ಚಿನ್ನದ ಮೇಲಿನ ಹೂಡಿಕೆ (Gold Investment) ತುಂಬಾನೇ ಸುರಕ್ಷಿತ. ಆದ್ದರಿಂದ ಹೆಚ್ಚಿನವರು ಬೇರೆ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬದಲಿಗೆ, ಚಿನ್ನದ ಮೇಲೆ ಇನ್ವೆಸ್ಟ್ ಮಾಡುತ್ತಾರೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡರೂ ಚಿನ್ನ, ಕಳೆದೆರಡು ದಿನಗಳಿಂದ ಇಳಿಕೆ ಕಂಡಿದೆ. ಅದೇ ಕಾರಣದಿಂದ ಚಿನ್ನದಂಗಡಿಗಳಲ್ಲಿ ಮತ್ತೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಸಹ ಸ್ಥಿತಿಗೆ ಹೋಲಿಸಿದ್ರೆ ಭಾರತದಲ್ಲಿ (India) ಚಿನ್ನದ ಬೆಲೆಗಳು ಗಗನಕ್ಕೇರಿವೆ. ಆದ್ರೆ ಭಾರತಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಚಿನ್ನ ಮಾರಾಟ ಮಾಡುವ ಹಲವು ರಾಷ್ಟ್ರಗಳಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಧನತ್ರಯೋದಶಿ ಮತ್ತು ದೀಪಾವಳಿಯಂತಹ ಹಬ್ಬಗಳಲ್ಲಿ ಚಿನ್ನ ಖರೀದಿಸುವುದು ಭಾರತದಲ್ಲಿ ಬಹಳ ಒಳ್ಳೆಯ ದಿನ ಎಂದು ಪರಿಗಣಿಸಲಾಗಿದೆ. ಆದರೆ ಈ ವರ್ಷ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಅಂದರೆ, ಒಮ್ಮೆ ಚಿನ್ನದಂಗಡಿಗೆ ಹೋದ್ರೆ ಸಾಕು, ಕತ್ತರಿ ಬೀಳೋದು ಪಕ್ಕಾ. ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹1,23,035 ತಲುಪಿದೆ. ಹಾಗಿದ್ರೆ ಭಾರತ ಬಿಟ್ಟು ಬೇರೆಲ್ಲಿ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಎಂದು ನಿಮಗೆ ಪ್ರಶ್ನೆ ಬರಬಹುದು. ಹೌದು, ವಿಶ್ವದ ಹಲವು ಭಾಗಗಳಲ್ಲಿ ತೆರಿಗೆ ವಿನಾಯಿತಿ, ಸುಂಕ ರಹಿತ ವ್ಯಾಪಾರ ಮತ್ತು ಉತ್ತಮ ಮಾರುಕಟ್ಟೆ ಕಾರಣಗಳಿಂದ ಚಿನ್ನವು ಭಾರತಕ್ಕಿಂತ ಅಗ್ಗವಾಗಿ ಸಿಗುತ್ತದೆ.
ದುಬೈನಿಂದ ಟರ್ಕಿಯವರೆಗೆ ಅಗ್ಗದಲ್ಲಿ ಚಿನ್ನ ಮಾರಾಟ ಮಾಡುವ 7 ಸ್ಥಳಗಳಿವೆ, ಅಲ್ಲಿ ನೀವು ಚಿನ್ನ ಖರೀದಿಸಿದ್ರೆ ಸಾಕಷ್ಟು ಉಳಿತಾಯ ಮಾಡಬಹುದು.
ದುಬೈ: ದುಬೈ ಅನ್ನು 'ಚಿನ್ನದ ನಗರ' ಎಂದು ಕರೆಯುತ್ತಾರೆ. ಇಲ್ಲಿ ತೆರಿಗೆ ಮತ್ತು ಆಮದು ಸುಂಕಗಳು ಹೆಸರಿಗೆ ಮಾತ್ರವಾಗಿರುತ್ತೆ. ಅಕ್ಟೋಬರ್ 2025 ರಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹1,14,740 ಆಗಿತ್ತು, ಅಂದರೆ ಭಾರತಕ್ಕೆ ಹೋಲಿಸಿದ್ರೆ ದುಬೈನಲ್ಲಿ 8 ಸಾವಿರ ರೂಪಾಯಿ ಅಗ್ಗ ಪಡೆಯಬಹುದು. ಇನ್ನು ದುಬೈನ ಮಾರುಕಟ್ಟೆ ಚಿನ್ನದಲ್ಲಿ ದೊಡ್ಡ ಮಾರುಕಟ್ಟೆಯನ್ನ ಹೊಂದಿದೆ. ಅದೇ ಕಾರಣದಿಂದ ಅಲ್ಲಿ ಎಲ್ಲಾ ರೀತಿಯ ವಿನ್ಯಾಸಗಳನ್ನು ಗ್ರಾಹಕರು ಪಡೆಯಬಹುದು. ಅದೇ ಕಾರಣದಿಂದ ಹೆಚ್ಚಿನ ಭಾರತೀಯರು ಅಲ್ಲಿಗೆ ಹೋಗಿ ಚಿನ್ನ ಖರೀದಿಸುತ್ತಾರೆ.
ಅಮೆರಿಕ: ಅತೀ ಕಡಿಮೆಯಲ್ಲಿ ಚಿನ್ನ ಮಾರಾಟ ಮಾಡುವ ದೇಶಗಳಲ್ಲಿ ಅಮೆರಿಕ ಕೂಡಾ ಒಂದು. ಅಮೆರಿಕಾದಲ್ಲಿ 10 ಗ್ರಾಂ ಚಿನ್ನದ ಸರಾಸರಿ ಬೆಲೆ ₹1,15,360 ಇರುತ್ತದೆ. ಅಲ್ಲದೇ ಚಿನ್ನದ ಗುಣಮಟ್ಟದಲ್ಲಿಯೂ ಯಾವುದೇ ಸಮಸ್ಯೆಗಳಿಲ್ಲ. ಅದೇ ಕಾರಣದಿಂದ ಹೂಡಿಕೆದಾರರು ಮತ್ತು ಖರೀದಿ ಮಾಡುವವರು ಇಲ್ಲಿಂದ ಚಿನ್ನ ಖರೀದಿಸಲು ಇಷ್ಟಪಡುತ್ತಾರೆ.
ಸಿಂಗಾಪುರ: ಸಿಂಗಾಪುರದಲ್ಲಿ ಕೂಡಾ ಹೂಡಿಕೆ ದರ್ಜೆಯ ಚಿನ್ನಕ್ಕೆ ತೆರಿಗೆ ವಿನಾಯಿತಿ ಇದೆ. 24 ಕ್ಯಾರೆಟ್ ಚಿನ್ನ ₹1,18,880 ಕ್ಕೆ ಲಭ್ಯವಿದೆ. ಏಷ್ಯಾದ ಬಹಳಷ್ಟು ಹೂಡಿಕೆದಾರರು ಇಲ್ಲಿಗೆ ಬಂದು ತೆರಿಗೆ ಉಳಿತಾಯಕ್ಕಾಗಿ ಚಿನ್ನ ಖರೀದಿಸಲು ಬರುತ್ತಾರೆ.
ಹಾಂಗ್ ಕಾಂಗ್: ಹಾಂಗ್ ಕಾಂಗ್ ಚಿನ್ನದ ವಹಿವಾಟಿಗೆ ಸೂಕ್ತವಾಗಿದೆ. ಆಮದು ಸುಂಕವು ಇಲ್ಲಿ ಕಡಿಮೆ. ಈ ದೇಶದಲ್ಲಿ ಪ್ರಸ್ತುತ ಚಿನ್ನದ ಬೆಲೆ ₹1,13,140 ಆಗಿದ್ದು, ಏಷ್ಯಾದ ಪ್ರಮುಖ ಚಿನ್ನದ ಮಾರುಕಟ್ಟೆಗಳಲ್ಲಿ ಇದೂ ಒಂದು.
ಟರ್ಕಿ: ಟರ್ಕಿಯಲ್ಲಿ ಚಿನ್ನ ಅಂದ್ರೆ ಸಂಸ್ಕೃತಿಯೂ ಹೌದು, ಆರ್ಥಿಕ ಲಾಭವೂ ಹೌದು. ತೆರಿಗೆ ವಿನಾಯಿತಿಯಿಂದಾಗಿ, ಕಡಿಮೆ ಬೆಲೆಯಿಂದಾಗಿ ಟರ್ಕಿ ಚಿನ್ನದ ವ್ಯಾಪಾರಕ್ಕೆ ಭಾರೀ ಜನಪ್ರಿಯ. ಇಲ್ಲಿ ಚಿನ್ನಕ್ಕೆ ₹1,13,040 ರೂಪಾಯಿ ಮೌಲ್ಯವಿದ್ದು, ತೆರಿಗೆ ಕಡಿಮೆಯಿದೆ ಮತ್ತು ಶುದ್ಧೀಕರಣವೂ ತುಂಬಾನೇ ಸೂಕ್ಷ್ಮವಾಗಿದೆ.
ಕುವೈತ್: ಕುವೈತ್‌ನಲ್ಲಿ ಚಿನ್ನದ ಬೆಲೆ ಸದ್ಯ ₹1,13,570 ಆಗಿದೆ. ತೆರಿಗೆ ದೃಷ್ಟಿಯಿಂದ ಮತ್ತು ಕರೆನ್ಸಿ ಮೌಲ್ಯವೂ ಸ್ಥಿರವಾಗಿದೆ. ಇಲ್ಲಿನ ಚಿನ್ನ ಹೆಚ್ಚಿನ ಶುದ್ಧತೆಯಿಂದ ಕೂಡಿರುವುದರಿಂದ, ಚಿನ್ನದ ಮೌಲ್ಯವೂ ಉತ್ತಮವಾಗಿರುತ್ತೆ. ಅಲ್ಲದೇ ಈ ಚಿನ್ನದ ಶುದ್ಧತೆಯನ್ನು ಸರ್ಕಾರ ಪರಿಶೀಲಿಸುತ್ತದೆ.
ಕತಾರ್: ಚಿನ್ನ ಖರೀದಿಸುವವರಿಗೆ ಕತಾರ್ ಕೂಡಾ ಒಳ್ಳೆಯ ಜಾಗ. ಕತಾರ್ ಚಿನ್ನ ಖರೀದಿಯ ವಿಷಯದಲ್ಲಿ ತುಂಬಾನೇ ಜನಪ್ರಿಯ. ಇಲ್ಲಿ ಚಿನ್ನದ ಬೆಲೆ ₹1,14,000 ಆಗಿದ್ದು, ಆಮದು ಸುಂಕ ಕಡಿಮೆ ಮತ್ತು ವ್ಯಾಪಾರದ ಪ್ರಮಾಣ ಹೆಚ್ಚು. ಭಾರತೀಯರಿಗೆ ಚಿನ್ನದ ವ್ಯಾಮೋಹ ಹೆಚ್ಚು, ಆದ್ರೆ ಬೆಲೆ ಏರಿಕೆಯಿಂದಾಗಿ ಚಿನ್ನ ಖರೀದಿಸೋದೆ ಬೇಡಬೆಂಬಂತಾಗಿದೆ. ಒಂದು ವೇಳೆ ನೀವು ಈ ಮೇಲಿನ ಸ್ಥಳಗಳಿಗೆ ಟ್ರಾವೆಲ್ ಪ್ಲಾನ್ ಮಾಡಿದ್ದರೆ, ಖಂಡಿತ ಚಿನ್ನ ಖರೀದಿಸಲು ಬೆಸ್ಟ್ ಟೈಂ.


Click it and Unblock the Notifications