ನವದೆಹಲಿ, ಏಪ್ರಿಲ್ 2: ಭಾರತವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡುವ ಅವರ ಮಹತ್ವಾಕಾಂಕ್ಷೆಯ ಭಾಗವಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೈಬ್ರಿಡ್ ವಾಹನಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.
ಈ ಮೂಲಕ ಭಾರತದಲ್ಲಿರುವ 36 ಕೋಟಿಗೂ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕುವ ಕಡೆ ಮೊದಲ ಹೆಜ್ಜೆ ಇರಿಸಿದ್ದಾರೆ.

ಭಾರತವು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವೇ? ಎಂಬ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿ ಮಾತನಾಡಿ "ನೂರು ಪ್ರತಿಶತ,"(೧೦೦%) ಖಂಡಿತಾ ಸಾಧ್ಯ. ಆದರೆ ಇದು ಸ್ವಲ್ಪ ಕಷ್ಟವಿದೆ ಹಾಗೆಂದು ಇದು ಅಸಾಧ್ಯವಲ್ಲ ಎಂಬುವುದು ನನ್ನ ದೃಷ್ಟಿ ಕೋನ' ಎಂದು ಹೇಳಿದ್ದಾರೆ.
ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ದೇಶವು ಇಂಧನ ಆಮದು ಮಾಡುವುದಕ್ಕೆ ವಿದಾಯ ಹೇಳಬಹುದು. ಭಾರತವೂ ಇಂಧನವನ್ನು ಆಮದು ಮಾಡಿಕೊಳ್ಳಲು ಸುಮಾರು 16 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇದೇ ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಿದರೆ, ಹಳ್ಳಿಗಳು ಸಮೃದ್ಧವಾಗುತ್ತವೆ ಮತ್ತು ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಗಡ್ಕರಿ ಯಾವುದೇ ಟೈಮ್‌ಲೈನ್ ನೀಡದಿದ್ದರೂ, ಗ್ರೀನ್ ಎನರ್ಜಿ ಪ್ರತಿಪಾದಕರೂ ಸಹ ಪೆಟ್ರೋಲ್ ಮತ್ತು ಡೀಸೆಲ್ ವಾಹನ ತೊಡೆದುಹಾಕುವುದನ್ನು ಕಾರ್ಯರೂಪಕ್ಕೆ ತರುವುದು ಕಷ್ಟಕರ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ಕ್ಕೆ ಮತ್ತು ಫ್ಲೆಕ್ಸ್ ಎಂಜಿನ್‌ಗಳಿಗೆ ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಈ ಬೇಡಿಕೆಯನ್ನು ಸ್ಸಚಿವಾಲಯ ಪರಿಗಣಿಸಿದೆ ಎಂದು ಗಡ್ಕರಿ ಹೇಳಿದ್ದಾರೆ. ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ದೇಶವು ಇಂಧನ ಆಮದನ್ನು ಕೊನೆಗೊಳಿಸಬಹುದು ಎಂದು ತಾವು ದೃಢವಾಗಿ ನಂಬುವುದಾಗಿ ಇದೇ ವೇಳೆ ಸಚಿವರು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ವೇಗವನ್ನು ಗಮನಿಸಿದರೆ , ಮುಂಬರುವ ಯುಗವು ಪರ್ಯಾಯ ಮತ್ತು ಜೈವಿಕ ಇಂಧನದ ವಾಹನಗಳೇ ಆಗಿರುತ್ತದೆ. ಹೀಗಾಗಿ ಬಹು ಶೀಘ್ರದಲ್ಲಿ ಈ ಕನಸು ಕೂಡಾ ನನಸಾಗುತ್ತದೆ ಎಂದು ಹೇಳಿದ್ದಾರೆ. ಬಜಾಜ್, ಟಿವಿಎಸ್ ಮತ್ತು ಹೀರೋದಂತಹ ಆಟೋ ಕಂಪನಿಗಳು ಫ್ಲೆಕ್ಸ್ ಎಂಜಿನ್‌ಗಳನ್ನು ಬಳಸಿಕೊಂಡು ಮೋಟಾರ್‌ಸೈಕಲ್‌ಗಳನ್ನು ತಯಾರಿಸಲು ಯೋಜಿಸುತ್ತಿವೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಆಟೋ ರಿಕ್ಷಾಗಳನ್ನೂ ತಯಾರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
" ಈಗ ನಾನು ಹೈಡ್ರೋಜನ್‌ನಲ್ಲಿ ಚಲಿಸುವ ಕಾರಿನಲ್ಲಿ ಸಂಚರಿಸುತ್ತಿದ್ದೇನೆ. ಮಾತ್ರವಲ್ಲದೇ ನೀವೆಲ್ಲರೂ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನೋಡುತ್ತಿದ್ದಿರಿ. ಈ ಹಿಂದೆ ಇದು ಅಸಾಧ್ಯ ಎಂದು ಹೇಳುತ್ತಿದ್ದ ಜನರು ಈಗ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿಕೊಂಡಿದ್ದ ಕಳೆದ 20 ವರ್ಷಗಾ ಹಿಂದಿನಿಂದ ನಾನು ಪ್ರತಿಪಾದಿಸುವುದನ್ನು ನಂಬಲು ಪ್ರಾರಂಭಿಸಿದ್ದಾರೆ" ಎಂದು ಸಚಿವರು ಹೇಳಿದ್ದಾರೆ.
"ಖಂಡಿತವಾಗಿಯೂ ಒಂದು ಕ್ರಾಂತಿ ನಡೆಯುತ್ತಿದೆ. ಇಂಧನ ಆಮದು ಕೊನೆಗೊಳ್ಳುತ್ತದೆ ಮತ್ತು ಈ ದೇಶವು ಸ್ವಾವಲಂಬಿ ಆತ್ಮನಿರ್ಭರ ಭಾರತವಾಗಲಿದೆ. ನಾನು ಇದನ್ನು ಬಲವಾಗಿ ನಂಬುತ್ತೇನೆ" ಎಂದು ಗಡ್ಕರಿ ಹೇಳಿದ್ದಾರೆ.


Click it and Unblock the Notifications