ಚಿಸಲಿದೆ" ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ತನ್ನ 54 ನೇ ಸಭೆಗಾಗಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ರಂದು ಸಭೆ ಸೇರಲಿದೆ. ದರ ತರ್ಕಬದ್ಧಗೊಳಿಸುವಿಕೆ ಮತ್ತು ಜಿಎಸ್ಟಿ ಪರಿಹಾರ ಸೆಸ್ ಸಂಭವನೀಯ ವಿಸ್ತರಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದೆ" ಎಂದು ಹೇಳಿದ್ದಾರೆ.

ಐಷಾರಾಮಿ ಮತ್ತುಅಹಿತಕರ/ಹಾನಿಕಾರಕ ಸರಕುಗಳಮೇಲಿನ ಪರಿಹಾರ ಸೆಸ್ ಬಗ್ಗೆಯೂ ಚರ್ಚಿಸಲಾಗುವುದು. ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ನೇತೃತ್ವದಲ್ಲಿ ತೆರಿಗೆ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಸಚಿವರ ತಂಡ ಕಳೆದ ವಾರ ಸಭೆ ನಡೆಸಿದ್ದು , ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಶೇಕಡ 5, 12, 18 ಮತ್ತು 28ರ ಸ್ಲ್ಯಾಬ್ ಗಳನ್ನು ಹಾಗೇ ಉಳಿಸಿಕೊಳ್ಳುವ ಕುರಿತು ಒಮ್ಮತಕ್ಕೆ ಬಂದಿದೆ. ಸಮಿತಿಯು ಫಿಟ್‌ಮೆಂಟ್ ಕಮಿಟಿಗೆ (ತೆರಿಗೆ ಅಧಿಕಾರಿಗಳ ತಂಡ) ಕೆಲವು ವಸ್ತುಗಳ ಮೇಲಿನ ದರಗಳ ಬದಲಾವಣೆಗೆಳ ಪರಿಣಾಮಗಳನ್ನು ವಿಶ್ಲೇಷಿಸಲು ಮತ್ತು ಅವುಗಳನ್ನು ಜಿಎಸ್‌ಟಿ ಕೌನ್ಸಿಲ್‌ಗೆ ಪ್ರಸ್ತುತಪಡಿಸುವಂತೆ ತಿಳಿಸಿದೆ.
"ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯು ದರವನ್ನು ತರ್ಕಬದ್ಧಗೊಳಿಸುವ ವಿಷಯವನ್ನು ಕೈಗೆತ್ತಿಕೊಳ್ಳಲಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಅಧಿಕಾರಿಗಳ ಸಮಿತಿಯು ದರವನ್ನು ತರ್ಕಬದ್ಧಗೊಳಿಸುವ ಬಗ್ಗೆ ಪ್ರಸ್ತುತಿ ಮಾಡುತ್ತದೆ. ಆದರೆ, ಇದನ ನಂತರ ನಡೆಯುವ ಸಭೆಯಲ್ಲಿ ದರ ತರ್ಕಬದ್ಧಗೊಳಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದು ವಿತ್ತ ಸಚಿವೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಸೆ. 9 ರಂದು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಚಿವರನ್ನು ಒಳಗೊಂಡ 54 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ.
"ಯಾವುದೇ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸದೆ ಜಿಎಸ್‌ಟಿ ದರಗಳನ್ನು ಸರಳಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಆದಾಯವನ್ನು ಹೆಚ್ಚಿಸಲು ರಾಜ್ಯ ಹಣಕಾಸು ಸಚಿವರು ತಮ್ಮ ಸಹಕಾರದ ಪ್ರಯತ್ನಗಳಿಗಾಗಿ ಶ್ಲಾಘಿಸಿದ್ದು, ಮಾತ್ರವಲ್ಲದೇ ರಾಜ್ಯಗಳು ವಿನಂತಿಸಿದರೆ, ಜಿಎಸ್‌ಟಿ ಕೌನ್ಸಿಲ್ ಪ್ರಸ್ತುತ ಜಾರಿಯಲ್ಲಿರುವ ಜಿಎಸ್‌ಟಿ ಪರಿಹಾರ ಸೆಸ್ ಅನ್ನು ಜೂನ್ 2025 ರವರೆಗೆ ವಿಸ್ತರಿಸುವ ಬಗ್ಗೆ ಚರ್ಚಿಸಬಹುದು" ಎಂದು ಹೇಳಿದ್ದಾರೆ.
ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್‌ನ 53ನೇ ಸಭೆಯಲ್ಲಿ, ಕರ್ನಾಟಕವು ಪರಿಹಾರ ಸೆಸ್ ವಿಧಿಸುವ ಮುಂದುವರಿಕೆ, ಸಾಲದ ಮೊತ್ತದ ಮರುಪಾವತಿ ಮತ್ತು ಅದರ ಮುಂದಿನ ಹಾದಿಯ ಬಗ್ಗೆ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ನಿಗದಿತ ಮಾರ್ಚ್ 2026 ಕ್ಕಿಂತ ನಾಲ್ಕು ತಿಂಗಳ ಮುಂಚಿತವಾಗಿ, ನವೆಂಬರ್ 2025 ರ ವೇಳೆಗೆ ರಾಜ್ಯಗಳಿಗೆ ಜಿಎಸ್‌ಟಿ ಆದಾಯ ನಷ್ಟವನ್ನು ಸರಿದೂಗಿಸಲು 2021 ಮತ್ತು 2022 ರ ಹಣಕಾಸು ವರ್ಷದಲ್ಲಿ ತೆಗೆದುಕೊಂಡ 2.69 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಲು ಸರ್ಕಾರಕ್ಕೆ ಸಾಧ್ಯವಾಗಬಹುದು ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.
ಆದ್ದರಿಂದ, ಸೆಸ್ ಮೊತ್ತವನ್ನು ನವೆಂಬರ್ 2025 ರ ನಂತರ ಹೇಗೆ ಹಂಚಲಾಗುತ್ತದೆ ಎಂಬುದನ್ನು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಎಸ್‌ಟಿ ಜಾರಿಯ ನಂತರ ರಾಜ್ಯಗಳ ಆದಾಯ ಕೊರತೆಯನ್ನು ಉತ್ತಮಗೊಳಿಸಲು ಆರಂಭದಲ್ಲಿ 5 ವರ್ಷಗಳ ಕಾಲ ಪರಿಹಾರ ಸೆಸ್ ಅನ್ನು ತರಲಾಯಿತು. ಪರಿಹಾರ ಸೆಸ್ ಜೂನ್ 2022 ರಲ್ಲಿ ಮುಕ್ತಾಯಗೊಂಡಿದೆ, ಆದರೆ ತೆರಿಗೆಯ ಮೂಲಕ ಸಂಗ್ರಹಿಸಲಾದ ಮೊತ್ತವನ್ನು ಕೋವಿಡ್-19 ಸಮಯದಲ್ಲಿ ಕೇಂದ್ರವು ಎರವಲು ಪಡೆದ 2.69 ಲಕ್ಷ ಕೋಟಿ ರೂ.ಗಳ ಬಡ್ಡಿ ಮತ್ತು ಅಸಲು ಮರುಪಾವತಿಗೆ ಬಳಸಲಾಗುತ್ತಿದೆ.


Click it and Unblock the Notifications