ಮಧ್ಯ ಪ್ರಾಚ್ಯದಲ್ಲಿ ಯುದ್ಧ ಭೀತಿ ಕ್ಷಣ ಕ್ಷಣಕ್ಕೂ ಉಲ್ಬಣಿಸ್ತಿದೆ. ಸಾವು ನೋವುಗಳು ಸಂಭವಿಸ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಸಂಘರ್ಷದ ಜ್ವಾಲೆ ಈಗ ತೈಲ ಬೆಲೆಗಳಿಗೂ ತಟ್ಟಿದೆ. ಅಂದರೆ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಮತ್ತೆ ಚರ್ಚೆಗೆ ಬಂದಿದ್ದು, ಇದಕ್ಕೆ ಕಾರಣ ಇರಾನ್ ಮೇಲೆ ನಡೆಯುತ್ತಿರುವ ಇಸ್ರೇಲ್-ಅಮೆರಿಕ ದಾಳಿ ಎನ್ನಲಾಗ್ತಿದೆ.

ಅಮೆರಿಕಾ ಮತ್ತು ಇಸ್ರೇಲ್ ಇರಾನ್ ನಡೆಸುತ್ತಿರೋ ದಾಳಿಯಿಂದ ಗಲ್ಫ್ ಪ್ರದೇಶದಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಅಲ್ಲದೇ ಈ ಪರಿಸ್ಥಿತಿಯಿಂದ ತೈಲ ಪೂರೈಕೆಗೆ ಅಡಚಣೆ ಉಂಟಾಗಬಹುದು ಎಂಬ ನಡುಕ ಹುಟ್ಟಿಸಿದೆ. ಹೀಗಾಗಿ ಇಂದು ಮಾರುಕಟ್ಟೆ ಆರಂಭವಾದ ಕ್ಷಣದಿಂದಲೇ ತೈಲ ಬೆಲೆಗಳು ಏರಿಕೆಯನ್ನು ನೋಡಿವೆ.
ಹೌದು, ಮಾರುಕಟ್ಟೆ ಆರಂಭದ ಕೆಲವೇ ಕ್ಷಣಗಳಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 8% ಹೆಚ್ಚಾಗಿದ್ದು, ಒಂದು ಆತಂಕದ ಸಂಗತಿ. ಅಮೆರಿಕದಲ್ಲಿ ಉತ್ಪಾದನೆಯಾಗುವ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶುಕ್ರವಾರ ಬ್ಯಾರೆಲ್‌ಗೆ ಸುಮಾರು 67 ಡಾಲರ್ ಇತ್ತು. ಆದ್ರೆ ಯುದ್ಧ ಶುರುವಾದ ನಂತರದ ಬೆಲೆ ನಿಜಕ್ಕೂ ಶಾಕಿಂಗ್ ಎನಿಸುತ್ತೆ. ಭಾನುವಾರ ರಾತ್ರಿ ಸುಮಾರು 72 ಡಾಲರ್ ಮಟ್ಟಕ್ಕೆ ಏರಿದೆ. ಈ ತೀವ್ರ ಏರಿಕೆಗೆ ಮಧ್ಯಪ್ರಾಚ್ಯದಲ್ಲಿನ ದಾಳಿಗಳು ಮತ್ತು ಸೇನಾ ಚಟುವಟಿಕೆಗಳೇ ಪ್ರಮುಖ ಕಾರಣವೆಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.
ಜಾಗತಿಕ ತೈಲ ಸಾಗಾಟದಲ್ಲಿ ಅತ್ಯಂತ ಪ್ರಮುಖವಾದ ಹಾರ್ಮುಜ್ ಜಲಸಂಧಿ ಮತ್ತೆ ಚರ್ಚೆಗೆ ಬಂದಿದೆ. ಪರ್ಷಿಯನ್ ಕೊಲ್ಲಿಯ ಈ ಕಿರಿದಾದ ಸಮುದ್ರ ಮಾರ್ಗದ ಮೂಲಕ ದಿನಕ್ಕೆ ಸರಾಸರಿ 15 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಾಗುತ್ತದೆ. ಇದು ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು 20 ಶೇಕಡಾ ಎಂದು ಅಂದಾಜಿಸಲಾಗಿದೆ. ಸೌದಿ ಅರೇಬಿಯಾ, ಕುವೈತ್, ಇರಾಕ್, ಕತಾರ್, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇರಾನ್ ದೇಶಗಳ ತೈಲ ಮತ್ತು ಅನಿಲ ರಫ್ತು ಬಹುಪಾಲು ಈ ಮಾರ್ಗದ ಮೇಲೆ ಅವಲಂಬಿತವಾಗಿದೆ. ಈ ಪ್ರದೇಶದಲ್ಲಿ ಎರಡು ಹಡಗುಗಳ ಮೇಲೆ ನಡೆದ ದಾಳಿಗಳು ಹಾಗೂ ಸುರಕ್ಷತೆ ಬಗ್ಗೆ ಹೆಚ್ಚಿದ ಆತಂಕದಿಂದ ಸಾಗಾಟಕ್ಕೆ ಅಡಚಣೆ ಉಂಟಾಗುವ ಭೀತಿ ಮೂಡಿದೆ.
ಇರಾನ್ ಪ್ರತಿದಿನ ಸರಾಸರಿ 1.6 ಮಿಲಿಯನ್ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತದೆ. ಇದರ ಬಹುಪಾಲು ಚೀನಾಕ್ಕೆ ಸಾಗುತ್ತದೆ. ಇರಾನ್ ರಫ್ತು ಕಡಿಮೆಯಾದರೆ ಅಥವಾ ಸ್ಥಗಿತಗೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಕೊರತೆ ಉಂಟಾಗಬಹುದು. ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆಗಳು ಮತ್ತಷ್ಟು ಏರಬಹುದು.
ಈ ಹಿನ್ನೆಲೆದಲ್ಲಿ OPEC ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟದ ಎಂಟು ದೇಶಗಳು ಉತ್ಪಾದನೆ ಹೆಚ್ಚಿಸುವ ನಿರ್ಧಾರ ಕೈಗೊಂಡಿವೆ. ಏಪ್ರಿಲ್ ತಿಂಗಳಲ್ಲಿ ದಿನಕ್ಕೆ ಸುಮಾರು 206,000 ಬ್ಯಾರೆಲ್ ಹೆಚ್ಚುವರಿ ಉತ್ಪಾದನೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಉತ್ಪಾದನೆ ಹೆಚ್ಚಿಸುವ ದೇಶಗಳಲ್ಲಿ ಸೌದಿ ಅರೇಬಿಯಾ, ರಷ್ಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಕಝಾಕಿಸ್ತಾನ್, ಅಲ್ಜೀರಿಯಾ ಮತ್ತು ಒಮಾನ್ ಸೇರಿವೆ. ವಿಶ್ಲೇಷಕರ ಅಭಿಪ್ರಾಯದಲ್ಲಿ, ಉತ್ಪಾದನೆ ಹೆಚ್ಚಿಸುವುದು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಾಯಕವಾಗಬಹುದು. ಆದರೆ ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟಕ್ಕೆ ಅಡ್ಡಿ ಮುಂದುವರಿದರೆ, ಹೆಚ್ಚುವರಿ ಉತ್ಪಾದನೆಯಿಂದ ಮಾತ್ರ ತಕ್ಷಣದ ಪರಿಹಾರ ದೊರಕುವುದು ಕಷ್ಟ.
ಒಟ್ಟಿನಲ್ಲಿ, ದಿನಕ್ಕೆ 15 ಮಿಲಿಯನ್ ಬ್ಯಾರೆಲ್ ತೈಲ ಸಾಗುವ ಪ್ರಮುಖ ಸಮುದ್ರ ಮಾರ್ಗದ ಸುರಕ್ಷತೆ ಜಾಗತಿಕ ಇಂಧನ ಮಾರುಕಟ್ಟೆಗೆ ಅತ್ಯಂತ ಮುಖ್ಯವಾಗಿದೆ. 8 ಶೇಕಡಾ ಬೆಲೆ ಏರಿಕೆ, 67 ಡಾಲರ್‌ನಿಂದ 72 ಡಾಲರ್‌ಗೆ ನಡೆದ ಏರಿಕೆ, 1.6 ಮಿಲಿಯನ್ ಬ್ಯಾರೆಲ್ ಇರಾನ್ ರಫ್ತು ಮತ್ತು 206,000 ಬ್ಯಾರೆಲ್ ಹೆಚ್ಚುವರಿ ಉತ್ಪಾದನೆ ಎಲ್ಲವೂ ಸಂಖ್ಯೆಗಳು ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತವೆ. ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ತೈಲ ಬೆಲೆಗಳ ದಿಕ್ಕು ನಿರ್ಧಾರವಾಗಲಿದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications