ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ನೀತಿ ಸೃಷ್ಟಿಸಿರುವ ಸಮಸ್ಯೆ ಒಂದೆರಡಲ್ಲ. ಅವರು ವಿಧಿಸಿರುವ ವಿವಿಧ ದೇಶಗಳ ಮೇಲಿನ, ಹೊಸ ವ್ಯಾಪಾರ ಸುಂಕದಿಂದ ಭಾರತಕ್ಕೆ ಹಲವು ರೀತಿಯ ಸಂಕಷ್ಟ ತಂದೊಡ್ಡಿದೆ. ಇದರ ಜೊತೆಗೆ ಈಗ ತೈಲ ಮಾರುಕಟ್ಟೆಯಲೂ ಈ ಸುಂಕ ನೀತಿ ಅಸ್ಥಿರತೆ ಉಂಟು ಮಾಡಿದೆ. ಈ ಹೊಸ ವ್ಯಾಪಾರ ಸುಂಕದ ಘೋಷಣೆಯಿಂದ ಡಾಲರ್ ಮೌಲ್ಯ ಏರಿದರೂ, ನಂತರದ ಸಮಯದಲ್ಲಿ ತೈಲ ಬೆಲೆಗಳು ಕುಸಿದವು.

ಹೌದು, ಟ್ರಂಪ್ ವಿಧಿಸಿದ ಸುಂಕ ನೀತಿಯ ನಿರ್ಧಾರದಿಂದ, ಪ್ರಮುಖ ರಾಷ್ಟ್ರಗಳಾದ ಚೀನಾ, ಯುರೋಪಿಯನ್ ಒಕ್ಕೂಟ ಮತ್ತು ದಕ್ಷಿಣ ಕೊರಿಯಾ ವ್ಯಾಪಾರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ ಈ ರಾಷ್ಟ್ರಗಳೊಂದಿಗೆ ನಡೆಯುವ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಜಾಗತಿಕ ತೈಲ ಬೇಡಿಕೆ ಕುಗ್ಗಬಹುದು ಎಂಬ ಆತಂಕ ಹೆಚ್ಚಾಗಿದೆ. ಕಚ್ಚಾ ತೈಲದ ಪ್ರಮುಖ ಸೂಚ್ಯಂಕಗಳಾದ ಬ್ರೆಂಟ್ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಬೆಲೆಗಳು ಪ್ರಾರಂಭದಲ್ಲಿ ಏರಿಕೆಯಾಗಿವೆ. ಬಳಿಕ ಇವು ಕುಸಿಯಲು ಪ್ರಾರಂಭಿಸಿವೆ. ಬ್ರೆಂಟ್ ತೈಲದ ಬೆಲೆ 0.6% ಏರಿಕೆಯಿಂದ $74.95ಕ್ಕೆ ತಲುಪಿದರೆ, WTI 0.7% ಏರಿಕೆಯಾಗಿ $71.71ಕ್ಕೆ ತಲುಪಿತು.
ಈ ಹೊಸ ಸುಂಕ ನೀತಿಯ ಘೋಷಣೆಯಿಂದಾಗಿ, ತೈಲ ಬೆಲೆಗಳು ಹೆಚ್ಚಿನ ಒತ್ತಡವನ್ನು ಎದುರಿಸುತ್ತವೆ. ಜಾಗತಿಕ ವಹಿವಾಟಿನಲ್ಲಿ ಸುಂಕಗಳ ಪ್ರಮಾಣ ಹೆಚ್ಚಿದರೆ, ಇದು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಬಹುದು, ಹಣದುಬ್ಬರವನ್ನು ಹೆಚ್ಚಿಸಬಹುದು ಮತ್ತು ತೈಲದ ಬೇಡಿಕೆಯನ್ನು ಕುಗ್ಗಿಸಬಹುದು.
ಇತ್ತ ಮೆಕ್ಸಿಕೊ, ಕೆನಡಾ ಮತ್ತು ಇತರ ದೇಶಗಳ ಮೇಲೂ ಈ ಹೊಸ ಸುಂಕಗಳ ನಿರ್ಧಾರದಿಂದ ಜಾಗತಿಕ ತೈಲ ಪೂರೈಕೆ ಸರಪಳಿಯಲ್ಲಿಯೂ ಅನಿಶ್ಚಿತತೆ ಉಂಟಾಗಿದೆ. ಇದಾದ ಪರಿಣಾಮವಾಗಿ, ರಷ್ಯಾ ತನ್ನ ತೈಲ ರಫ್ತು ಮಾರ್ಗಗಳನ್ನು ನಿರ್ಬಂಧಿಸಿದೆ, ಇದು ಜಾಗತಿಕ ಪೂರೈಕೆ ಮೇಲೆ ಮತ್ತಷ್ಟು ಒತ್ತಡ ಉಂಟುಮಾಡಬಹುದು. ಯುಎಸ್ ತೈಲ ದಾಸ್ತಾನುಗಳು ಹೆಚ್ಚಾಗಿರುವುದು ಮತ್ತು ಹೊಸ ಸುಂಕಗಳ ಭೀತಿ ಮಾರುಕಟ್ಟೆ ವಿರುದ್ಧ ಪರಿಣಾಮ ಬೀರುತ್ತವೆ. ಹೂಡಿಕೆದಾರರು ತೈಲ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಹಿನ್ನಡೆ ಅನುಭವಿಸುತ್ತಿದ್ದಾರೆ, ಇದು ಮುಂದಿನ ದಿನಗಳಲ್ಲಿ ಬೆಲೆಗಳಲ್ಲಿ ಹೆಚ್ಚಿನ ಅಸ್ಥಿರತೆಯನ್ನುಂಟುಮಾಡಬಹುದು. ಇದರಿಂದಾಗುವ ಪರಿಣಾಮಗಳೇನು ಎಂಬುದನ್ನು ತಿಳಿಯುವುದಾದರೆ..
1. ಜಾಗತಿಕ ವ್ಯಾಪಾರ ಸಂಬಂಧಗಳ ಬದಲಾವಣೆ:
ಅಮೆರಿಕದ ಹೊಸ ಸುಂಕ ನೀತಿ ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತದೆ. ತನ್ನ ಪ್ರಮುಖ ವ್ಯಾಪಾರ ಪಾಲುದಾರರೊಂದಿಗೆ, ಈ ಹೊಸ ಸುಂಕಗಳು ಸಂಬಂಧ ಬಿಗಡಾಯಿಸುತ್ತಿವೆ. ಭಾರತ, ಯುರೋಪಿಯನ್ ಒಕ್ಕೂಟ, ಚೀನಾ, ದಕ್ಷಿಣ ಕೊರಿಯಾ, ಕೆನಡಾ ಮುಂತಾದ ದೇಶಗಳು ತಮ್ಮ ವ್ಯಾಪಾರ ನೀತಿಗಳನ್ನು ಪುನರ್ ವಿಮರ್ಶೆ ಮಾಡಬಹುದು.
2. ಭಾರತದ ಆರ್ಥಿಕತೆಯ ಮೇಲೆ ಪರಿಣಾಮ:
ಸುಂಕಗಳ ಹೆಚ್ಚಳದಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಬೆಲೆ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳಬಹುದು. ಇದು ಭಾರತದ ರಫ್ತುಮೂಲಕ ಗಳಿಕೆ ಕಡಿಮೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಜಾಗತಿಕ ಹೂಡಿಕೆದಾರರು ಹೊಸ ಸುಂಕ ನೀತಿಯ ಪರಿಣಾಮವಾಗಿ ಮಾರುಕಟ್ಟೆಯ ಬಗ್ಗೆ ಮುನ್ಸೂಚನೆಗಳಿಲ್ಲದೆ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಇದು ಸ್ಟಾಕ್ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಬಹುದು.
3. ಹಣದುಬ್ಬರ ಹೆಚ್ಚಳ:
ಸುಂಕಗಳ ಪರಿಣಾಮವಾಗಿ ನೂರಾರು ಉತ್ಪನ್ನಗಳ ಬೆಲೆ ಹೆಚ್ಚಾಗಬಹುದು, ಇದರಿಂದ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಪ್ರಭಾವಿತಗೊಳಿಸಬಹುದು.
4. ಆಮದು-ರಫ್ತು ಮಾರ್ಗಗಳಲ್ಲಿ ಬದಲಾವಣೆ:
ಭಾರತ ಸೇರಿದಂತೆ ಅನೇಕ ದೇಶಗಳು ಪರ್ಯಾಯ ಮಾರುಕಟ್ಟೆ ಹುಡುಕಲು ಪ್ರಯತ್ನಿಸಬಹುದು. ಇದರಿಂದ ವ್ಯವಹಾರದ ದಿಕ್ಕು ಬದಲಾಗಬಹುದು ಮತ್ತು ನವೀನ ವ್ಯಾಪಾರ ಒಪ್ಪಂದಗಳಿಗೆ ದಾರಿ ತಯಾರಾಗಬಹುದು.


Click it and Unblock the Notifications